

ನರಗುಂದ: ಗ್ರಾಮೀಣ ಜನರಿಗೆ ತಕ್ಷಣವೇ ದಾಖಲೆಪತ್ರಗಳನ್ನು ಒದಗಿಸುವ ಉದ್ದೇಶದಿಂದ ಸರ್ಕಾರವು ತೆರೆದಿರುವ ಬಾಪೂಜಿ ಸೇವಾ ಕೇಂದ್ರಗಳು ಸರ್ವರ್ ಸಮಸ್ಯೆ ಮತ್ತು ಸಿಬ್ಬಂದಿ ಕೊರತೆಯಿಂದಾಗಿ ಯೋಗ್ಯ ಸೇವೆ ಒದಗಿಸುವಲ್ಲಿ ವಿಫಲವಾಗುತ್ತಿವೆ.
ತಾಲೂಕಿನ ಎಲ್ಲ 13 ಗ್ರಾ.ಪಂ.ಗಳಲ್ಲಿ ಇದೇ ಪರಿಸ್ಥಿತಿ ಇದೆ. ಇದರಿಂದ ಜನರು ವಿವಿಧ ದಾಖಲೆ ಪತ್ರ ಪಡೆಯಲು ತಾಲೂಕು ಕೇಂದ್ರಕ್ಕೆ ಅಲೆಯುವಂತಾಗಿದೆ.
ಬಾಪೂಜಿ ಸೇವಾ ಕೇಂದ್ರಗಳಲ್ಲಿ 100ಕ್ಕೂ ಅಧಿಕ ದಾಖಲೆಗಳನ್ನು ವಿತರಿಸಲಾಗುತ್ತದೆ. ಆದರೆ, ಇವು ಹಳ್ಳಿ ಜನರಿಗೆ ಸಕಾಲಕ್ಕೆ ಸಿಗುತ್ತಿಲ್ಲ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕಂದಾಯ ಇಲಾಖೆಗಳ ನಡುವಿನ ಸಮನ್ವಯತೆ ಕೊರತೆಯಿಂದ ಪದೆ ಪದೇ ತಾಂತ್ರಿಕ ಸಮಸ್ಯೆ ಉದ್ಭವಿಸುತ್ತಿದೆ. ರೈತರು ಪಡೆಯುವ ಆರ್ಟಿಸಿ ಉತಾರಗಳು ಕೂಡ ಸರಿಯಾಗಿ ಸಿಗುತ್ತಿಲ್ಲ. ಕಂಪ್ಯೂಟರ್ ಸಿಬ್ಬಂದಿ ಕೊರತೆ, ಸರ್ವರ್ ಸಮಸ್ಯೆಗಳಿಂದ ಅಗತ್ಯ ದಾಖಲೆಗಳು ಲಭ್ಯವಾಗದೆ ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕರಿಗೆ ಇಲ್ಲಸಲ್ಲದ ನೆಪ ಹೇಳಿ ವಾಪಸ್ ಕಳುಹಿಸುತ್ತಿದ್ದಾರೆ ಎನ್ನಲಾಗಿದೆ. ನಿರೀಕ್ಷಿತ ಸೇವೆ ಸಿಗದೇ ಗ್ರಾಮೀಣ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಆಯುಷ್ಮಾನ್ ಕಾರ್ಡ್ಗೆ ಪರದಾಟ
ಗ್ರಾಮೀಣಾಭಿವೃದ್ಧಿ, ಪಂಚಾಯತ್ರಾಜ್ ಇಲಾಖೆ 2019ರ ಡಿ 11ರಿಂದ ರಾಜ್ಯದ ಎಲ್ಲ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಆಯುಷ್ಮಾನ್ ಕಾರ್ಡ್ಗಳನ್ನು ವಿತರಿಸಲು ಆದೇಶಿಸಿದೆ. ಕರೊನಾ ಲಾಕ್ಡೌನ್ ಮುಂಚೆ ಈ ಯೋಜನೆಯಡಿ ಕಾರ್ಡ್ ವಿತರಿಸಲಾಗಿತ್ತು. ಆದರೀಗ ಸೇವಾ ಕೇದ್ರಗಳಲ್ಲಿ ಆಯುಷ್ಮಾನ್ ಕಾರ್ಡ್ಗಳನ್ನು ಪಡೆಯಲು ಪರದಾಡುವ ಪರಿಸ್ಥಿತಿ ನಿರ್ವಣವಾಗಿದೆ.
ಬಾಪೂಜಿ ಸೇವಾ ಕೇಂದ್ರದಡಿ ಉತಾರ ಸೇರಿ ಅನೇಕ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಕಲ್ಪಿಸಲಾಗುತ್ತಿದೆ. ಸೇವೆಯಲ್ಲಿ ಅನಗತ್ಯ ವಿಳಂಬ ಕಂಡುಬಂದಲ್ಲಿ ಸಂಬಂಧಪಟ್ಟ ಗ್ರಾಪಂಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿ, ಸಮಸ್ಯೆ ಬಗೆಹರಿಸಲಾಗುವುದು.| ಚಂದ್ರಶೇಖರ ಕುರ್ತಕೋಟಿ ತಾಪಂ ಇಒ
100ಕ್ಕೂ ಅಧಿಕ ಸೇವೆ
ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2016ರಲ್ಲಿ ಬಾಪೂಜಿ ಸೇವಾ ಕೇಂದ್ರಗಳನ್ನು ತೆರೆಯಿತು. ಈ ವಿನೂತನ ಕಾರ್ಯಕ್ರಮದಡಿ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳು, ಕಟ್ಟಡ ಮತ್ತು ವ್ಯಾಪಾರ ಪರವಾನಗಿ ಪತ್ರ, ಪಡಿತರ ಕಾರ್ಡ್ ವಿತರಣೆ ಸೇರಿದಂತೆ 100ಕ್ಕೂ ಅಧಿಕ ಸೇವೆಗಳನ್ನು ನೀಡಲಾಗುತ್ತಿದೆ. ಇದರಲ್ಲಿ 43 ಸೇವೆಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸೇರಿದ್ದರೆ, 40 ಸೇವೆಗಳು ಕಂದಾಯ ಇಲಾಖೆಗೆ ಸೇರಿವೆ. ಇನ್ನ್ನುಳಿದ ರೈಲ್ವೆ, ವಿಮಾನದ ಟಿಕೆಟ್ ಬುಕ್ಕಿಂಗ್, ಮೊಬೈಲ್ ರೀಚಾರ್ಜ್ ಸೇರಿದಂತೆ ವಿವಿಧ 17 ವಾಣಿಜ್ಯ ಸೇವೆಗಳೂ ಕೇಂದ್ರದಲ್ಲಿ ದೊರೆಯುತ್ತವೆ.
ಬಾಪೂಜಿ ಸೇವಾ ಕೇಂದ್ರಕ್ಕೆ ಅಂತರ್ಜಾಲ, ಕಂಪ್ಯೂಟರ್ ಪರಿಕರ ಸೇರಿದಂತೆ ಹಲವು ಸೌಕರ್ಯಗಳು ಸ್ಥಳೀಯ ಗ್ರಾಪಂಗಳಿಂದ ದೊರೆಯುತ್ತವೆ. ಆದರೆ, ಸೇವಾ ಕೇಂದ್ರಕ್ಕೆ ಬೇಕಾಗಿರುವ ಅಗತ್ಯ ಸಿಬ್ಬಂದಿ ಕೊರತೆಯಿಂದಾಗಿ ದಾಖಲೆ ವಿತರಣೆ ವಿಳಂಬವಾಗುತ್ತಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. | ಎಸ್.ಎಂ. ಮರಿಗೌಡ್ರ ಕನ್ನಡ ರಕ್ಷಣಾ ಸೇನೆ ಉತ್ತರ ಕರ್ನಾಟಕ ಅಧ್ಯಕ್ಷ