

ಕೊಟ್ಟೂರು: ಕೋಗಳಿಯ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘದಲ್ಲಿ ಸೂರ್ಯಕಾಂತಿ ಬೆಳೆದ ರೈತರು ಸರ್ಕಾರದ ಬೆಂಬಲ ಬೆಲೆಗೆ ಮಾರಾಟ ಮಾಡಲು ತಮ್ಮ ಹೆಸರನ್ನು ದಾಖಲಿಸಲು ಅಲೆದಾಡುತ್ತಿದ್ದಾರೆ.
ಅ.4ರಿಂದ ನೋಂದಣಿ ಆರಂಭವಾಗಿತ್ತು. ಆದರೆ, ಸರ್ಕಾರ ಲಾಗಿನ್ ನಿಲ್ಲಿಸಿದ್ದಕ್ಕೆ ಅ.8ಕ್ಕೆ ನೋಂದಣಿ ನಿಲ್ಲಿಸಲಾಗಿದೆ. ಇಂದಿನವರೆಗೂ ಲಾಗಿನ್ ಓಪನ್ ಆಗಿಲ್ಲ. ಈ ನಾಲ್ಕು ದಿನದ ಅವಧಿಯಲ್ಲಿ ಕೇವಲ 36 ರೈತರಷ್ಟೇ ನೋಂದಾಯಿಸಿದ್ದಾರೆ. ತಾಲೂಕಿನಲ್ಲಿ ನೂರಾರು ರೈತರು ಸೂರ್ಯಕಾಂತಿ ಬೆಳೆದಿದ್ದು, ನಿತ್ಯವೂ ಲಾಗಿನ್ ಓಪನ್ ಆಗಿದೆಯಾ ಎಂಬ ಪ್ರಶ್ನೆಗೆ ಸಹಕಾರ ಸಂಘದ ಸಿಬ್ಬಂದಿಯಿಂದ ಇಲ್ಲವೆಂಬ ಉತ್ತರ ಬರುತ್ತಿದೆ.
ತಾಲೂಕಿನಲ್ಲಿ ಕೋಗಳಿ ಎಣ್ಣೆ ಬೀಜ ಬೆಳೆಗಾರರ ಸಂಘ ಹೊರತು ಪಡಿಸಿ ಬೇರೆಲ್ಲು ಸಂಘವಿಲ್ಲ. ಕಳೆದ ವರ್ಷ ಇದೇ ಸಂಘದಲ್ಲಿ ಹೆಸರು ನೋಂದಾಯಿತಿ ಬೆಂಬಲ ಬೆಲೆಗೆ ಮಾರಾಟ ಮಾಡಿದ್ದರು.
ಪ್ರಸ್ತುತ ವರ್ಷ ಕೋಗಳಿ ಎಣ್ಣೆ ಬೆಳೆಗಾರರ ಸಹಕಾರ ಸಂಘವನ್ನು ತಪ್ಪಿಸಿ ಹಡಗಲಿ ತಾಲೂಕು ಇಟಗಿ ಗ್ರಾಮದ ಎಣ್ಣೆ ಬೆಳೆಗಾರರ ಸಂಘದಲ್ಲಿ ಹೆಸರು ನೋಂದಾಯಿಸಿ ಮಾರಾಟ ಮಾಡಬಹುದು ಎಂದು ನಿಗಮ ಆದೇಶ ನೀಡಿತ್ತು. ಈ ಆದೇಶದ ವಿರುದ್ಧ ಹಾಗೂ ತಾಲೂಕಿನ ಸೂರ್ಯಕಾಂತಿ ಬೆಳೆಗಾರರ ಸಮಸ್ಯೆ ಕುರಿತು ವಿಜಯವಾಣಿಯಲ್ಲಿ ಸೆ.21 ರಂದು ‘ಕೊಟ್ಟೂರಿನಲ್ಲಿ ಶುರುವಾಗದ ಖರೀದಿ ಕೇಂದ್ರ’ ಸುದ್ದಿ ಪ್ರಕಟವಾಗಿತ್ತು. ಆಗ ಕೋಗಳಿ ಎಣ್ಣೆ ಬೆಳೆಗಾರರ ಸಹಕಾರ ಸಂಘದಲ್ಲಿ ಕೋಗಳಿಯೂ ಸೇರಿದಂತೆ ತಾಲೂಕಿನ ರೈತರು ಹೆಸರು ನೋಂದಾಯಿಸಬುಹುದು ಎಂದು ಡಿಸಿ ಆದೇಶ ನೀಡಿದ್ದರು. ಆದರೆ, ನಾಲ್ಕೇ ದಿನ ಮಾತ್ರ ನೋಂದಾಯಿಸಲು ಅವಕಾಶ ನೀಡಿ, ನಂತರ ಲಾಗಿನ್ ಓಪನ್ ಆಗದ ಕಾರಣ ಬೆಳೆಗಾರರು ಚಿಂತಿತರಾಗಿದ್ದಾರೆ.