ಸೂಪರ್ ಕಾಪ್ ಗೆ ರಾಷ್ಟ್ರಪತಿ ಪ್ರಶಸ್ತಿ ಗೌರವ

sandeep patil
Published on

ಬೀದರ್: ದಕ್ಷ, ಪ್ರಾಮಾಣಿಕ ಸೇವೆ ಮೂಲಕ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ವಿಶಿಷ್ಟ ಛಾಪು ಮೂಡಿಸಿಕೊಂಡಿರುವ ಬೀದರ್ ಮೂಲದ ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್ ಅವರು ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ರಾಷ್ಟ್ರಪತಿ ಪದಕಕ್ಕೆ ಪಾಟೀಲ್ ಅವರನ್ನು ಆಯ್ಕೆ ಮಾಡಿದೆ. ಬೀದರ್ ಮೂಲದ ಹಿರಿಯ ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದಕರ್ ಅವರಿಗೆ ಈ ಹಿಂದೆ ರಾಷ್ಟ್ರಪತಿ ಪ್ರಶಸ್ತಿ ದೊರಕಿತ್ತು. ಇದಾದ ಬಳಿಕ ಇದೀಗ ಬೆಂಗಳೂರಿನಲ್ಲಿ ಕೆಎಸ್ಆರ್.ಪಿ ಐಜಿಯಾಗಿ ಸೇವೆ ಸಲ್ಲಿಸುತ್ತಿರುವ ಸಂದೀಪ ಪಾಟೀಲ್ ಈ ಗೌರವಕ್ಕೆ ಭಾಜನರಾಗಿ ಗಡಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.
2004ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿರುವ 45ರ ಹರೆಯದ ಸಂದೀಪ ಪಾಟೀಲ್ ತಮ್ಮ 19 ವರ್ಷದ ಸೇವಾ ಅವಧಿಯಲ್ಲಿ ಅನೇಕ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಎಎಸ್ಪಿಯಿಂದ ಹಿಡಿದು ಐಜಿವರೆಗಿನ ವಿವಿಧ ಹುದ್ದೆ ಸಮರ್ಥವಾಗಿ ನಿರ್ವಹಿಸಿದ್ದಾರೆ. ಪಾಟೀಲ್ ಅವರು ಸ್ಥಳ ಯಾವುದೇ ಇರಲಿ, ಹುದ್ದೆ ಏನೇ ಸಿಗಲಿ ಶ್ರದ್ಧೆ ಮತ್ತು ನಿಷ್ಠೆಯಿಂದ ನಿಭಾಯಿಸುತ್ತ ಆದರ್ಶ ಮೆರೆದಿದ್ದಾರೆ. ಪ್ರತಿ ಹಂತದಲ್ಲೂ ಶುದ್ಧಹಸ್ತ ಸೇವೆಯಿಂದ ಇಲಾಖೆಗೆ ಹೆಮ್ಮೆ ಎನಿಸಿದ್ದಾರೆ. ಖಡಕ್ ನಿರ್ಣಯಗಳು ಕೈಗೊಳ್ಳುವ ಜತೆಗೆ ಖಾಕಿ ಪಡೆಯಲ್ಲೂ ಮಾನವೀಯ ಮೌಲ್ಯ, ಜೀವಪರ ಕಾಳಜಿಯುಳ್ಳ ಹೃದಯಗಳಿವೆ ಎಂಬುದು ಪಾಟೀಲ್ ಸೇವಾ ಸಾಧನೆ ನಿರೂಪಿಸಿದೆ.
ಬಳ್ಳಾರಿಯಲ್ಲಿ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಮೂಲಕ ವೃತ್ತಿ ಜೀವನ ಆರಂಭಿಸಿದ ಪಾಟೀಲ್, ಕೊಡಗು, ದಾವಣಗೆರೆ, ಬೆಳಗಾವಿ ಎಸ್ಪಿ,ಬೆಂಗಳೂರು ನಗರದ ಉತ್ತರ-ಕೇಂದ್ರ ಉಪ ವಿಭಾಗಗಳ ಡಿಸಿಪಿ, ಮಂಗಳೂರು ಪೊಲೀಸ್ ಕಮಿಷನರ್, ಗುಪ್ತ ದಳ ಎಸ್ಪಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ಕೆಎಸ್ಆರ್.ಪಿ ಐಜಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಸೇವೆ ಮಾಡಿದ ಕಡೆಗಳಲ್ಲೆಲ್ಲ ಸೂಪರ್ ಕಾಪ್ ಗರಿ ಕೊಟ್ಟಿದೆ. ಬೆಳಗಾವಿ ಸುವರ್ಣ ಸೌಧದಲ್ಲಿ ಅಧಿವೇಶನ ನಡೆಯುತ್ತಿದ್ದಾಗ ರೈತರ ಹೋರಾಟದ ವೇಳೆ ತೆಲೆ ಒಡೆದಿತ್ತು. ಆದರೂ ತಕ್ಷಣ ಚಿಕಿತ್ಸೆ ಪಡೆದು ಕರ್ತವ್ಯಕ್ಕೆ ಹಾಜರಾಗಿದ್ದರು. ಬೆಂಗಳೂರು ಇತರೆಡೆ ಡ್ರಗ್ಸ್ ಮಾಫಿಯಾ, ಕ್ರಿಮಿನಲ್ ಚಟುವಟಿಕೆ, ರೌಡಿಗಳಿಗೆ ಮಟ್ಟ ಹಾಕಲು ದಿಟ್ಟ ಹೆಜ್ಜೆ ಇಟ್ಟಿದ್ದರು. ಇವರ ನಾನಾ ಸೇವಾ ಸಾಧನೆಗಾಗಿ ಅತ್ಯುನ್ನತ ರಾಷ್ಟ್ರಪತಿ ಪದಕ ಮುಡಿಗೇರಿದೆ. ಪ್ರಶಸ್ತಿ ವಿತರಣೆ ದಿನಾಂಕ ಇನ್ನೂ ಪ್ರಕಟವಾಗಿಲ್ಲ.
ಜನರ ಸೇವೆ ಮಾಡುವುದೇ ಸಕರ್ಾರಿ ನೌಕರರ ಕೆಲಸ. ಅದರಂತೆ ನನ್ನ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಪೊಲೀಸ್ ಇಲಾಖೆ ಜನರಿಗೆ ಹೆಚ್ಚು ಹತ್ತಿರವಿರುವ ಕಾರಣ ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಕಾಳಜಿ ವಹಿಸಬೇಕಾಗುತ್ತದೆ. ಈ ಪ್ರಶಸ್ತಿ ನನ್ನ ಜವಾಬ್ದಾರಿ ಇನ್ನಷ್ಟು ಹೆಚ್ಚಿಸುವ ಜತೆಗೆ, ಪ್ರೇರಣೆಯೂ ನೀಡಿದೆ ಎಂದು ಸಂದೀಪ್ ಪಾಟೀಲ್ ವಿಜಯವಾಣಿ ಜತೆಗೆ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ವಕೀಲ ಟು ಪೊಲೀಸ್
ಸಂದೀಪ ಪಾಟೀಲ್ ಮೂಲತಃ ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಬಾಲೂರ ಗ್ರಾಮದವರು. ಪ್ರಾಥಮಿಕ, ಪ್ರೌಢ ಮತ್ತು ಕಾಲೇಜು ಶಿಕ್ಷಣ ಬೆಂಗಳೂರಿನಲ್ಲಿ ಪೂರ್ಣಗೊಳಿಸಿರುವ ಅವರು, ಯೂನಿವರ್ಸಲ್ ಕಾಲೇಜಿನಲ್ಲಿ ಎಲ್ಎಲ್ಬಿ ಮುಗಿಸಿದ ಬಳಿಕ ಕೆಲಕಾಲ ಹೈಕೋಟ್೯ ನಲ್ಲಿ ವಕೀಲರಾಗಿ ಕೆಲಸ ಮಾಡಿದ್ದಾರೆ. ಇವರ ತಂದೆ ದಿ.ಕಾಶೀನಾಥರಾವ ಪಾಟೀಲ್ ಹೈಕೋಟ್೯ ವಕೀಲರಿದ್ದರು. ಯುಪಿಎಸ್ಸಿ ಸಾಧನೆ ಮಾಡಿ ಜನಸೇವೆ ವಿಸ್ತರಿಸಿಕೊಳ್ಳಬೇಕೆಂಬ ಗುರಿ ಹೊಂದಿದ್ದರು. ಅದರಂತೆ 2004ರಲ್ಲಿ ಐಪಿಎಸ್ (ಕರ್ನಾಟಕ ಕೇಡರ್) ಟಾಪರ್ ಆಗಿ ಹೊರಹೊಮ್ಮಿ ಪೊಲೀಸ್ ಇಲಾಖೆ ಸೇರಿದರು. ಪೂನಮ್ ಪಾಟೀಲ್ ಅವರೊಂದಿಗೆ ಮದುವೆಯಾಗಿರುವ ಇವರಿಗೆ ಸಿದ್ಧಾಂತ ಹಾಗೂ ಶರಣ್ ಪುತ್ರರಿದ್ದಾರೆ. ಬಿಡುವು ಸಿಕ್ಕಾಗ ಸ್ವಗ್ರಾಮಕ್ಕೆ ಬಂದು ಹೋಗುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net