ಸೂರ್ಯಕಾಂತ ನಾಗಮಾರಪಳ್ಳಿ ಸ್ಪರ್ಧೆ ಖಚಿತ

Nagmarpalli meeting - Copy
Published on

ಬೀದರ್: ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಅವರಿಗೆ ಬೀದರ್ ವಿಧಾನಸಭೆ ಕ್ಷೇತ್ರದ ಟಿಕೆಟ್ ಕೊಡದ್ದಕ್ಕೆ ಬಿಜೆಪಿ ಕಾರ್ಯಕರ್ತರು ಹಾಗೂ ನಾಗಮಾರಪಳ್ಳಿ ಬೆಂಬಲಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಇಲ್ಲಿಯ ಮಾಧವನಗರದ ಸೂರ್ಯಕಾಂತ ನಾಗಮಾರಪಳ್ಳಿ ಅವರ ಕಚೇರಿ ಬಳಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಕಾರ್ಯಕರ್ತರು ಹಾಗೂ ಬೆಂಬಲಿಗರು ಬಿಜೆಪಿ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ನಾಗಮಾರಪಳ್ಳಿ ಅವರು ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆಯನ್ನು ಬೇರು ಮಟ್ಟದಿಂದ ಗಟ್ಟಿಗೊಳಿಸಿದ್ದಾರೆ. ಸರ್ಕಾರದ ಜನಕಲ್ಯಾಣ ಯೋಜನೆಗಳನ್ನು ಅರ್ಹರ ಮನೆ ಬಾಗಿಲಿಗೆ ತಲುಪಿಸಿದ್ದಾರೆ. ನಿರಂತರ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕ್ಷೇತ್ರದ ಜನರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಬಿಜೆಪಿ ಅವರಿಗೆ ಟಿಕೆಟ್ ಕೊಡದೆ ಮೋಸ ಮಾಡಿದೆ. ಚುನಾವಣೆಯಲ್ಲಿ ಮತದಾರರು ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

ಸೂರ್ಯಕಾಂತ ನಾಗಮಾರಪಳ್ಳಿ ಅವರು ವಿಚಲಿತರಾಗಬೇಕಿಲ್ಲ. ಇಡೀ ಕ್ಷೇತ್ರದ ಜನ ಅವರ ಹಿಂದೆ ಇದ್ದಾರೆ. ಈ ಬಾರಿ ಸೂರ್ಯಕಾಂತ ಅವರ ಗೆಲುವನ್ನು ಯಾರೂ ತಡೆಯಲಾಗದು. ಸೂರ್ಯಕಾಂತ ಅವರು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿಯಬೇಕು ಎಂದು ಧರಣಿ ಕುಳಿತು, ಪಟ್ಟು ಹಿಡಿದರು.

ಸ್ಥಳಕ್ಕೆ ಭೇಟಿ ನೀಡಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಅವರು, ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು. ಸೂರ್ಯಕಾಂತ ಚುನಾವಣೆಗೆ ಸ್ಪರ್ಧೆಸುವುದು ಖಚಿತ. ಈ ಬಗ್ಗೆ ಯಾವುದೇ ಗೊಂದಲ ಬೇಡ. ಸದ್ಯ ಅವರು ಬೆಂಗಳೂರಿನಲ್ಲಿ ಇದ್ದಾರೆ. ಬೀದರ್ ಗೆ ಬಂದ ನಂತರ ಕಾರ್ಯಕರ್ತರು, ಬೆಂಬಲಿಗರು ಹಾಗೂ ಎಲ್ಲ ಸಮಾಜದ ಮುಖಂಡರ ಸಭೆ ನಡೆಸಿ, ಎಲ್ಲರ ಅಭಿಪ್ರಾಯದ ಮೇರೆಗೆ ಮುಂದಿನ ನಡೆಯ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಬೆಂಬಲಿಗರು ಯಾವುದೇ ಕಾರಣಕ್ಕೂ ದುಡುಕಬಾರದು. ಶಾಂತತೆ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದರು.

ಮುಖಂಡರಾದ ಬಾಲಾಜಿ ಚವ್ಹಾಣ್, ಝರೆಪ್ಪ ಮಮದಾಪುರ, ವೀರಶೆಟ್ಟಿ ಪಟ್ನೆ, ಮಹಾದೇವ ಪಾಟೀಲ್ ಅಲಿಯಂಬರ್, ಸಿದ್ದೋಬಾ ಲೌಟೆ, ಮಾರ್ಟಿನ್, ವೈಜಿನಾಥ ಚಿಕ್ಕಪೇಟೆ, ಜಿಶಾನ್, ನಂದಕುಮಾರ ಜೋಶಿ, ಭೀಮರಾವ್ ಪಾಟೀಲ್ ಡಿಗ್ಗಿ, ಶಿವಕುಮಾರ ಹಂಗರಗಿ, ಖಲೀಲ್ಮಿಯ ಮರಕಲ್, ಕಲ್ಯಾಣರಾವ್ ಬೋರ್ವೆಲ್, ಶಾಂತಕುಮಾರ ಗೌರಶೆಟ್ಟಿ ಮೊದಲಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net