ಸೂಯೇಜ್ ಫಾರ್ಮ್ ತ್ಯಾಜ್ಯದ ಸಮಸ್ಯೆಗೆ ವರ್ಷದೊಳಗೆ ಮುಕ್ತಿ : ಶಾಸಕ ಎಸ್.ಎ. ರಾಮದಾಸ್

RAMDAS_1451878g - Copy
Published on

ಮೈಸೂರು: ಮುಂದಿನ ಒಂದು ವರ್ಷದಲ್ಲಿ ಸೂಯೇಜ್ ಫಾರ್ಮ್ ತ್ಯಾಜ್ಯದ ಸಮಸ್ಯೆಗೆ ಮುಕ್ತಿ ದೊರೆಯಲಿದೆ ಎಂದು ಶಾಸಕ ಎಸ್.ಎ. ರಾಮದಾಸ್ ಹೇಳಿದರು.

ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 63ನೇ ವಾರ್ಡ್‌ನ ಜೆಪಿ ನಗರದ ಗೊಬ್ಬಳಿ ಮರದ ಬಳಿ ಇರುವ ಚಾಮುಂಡೇಶ್ವರಿ ದೇವಸ್ಥಾನದ ಬಳಿ ಗುರುವಾರ ಆಯೋಜಿಸಲಾಗಿದ್ದ ಯೋಗಕ್ಷೇಮ ಕಾರ್ಯಕ್ರಮದಲ್ಲಿ ಮಾತನಾಡಿ, ದಶಕಗಳ ಕಾಲದಿಂದ ಸೂಯೇಜ್ ಫಾರ್ಮ್‌ನಲ್ಲಿ ತ್ಯಾಜ್ಯ ಸಂಗ್ರಹವಾಗಿ ಸುತ್ತಮುತ್ತಲಿನ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ನಂತರ ನಡೆದ ಪ್ರಯತ್ನದ ಫಲವಾಗಿ ಪ್ರಧಾನಿ ನರೇಂದ್ರ ಮೋದಿ 56 ಕೋಟಿ ರೂ. ಅನುದಾನ ನೀಡಿದ್ದಾರೆ. ಪರಿಣಾಮ, ಮುಂದಿನ ಒಂದು ವರ್ಷದೊಳಗೆ ಇಡೀ ಕಸ ಸಿಮೆಂಟ್ ಕಾರ್ಖಾನೆಗೆ ಹೋಗಲಿದೆ. ಮಾತ್ರವಲ್ಲ, ಇದೇ ತಿಂಗಳು ಕೆಸರೆ ಬಡಾವಣೆಯ ಪ್ಲಾಂಟ್ ಕಾರ್ಯಾರಂಭ ಮಾಡಲಿದೆ. ನಂತರದ ಕೆಲ ದಿನಗಳಲ್ಲಿ ರಾಯನಕೆರೆ ಪ್ಲಾಂಟ್ ಆರಂಭವಾಗಲಿದೆ ಎಂದು ಹೇಳಿದರು.

ಇಡೀ ಕ್ಷೇತ್ರದಲ್ಲಿ ನಾನಾ ಕಾಮಗಾರಿಗಳಿಗೆ ಏಕಕಾಲಕ್ಕೆ ಚಾಲನೆ ನೀಡಲಾಗಿದ್ದು, ಮಾರ್ಚ್ ಅಂತ್ಯದ ವೇಳೆಗೆ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿರುವ 482 ಕಿ.ಮೀ. ರಸ್ತೆಗಳು ಸಂಪೂರ್ಣವಾಗಿ ಡಾಂಬರೀಕರಣವಾಗಲಿದೆ. ಮಾತ್ರವಲ್ಲ, ಒಳಚರಂಡಿ ಮತ್ತು ಮಳೆ ನೀರು ಹರಿಯುವ ಚರಂಡಿ ವ್ಯವಸ್ಥೆಯನ್ನು ಸರಿಪಡಿಸಲಾಗುತ್ತಿದೆ ಎಂದರು.

ಕ್ಷೇತ್ರವನ್ನು ಅಪಘಾತ ಮುಕ್ತ ವಲಯವಾಗಿ ಮಾಡುವ ನಿಟ್ಟಿನಲ್ಲಿ ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಕ್ಷೇತ್ರ ಇತಿಹಾಸದಲ್ಲಿ ಈ ಪ್ರಮಾಣದ ಕಾಮಗಾರಿ ಯಾವ ವೇಳೆಯಲ್ಲೂ ಆಗಿಲ್ಲ. ನಾವು ಇಲ್ಲಿ ಎಷ್ಟು ದಿನ ಇರಲು ಸಾಧ್ಯ? ನಮ್ಮ ನಂತರದಲ್ಲೂ ಈ ಕ್ಷೇತ್ರ ಮಾದರಿಯಾಗಿ ಇರಬೇಕು ಎಂಬ ಕಾರಣಕ್ಕಾಗಿ ಅತ್ಯಂತ ವ್ಯವಸ್ಥಿತವಾಗಿ ಎಲ್ಲ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

34 ಕೋಟಿ ರೂ.ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, 584 ಬೋರ್ವೆಲ್ಗಳನ್ನು ಇನ್ನೊಂದು ತಿಂಗಳಲ್ಲಿ ಸ್ಥಗಿತಗೊಳಿಸಿ ಇಡೀ ಕ್ಷೇತ್ರಕ್ಕೆ ಕಾವೇರಿ ಹಾಗೂ ಕಬಿನಿ ನೀರು ನೀಡಲಾಗುವುದು. 120 ಉದ್ಯಾನಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. 13 ಸ್ಮಶಾನಗಳ ಅಭಿವೃದ್ಧಿ ಕಾರ್ಯ ಭರದಿಂದ ಸಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ನೂರಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅಂತಹ ಯೋಜನೆಗಳ ಪೈಕಿ ನನಗೆ ಅತಿ ಇಷ್ಟವಾದ ಯೋಜನೆಯೆಂದರೆ ಮಾತೃವಂದನಾ ಯೋಜನೆ. ಇಡೀ ದೇಶದಲ್ಲಿ ಮೊದಲ ಬಾರಿಗೆ ಈ ಯೋಜನೆ ಜಾರಿಯಾಗಿದ್ದು ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ. ಆ ಕಾರಣಕ್ಕಾಗಿಯೇ ಮೈಸೂರಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿಯವರು ನನಗೆ ಬೆನ್ನಿನ ಮೇಲೆ ಗುದ್ದಿ ಒಳ್ಳೆಯ ಕೆಲಸ ಮಾಡುತ್ತಿದ್ದೀಯ ಮತ್ತಷ್ಟು ಒಳ್ಳೆಯ ಕೆಲಸ ಮಾಡು ಎಂದು ಹುರಿದುಂಬಿಸಿದರು. ಅದರ ಪರಿಣಾವೇ ಇಂದು ನಮ್ಮ ಕ್ಷೇತ್ರದಲ್ಲಿ 9200 ಗರ್ಭಿಣಿಯರು ಈ ಯೋಜನೆಯ ಫಲ ಪಡೆದಿದ್ದಾರೆ. 9200 ಗರ್ಭಿಣಿ ಮಹಿಳೆಯರಿಗೆ ಅಣ್ಣನ ಸ್ಥಾನದಲ್ಲಿ ನಿಂತು ಮಡಿಲು ತುಂಬುವ ಸೌಭಾಗ್ಯ ನನ್ನ ಪಾಲಿಗೆ ದೊರೆಯಿತು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net