

ಚಿತ್ರದುರ್ಗ: ರಥಸಪ್ತಮಿ ಕುರಿತು ಪುರಾಣ ಹಾಗೂ ವೈಜ್ಞಾನಿಕ ಉಲ್ಲೇಖಗಳು ಉಂಟೆಂದು ಯೋಗಾಚಾರ‌್ಯ ಎಲ್.ಎಸ್. ಚಿನ್ಮಯಾನಂದ ಹೇಳಿದರು.
ಜಿಲ್ಲಾ ಯೋಗ ಸಂಸ್ಥೆ, ಚಿತ್ರದುರ್ಗ ರೋಟರಿ ಕ್ಲಬ್‌ಫೋರ್ಟ್, ಇನ್ನರ್‌ವೀಲ್ ಕ್ಲಬ್ ಫೋರ್ಟ್ ಹಾಗೂ ಚಿತ್ರದುರ್ಗ ವೀರಶೈವ ಸಮಾಜ ಇವುಗಳ ಆಶ್ರಯದಲ್ಲಿ ನಗರದ ನೀಲಕಂಠೇಶ್ವರ ಸ್ವಾಮಿ ಸಮುದಾಯ ಭವನದಲ್ಲಿ ಬುಧವಾರ ಬೆಳಗ್ಗೆ ರಥಸಪ್ತಮಿ ಪ್ರಯುಕ್ತ ಹಮ್ಮಿಕೊಂಡಿದ್ದ 108 ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತ ಸೇರಿ ಜಗತ್ತಿನ ಅನೇಕ ಕಡೆಗಳಲ್ಲಿ ರಥಸಪ್ತಮಿ ಆಚರಿಸಲಾಗುತ್ತದೆ. ಸೂರ್ಯ ಆರೋಗ್ಯದಾತ, ರೋಗ ನಿವಾರಕನೆಂದು ವೇದ, ಪುರಾಣಗಳೂ ಸಾರಿವೆ. ಸರ್ವವ್ಯಾಧಿಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಜನರಲ್ಲಿದೆ. ವಿಶೇಷವಾಗಿ ಯೋಗ ಸಾಧಕರು 108 ರ್ಸೂ ನಮಸ್ಕಾರಗಳನ್ನು ಸಾಮೂಹಿಕವಾಗಿ ಆಚರಿಸುತ್ತಾರೆ ಎಂದರು.
ಜಿಲ್ಲಾ ಯೋಗ ಸಂಸ್ಥೆ ಅಧ್ಯಕ್ಷ ಎಸ್.ಜಿ. ರಂಗನಾಥ್ ಮಾತನಾಡಿ, ನಮ್ಮಲ್ಲಿರುವ ಅಂತಃಶಕ್ತಿಯನ್ನು ಅರಿಯಲು, ಉದ್ದೀಪನಗೊಳಿಸಲು ಯೋಗ ಸಹಕಾರಿ ಎಂದರು.
ಇನ್ನರ್‌ವೀಲ್ ಕ್ಲಬ್‌ಪೋರ್ಟ್ ಅಧ್ಯಕ್ಷೆ ಲಕ್ಷ್ಮೀಮಹೇಶ್ ಮಾತನಾಡಿದರು. ಶಂಭುಲಿಂಗಪ್ಪ ಪ್ರಾರ್ಥಿಸಿದರು. ಸಂಪತ್‌ಕುಮಾರ್ ಸ್ವಾಗತಿಸಿದರು. ಟಿ. ವೀರಭದ್ರಸ್ವಾಮಿ ವಂದಿಸಿದರು. ನಳಿನಾಕ್ಷಿ ನಿರೂಪಿಸಿದರು.