ಸೂಡಿ ಪಂಚಾಯಿತಿಗೆ ಮುತ್ತಿಗೆ

21 GAJENDRAGAD 1
Published on

ಗಜೇಂದ್ರಗಡ:ಕೂಲಿ ಕಾರ್ವಿುಕರಿಗೆ ಉದ್ಯೊಗ ಖಾತ್ರಿ ಯೋಜನೆಯಡಿ ಕೆಲಸ ಕೊಡಬೇಕು ಎಂದು ಒತ್ತಾಯಿಸಿ ತಾಲೂಕಿನ ಸೂಡಿ ಗ್ರಾಮಸ್ಥರು ಗ್ರಾ.ಪಂ.ಗೆ ಮುತ್ತಿಗೆ ಹಾಕಿ ಗುರುವಾರ ಪ್ರತಿಭಟನೆ ನಡೆಸಿದರು.

‘ಲಾಕ್​ಡೌನ್​ನಿಂದಾಗಿ ಉದ್ಯೋಗವಿಲ್ಲದೆ ಪರದಾಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಒಂದು ದಿನ ಕೆಲಸ ನೀಡಿ ನಾಳೆಯಿಂದ ಮನೆಯಲ್ಲಿರಿ ಎಂದರೆ ಜೀವನ ಮಾಡುವುದು ಹೇಗೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ನರೇಗಾ ಯೋಜನೆಯಡಿ 1200 ಕಾರ್ವಿುಕರು ಬುಧವಾರ ಬದುವು ನಿರ್ಮಾಣ ಕಾಮಗಾರಿ ನಡೆಸಿ ಮನೆಗೆ ತೆರಳಿದ್ದಾರೆ. ಆದರೆ, ಪಂಚಾಯಿತಿಯಿಂದ ಸಂಜೆ ಧ್ವನಿವರ್ಧಕದ ಮೂಲಕ ಮಾಹಿತಿ ನೀಡಿ ಗುರುವಾರದಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸವಿರುವುದಿಲ್ಲ. ಹೀಗಾಗಿ ಕಾರ್ವಿುಕರು ಕೆಲಸಕ್ಕೆ ಬರಬೇಡಿ ಎಂದು ತಿಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಕಾರ್ವಿುಕರು ಪಂಚಾಯಿತಿಗೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದರು.

ಸೂಡಿ ಗ್ರಾ.ಪಂ.ನಲ್ಲಿ ಕೆಲಸ ಕೊಡುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದರೂ ಪ್ರಯೋಜನವಾಗುತ್ತಿಲ್ಲ. ಕೆಲವರು ಕ್ರಿಯಾ ಯೋಜನೆಯಡಿ ಕಾಮಗಾರಿ ಪಡೆದು ಅದನ್ನು ಜೆಸಿಬಿ ಯಂತ್ರದ ಮೂಲಕ ಮಾಡಿಸುತ್ತಾರೆ. ಗ್ರಾಮದಲ್ಲಿ ಕೂಲಿ ಕೆಲಸ ಇಲ್ಲದೆ ಜನ ಪರದಾಡುವಂತಾಗಿದೆ ಎಂದು ಕೂಲಿಕಾರರು ಆರೋಪಿದರು. ಅಧಿಕಾರಿಗಳು ಕೂಡಲೇ ಗಮನಹರಿಸಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿರುವ ಕೃಷಿ, ಕೂಲಿ ಕಾರ್ವಿುಕರಿಗೆ ಹೊಸದಾಗಿ ಜಾಬ್ ಕಾರ್ಡ್​ಗಳನ್ನು ವಿತರಿಸಿ ಕೆಲಸ ಕೊಡಬೇಕು. ನಿರ್ಲಕ್ಷ್ಯ ವಹಿಸಿದರೆ ಪ್ರತಿಭಟನೆ ತೀವ್ರಗೊಳಿಸಲಾಗುತ್ತದೆ ಎಂದರು.

ಗ್ರಾ.ಪಂ. ಉಪಾಧ್ಯಕ್ಷ ಶಶಿಧರ ವಕ್ಕಲರ ಹಾಗೂ ಸದಸ್ಯರು ಪ್ರತಿಕ್ರಿಯಿಸಿ, ‘ಶನಿವಾರದಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಹಾಗೂ ಚೆಕ್ ಡ್ಯಾಂ ಹೂಳೆತ್ತುವೆ ಕಾಮಗಾರಿ ನೀಡಲಾಗುತ್ತದೆ’ ಎಂದು ಭರವಸೆ ನೀಡಿದರು. ನಂತರ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು. ಮಂಜುನಾಥ ಕುದರಿಕೋಟಿ, ಬಸಯ್ಯ ಭಿಕ್ಷಾವತಿಮಠ, ಕಿಟ್ಟಪ್ಪ ಬಾರಕೇರ, ಶರಣವ್ವ ಜಾಲಾಪುರ, ನಾಗವ್ವ ಬಾರಕೇರ ಬಸಯ್ಯ ಮಠದ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net