ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ 54 ಕೋಟಿ ರೂ. ಬಿಡುಗಡೆ ಕ್ರಮ:ಸಚಿವ ಶರಣ ಪ್ರಕಾಶ್ ಪಾಟೀಲ್ ಭರವಸೆ

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ 54 ಕೋಟಿ ರೂ. ಬಿಡುಗಡೆ ಕ್ರಮ:ಸಚಿವ ಶರಣ ಪ್ರಕಾಶ್ ಪಾಟೀಲ್ ಭರವಸೆ
Published on

ಹಾಸನ: ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಇನ್ನು 54 ಕೋಟಿ ರೂ. ಅನುದಾನ ಬೇಕಾಗಿದ್ದು, ಈ ಬಗ್ಗೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಉನ್ನತ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು.
ನಗರದ ಹಿಮ್ಸ್ ಸಭಾಂಗಣದಲ್ಲಿ ಶನಿವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗಾಗಲೇ ಮೊದಲ ಹಂತದಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ನಡೆದಿದೆ. ಇದು ಆರಂಭವಾಗಬೇಕಾದರೆ ಅದಕ್ಕೆ ಪೀಠೋಪಕರಣ ಮತ್ತು ಇನ್ನಿತರ ಮೂಲಭೂತ ಸೌಕರ್ಯಗಳಿಗಾಗಿ 54 ಕೋಟಿ ರೂ. ಅನುದಾನ ಬೇಕಾಗಿದ್ದು ಈ ಬಗ್ಗೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಒಟ್ಟು ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಈ ಹಿಂದಿನ ಸರ್ಕಾರದಲ್ಲಿ ಪೂರ್ಣ ಯೋಜನೆಯನ್ನು ಸರಿಯಾಗಿ ಹಾಕಿಕೊಳ್ಳದ ಹಿನ್ನೆಲೆಯಲ್ಲಿ ಕಾಮಗಾರಿ ಅಪೂರ್ಣವಾಗಿದೆ. ಈಗ ಕೇವಲ ಎರಡು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲಾಗಿದೆ. ಉಳಿದ ಕಟ್ಟಡ ಕಾಮಗಾರಿಯ ಬಗ್ಗೆ ಚರ್ಚೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು
ಜಿಲ್ಲೆಯಲ್ಲಿ 450 ಹಾಸಿಗೆ ಸಾಮರ್ಥ್ಯವುಳ್ಳ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಕಳೆದ ಮಾರ್ಚ್ ತಿಂಗಳಿನಲ್ಲಿ ಮುಖ್ಯಮಂತ್ರಿಗಳು ಉದ್ಘಾಟನೆ ಮಾಡಿದ್ದಾರೆ. ಅಲ್ಲಿಗೂ ಉಪಕರಣ ಮತ್ತು ಇನ್ನಿತರ ಸೌಲಭ್ಯಗಳಿಗಾಗಿ ಅನುದಾನದ ಅವಶ್ಯಕತೆ ಇದ್ದು ಅದನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಹಾಸನ ವೈದ್ಯಕೀಯ ಸಂಸ್ಥೆಗಳ ನಿರ್ದೇಶಕರ ಬದಲಾವಣೆ ಕುರಿತಂತೆ ಮಾತನಾಡಿದ ಸಚಿವರು, ನಿರ್ದೇಶಕರಾಗಿದ್ದವರ ಮೇಲೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸಮಿತಿ ರಚಿಸಿ ತನಿಖೆ ನಡೆಸಲಾಗಿದ್ದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅವರ ಬದಲಾವಣೆ ಮಾಡಲಾಗಿದೆ. ಈಗ ನೇಮಕ ಮಾಡಿರುವವರು ಕೂಡ ಪ್ರಭಾರ ಹುದ್ದೆಯಲ್ಲಿ ಇದ್ದಾರೆ. ಶೀಘ್ರದಲ್ಲೇ ಕಾಯಂ ನಿರ್ದೇಶಕರನ್ನು ನೇಮಕ ಮಾಡಲಾಗುವುದೆಂದು ಹೇಳಿದರು.
ಜಿಲ್ಲೆಯಲ್ಲಿ ಡೆಂೆ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಾನು ನಾಲ್ಕು ಜಿಲ್ಲೆಗಳ ಮೆಡಿಕಲ್ ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಇಂದು ಹಾಸನಕ್ಕೂ ಕೂಡ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದೇನೆ. ಇದರ ಬಗ್ಗೆ ಯಾರು ಕೂಡ ನಿರ್ಲಕ್ಷೃ ಮಾಡದೆ ಎಚ್ಚರಿಕೆಯಿಂದ ಕೆಲಸ ಮಾಡುವಂತೆ ನಿರ್ದೇಶನ ನೀಡಿದ್ದೇನೆ. ಅಲ್ಲದೆ ಡೆಂೆ ರೋಗದ ಬಗ್ಗೆ ಸರ್ಕಾರ ಎಚ್ಚರಿಕೆ ಮತ್ತು ನಿಗಾ ವಹಿಸಿದೆ ಎಂದು ಹೇಳಿದರು.
ಈಗಾಗಲೇ ಹಿಮ್ಸ್ ನಲ್ಲಿ 62 ಪಿಜಿ ಕೋರ್ಸುಗಳು ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ರಾಜ್ಯದ ಯಾವ ಕಾಲೇಜುಗಳಲ್ಲಿ ಪಿಜಿ ಕೋರ್ಸ್ ಆರಂಭವಾಗಿಲ್ಲ ಅಲ್ಲಿ ಪಿಜಿ ಕೋರ್ಸ್‌ಗಳನ್ನು ಆರಂಭಿಸಲಾಗುವುದು ಮತ್ತು ಹೆಚ್ಚುವರಿಯಾಗಿ ಯಾವ ಕಾಲೇಜಿನಲ್ಲಿ ಪಿಜಿ ಕೋರ್ಸ್‌ಗಳನ್ನು ನೀಡಬಹುದು ಅಲ್ಲಿ ಆರಂಭಿಸಲಾಗುವುದು ಹಾಗೆಯೇ, ರಾಜ್ಯದಲ್ಲಿ ರಾಮನಗರ ಮತ್ತು ಕನಕಪುರಕ್ಕೆ ಹೊಸ ಮೆಡಿಕಲ್ ಕಾಲೇಜು ಸ್ಥಾಪನೆಗೆ ಪ್ರಸ್ತಾವನೆ ಬಂದಿದ್ದು ಇನ್ನು ಅಂತಿಮವಾಗಿಲ್ಲ. ಈ ವರ್ಷ ಯಾವುದೇ ಕಾಲೇಜು ಸ್ಥಾಪನೆಗೆ ಅವಕಾಶವಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಹಿಮ್ಸ್ ಆಸ್ಪತ್ರೆಗೆ ಒಟ್ಟು 16 ಸಹಾಯಕ ಪ್ರಾಧ್ಯಾಪಕ ಹುದ್ದೆ ಖಾಲಿ ಇದ್ದು ಇದನ್ನು ನೇಮಕ ಮಾಡಿಕೊಳ್ಳುವ ಸಂಬಂಧ ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು. ಇನ್ನುಳಿದಂತೆ 16 ಎನ್‌ಎಂಸಿ ಹುದ್ದೆಗಳು ಖಾಲಿ ಉಳಿದಿದ್ದು ಅವುಗಳನ್ನು ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ಅನುಮತಿ ಸಿಕ್ಕ ನಂತರ ನೇಮಕಾತಿ ಮಾಡಿಕೊಳ್ಳಲಾಗುವುದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್, ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕಿ ಸುಜಾತಾ ರಾಥೋಡ್, ಹಿಮ್ಸ್ ನಿರ್ದೇಶಕ ಡಾ. ಬಿ.ರಾಜಣ್ಣ, ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಸಿ.ರವಿಕುಮಾರ್, ಹಿಮ್ಸ್ ಆಡಳಿತ ಅಧಿಕಾರಿ ಸುರೇಖಾ, ಡಾ. ರಾಘವೇಂದ್ರ ಸೇರಿದಂತೆ ಇತರರು ಇದ್ದರು.

ಬಿಜೆಪಿ ಸರ್ಕಾರದಲ್ಲೇ ಸೈಟ್ ಮಂಜೂರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಜಮೀನನ್ನು ವಶಪಡಿಸಿಕೊಂಡು ಅವರಿಗೆ ಬದಲಿ ಸೈಟ್ ನೀಡಲಾಗಿದೆ. ಈ ಬಗ್ಗೆ ಸಿದ್ದರಾಮಯ್ಯ ಅವರು ಕೂಡ ಸ್ಪಷ್ಟನೆ ನೀಡಿದ್ದಾರೆ. ಆದರೂ ಕೂಡ ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಹೊಂದಾಣಿಕೆಯಿಂದಲೇ ಕೆಲಸ ಮಾಡುತ್ತಿದ್ದಾರೆ ಎಂದು ಉನ್ನತ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಹೇಳಿದರು.
ವಿರೋಧ ಪಕ್ಷದವರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ವಿನಾಃಕಾರಣ ನಮ್ಮ ಸರ್ಕಾರದ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದ್ದು, ಜನಪರ ಮತ್ತು ಅಭಿವೃದ್ಧಿ ಪರವಾಗಿ ಕೆಲಸ ಮಾಡುತ್ತಿದೆ. ಗ್ಯಾರೆಂಟಿ ಎಂಬುದು ಸರ್ಕಾರದ ಬದ್ಧತೆ. ಅದನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಮುಂದುವರಿಸಲಾಗುವುದು ಸರ್ಕಾರ ಪಾರದರ್ಶಕವಾಗಿ ಜನಪರವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net