ಸೂಕ್ತ ಪ್ರತಿಭೆ ಗುರುತಿಸುವ ಕಾರ್ಯ ನಡೆಯಲಿ

18KKNR-01
Published on

ಕುಕನೂರು (ಕೊಪ್ಪಳ): ಪ್ರತಿಯೊಂದು ಮಗುವಿನಲ್ಲಿ ಒಂದಿಲ್ಲಾ ಒಂದು ಪ್ರತಿಭೆ ಅಡಗಿದ್ದು, ಅಂತಹ ಮಗುವಿನ ಪ್ರತಿಭೆ ಗುರುತಿಸುವ ಕಾರ್ಯ ನಡೆಯಬೇಕು ಎಂದು ಪ್ರಭಾರಿ ಬಿಇಒ ಅಶೋಕ ಗೌಡರ ಹೇಳಿದರು.


ತಾಲೂಕಿನ ಭಾನಾಪುರ ಗ್ರಾಮದ ಪ್ರೌಢ ಶಾಲಾ ಆವರಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಭಾನಾಪುರ ಆಶ್ರಯದಲ್ಲಿ 2023-24ನೇ ತಳಕಲ್ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.


ಶಿಕ್ಷಣ ಇಲಾಖೆಯು ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಲು ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಆಯೋಜಿಸುತ್ತಿದ್ದು, ಕ್ಲಸ್ಟರ್, ವಲಯ, ತಾಲೂಕು, ಜಿಲ್ಲಾ ಮಟ್ಟ ಹಾಗೂ ವಿಭಾಗ ಮಟ್ಟದವರೆಗೂ ಮಕ್ಕಳ ಪ್ರತಿಭೆ ಅನಾವರಣಗೊಳ್ಳಿಸಲು ಸೂಕ್ತ ವೇದಿಕೆಯಾಗಿದೆ. ಮಕ್ಕಳಲ್ಲಿ ಸುಜನಶೀಲ ಕಲೆ ಗುರುತಿಸಿ, ಬೆಳೆಸುವ ಕಾರ್ಯ ಈ ವೇದಿಕೆಯಿಂದ ಸಾಧ್ಯವಾಗುತ್ತದೆ. ಆಯಾ ಹಂತದ ತರಗತಿ ಮಕ್ಕಳಿಗೆ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ. ಕೇವಲ ಓದು ಒಂದೇ ಆಗದೇ ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಅತಿ ಮುಖ್ಯವಾಗಿದ್ದು, ಇದರಿಂದ ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಲು ಸಾಧ್ಯವಾಗುತ್ತದೆ. ಸ್ಪರ್ಧೆಯ ನಿರ್ಣಾಯಕರು ಮಕ್ಕಳಿಗೆ ದ್ರೋಹ, ಅನ್ಯಾಯವಾಗದಂತೆ ಉತ್ತಮ ನಿರ್ಣಯ ನೀಡಿ, ನ್ಯಾಯ ಒದಗಿಸಬೇಕು ಎಂದರು.


ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಯಲ್ಲಪ್ಪ ಮೇಟಿ ಮಾತನಾಡಿ, ಪೋಷಕರು ಮಕ್ಕಳಿಗೆ ಪ್ರೋತ್ಸಾಹಿಸುವ ಕಾರ್ಯ ನಡೆಯಬೇಕು. ಮಕ್ಕಳ ಪ್ರತಿಭೆ ಗುರುತಿಸಲು ಉತ್ತಮ ವೇದಿಕೆಯಾಗಿದೆ. ನಮ್ಮ ಗ್ರಾಮದ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯರು ಈ ಕಾರ್ಯಕ್ರಮ ಗ್ರಾಮದಲ್ಲಿ ನಡೆಯುವ ಕುರಿತು ಸಭೆ ನಡೆಸಿದಾಗ ಗ್ರಾಮಸ್ಥರು ಕೂಡ ಎಲ್ಲಾ ಸಹಕಾರ ನೀಡುವ ಭರವಸೆ ನೀಡಿ, ಅದೇ ರೀತಿ ಎಲ್ಲರೂ ಸಹಕಾರ ಮೂಲಕ ಕಾರ್ಯಕ್ರಮ ಅಚ್ಚುಕಟ್ಟಾಗಿದೆ ಎಂದರು.


ಸಿಆರ್‌ಪಿ ಮಂಜುನಾಥ ಮಟ್ಟಿ, ಗ್ರಾಪಂ ಅಧ್ಯಕ್ಷ ಕರಿಯಪ್ಪ ಹಳ್ಳಿಕೇರಿ ಅಧ್ಯಕ್ಷತೆ ವಹಿಸಿದರು. ಗ್ರಾಪಂ ಉಪಾಧ್ಯಕ್ಷೆ ಪವಿತ್ರಾ ಪ್ರಕಾಶ್ ಬಂಗೇರ, ಸದಸ್ಯರಾದ ನೀಲಕಂಠಯ್ಯ ಸಸಿಮಠ, ರೇಣುಕಮ್ಮ ತಳವಾರ, ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಈಶ್ವರಯ್ಯ ಬೆಣಕಲ್‌ಮಠ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net