

ಔರಾದ್: ಪಿಯುಸಿ ಮತ್ತು ಪದವಿ ಹಂತದಲ್ಲಿರುವಾಗಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೂಕ್ತ ತಯಾರಿ ನಡೆಸಿದರೆ ಯಶಸ್ಸು ಸಾಧಿಸಲು ಸಾಧ್ಯ ಎಂದು ಕೆಎಎಸ್ ಅಧಿಕಾರಿ ಖಾಜಾ ಖಲೀಲುಲ್ಲಾ ಹೇಳಿದರು.
ತಾಲೂಕಿನ ಸಂತಪುರ ಸಿದ್ಧರಾಮೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಭಾನುವಾರ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಕಾಲೇಜು ಹಂತದಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ತಿಳಿವಳಿಕೆ ಮಾಡಿಕೊಳ್ಳಬೇಕು. ಸಮಯಕ್ಕೆ ಆದ್ಯತೆ ನೀಡಿ ಪ್ರತಿಯೊಂದು ವಿಷಯದ ಬಗ್ಗೆ ಅರಿತುಕೊಳ್ಳಬೇಕು. ಯಾವ ವಿಷಯಗಳಲ್ಲಿ ಹೆಚ್ಚು ಬಲ ಹಾಗೂ ದುರ್ಬಲ ಆಗಿರುವ ಅಂಶಗಳನ್ನು ಪಟ್ಟಿ ಮಾಡಿಕೊಂಡು ಅಧ್ಯಯನ ನಡೆಸಬೇಕು. ನಿಮ್ಮ ಒಳತಿಗೆ ಟೀಕೆಗಳು ಬಂದರೆ ಸ್ವೀಕರಿಸಿ ಛಲದೊಂದಿಗೆ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ಜಿಪಂ ಸಹಾಯಕ ಸಾಂಖ್ಯಿಕ ಅಧಿಕಾರಿ ರತಿಕಾಂತ ನೇಳಗೆ ಮಾತನಾಡಿ, ವಿದ್ಯಾರ್ಥಿಗಳು ಆತ್ಮಸಾಕ್ಷಿ ಜತೆಗೆ ಮೌಲ್ಯಯುತ ಮಾರ್ಗ ಅನುಸರಿಸಬೇಕು. ನಂಬಿಕೆಗಳ ಬೇರುಗಳನ್ನು ಬಲಗೊಳಿಸಿಕೊಳ್ಳಬೇಕು. ಮೌಲ್ಯದ ಬೇರು ಗಟ್ಟಿಯಾದಾಗ ಎಲ್ಲಿ ಬೇಕಾದರೂ ಜೀವನ ಕಂಡುಕೊಳ್ಳಬಹುದು. ವಿಷಯದಲ್ಲಿ ಪರಿಣತಿ ಸಾಧಿಸಲು ಸತತ ಅಭ್ಯಾಸವೊಂದೇ ಮಾರ್ಗ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಸಂದೀಪ ಕುಲಕರ್ಣಿ, ಸಂಜುಕುಮಾರ ಜುಮ್ಮಾ, ಚಂದ್ರಕಾಂತ ಫುಲೆ, ಸಂತೋಷ ಚಾಂಡೇಶ್ವರೆ, ಪ್ರಾಂಶುಪಾಲ ನವೀಲಕುಮಾರ ಇತರರಿದ್ದರು.