ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ತೆಂಗಿನ ಮರದ ಮೇಲೆ ಕುಳಿತ ರೈತ

03_HSN_04
Published on

ಹಾಸನ: ತಮ್ಮ ಜಮೀನಿನಲ್ಲಿ ವಿದ್ಯುತ್ ತಂತಿ ಹೋಗುತ್ತಿದ್ದು ಅದಕ್ಕೆ ಸೂಕ್ತ ಪರಿಹಾರ ನೀಡುತ್ತಿಲ್ಲ ಮತ್ತು ಇಲಾಖೆಯವರು, ಪೊಲೀಸರು ಮತ್ತು ಇನ್ನಿತರ ಅಧಿಕಾರಿಗಳನ್ನು ಕರೆದುಕೊಂಡು ಬಂದು ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿ ರೈತರೊಬ್ಬರು ತೆಂಗಿನಮರ ಮರವೇರಿ ಕುಳಿತು ಆತ್ಮಹತ್ಯೆ ಯತ್ನಿಸಿದ್ದು, ಬಳಿಕ ಎಸಿ ಮಾರುತಿ ಹಾಗೂ ಡಿವೈಎಸ್‌ಪಿ ಅವರು ಸೂಕ್ತ ಪರಿಹಾರದ ಭರವಸೆ ನೀಡಿ ರೈತನನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.

ತಾಲೂಕಿನ ದುದ್ದ ಹೋಬಳಿಯ ಹಿರೇಕಡಲೂರು ಗ್ರಾಮದ ನಿವಾಸಿ ರಂಗಸ್ವಾಮಿ ಎಂಬುವರು ಆತ್ಮಹತ್ಯೆಗೆ ಯತ್ನಿಸಿದ ರೈತ. ತಮ್ಮ ಗ್ರಾಮದಲ್ಲಿ ಹೈ ಟೆನ್ಶನ್ ವೈಯರ್ ಹಾದುಹೋಗುತ್ತಿದ್ದು ಇದಕ್ಕೆ ಸೂಕ್ತ ಪರಿಹಾರ ನೀಡದೆ ಇಲಾಖೆಯವರು ಮತ್ತು ಗುತ್ತಿಗೆದಾರರು ನಿರ್ಲಕ್ಷೃ ವಹಿಸುತ್ತಿದ್ದಾರೆ ಎಂಬುದು ರೈತರ ಆಕ್ರೋಶವಾಗಿದೆ.

ಮೊದಲು ಕೆಲಸ ಮಾಡುತ್ತೇವೆ ಆಮೇಲೆ ಪರಿಹಾರ ನೀಡುತ್ತೇವೆ ಎಂದು ಸಬೂಬು ಹೇಳುತ್ತಿರುವುದರಿಂದ ಯಾವುದೇ ಕಾರಣಕ್ಕೂ ಇಲ್ಲಿ ಕೆಲಸ ಮಾಡಲು ಬಿಡುವುದಿಲ್ಲ. ನಮಗೆ ಸೂಕ್ತ ಪರಿಹಾರ ನೀಡಿದರೆ ಮಾತ್ರ ಕೆಲಸ ಮಾಡುವುದಾಗಿ ಆ ಗ್ರಾಮದ ರೈತರು ತಿಳಿಸಿದ್ದಾರೆ . ಆದರೆ ಪೊಲೀಸರು ಮತ್ತು ಇನ್ನಿತರೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಕೆಲಸ ಮಾಡಲು ಮುಂದಾದಾಗ ಗ್ರಾಮದ ನಿವಾಸಿ ರಂಗಸ್ವಾಮಿ ಎಂಬುವರು ತೆಂಗಿನಮರ ಹೇರಿ ಕುಳಿತು ನಾನು ಯಾವುದೇ ಕಾರಣಕ್ಕೂ ಕೆಲಸ ಮಾಡಲು ಬಿಡುವುದಿಲ್ಲ ಒಂದು ವೇಳೆ ಕೆಲಸ ಮಾಡಿದರೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.

ಗ್ರಾಮಸ್ಥರು ಕೂಡ ಈ ಹಿಂದೆ ನಮ್ಮ ಗ್ರಾಮದಲ್ಲಿ ಇದೇ ರೀತಿ ಕೆಲಸ ನಡೆದಿದೆ. ಆಗಲು ಕೂಡ ಸರಿಯಾದ ರೀತಿ ಪರಿಹಾರ ನೀಡಲಿಲ್ಲ . ಕೆಲಸ ಮಾಡುತ್ತೇವೆ ಆಮೇಲೆ ಪರಿಹಾರ ಕೊಡುವುದಾಗಿ ನಂಬಿಸಿ ನಮಗೆ ಮೋಸ ಮಾಡಿದ್ದಾರೆ. ಮತ್ತೆ ಈಗ ಅದೇ ರೀತಿ ಕೆಲಸ ಮಾಡಲು ಯತ್ನಿಸುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಅಲ್ಪಸಲ್ಪ ಜಮೀನು ಇದ್ದು ಇದನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಅದಕ್ಕೂ ಈ ರೀತಿ ಮಾಡಿದರೆ ರೈತರು ಬದುಕುವುದು ಹೇಗೆ. ನಮಗೆ ಸೂಕ್ತ ಪರಿಹಾರ ಕೊಟ್ಟರೆ ನಾವು ಕೆಲಸ ಮಾಡಲು ಬಿಡುತ್ತೇವೆ. ಇಲ್ಲವಾದರೆ ಯಾವುದೇ ಕಾರಣಕ್ಕೂ ಕೆಲಸ ಮಾಡಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಬಿಗಿಪಟ್ಟು ಹಿಡಿದಿದ್ದಾರೆ.

ಪರಿಹಾರಕ್ಕಾಗಿ ಮರದ ಮೇಲೆ ಕುಳಿತಿರುವ ರಂಗಸ್ವಾಮಿ ಅವರನ್ನು ಮನವೊಲಿಸಲು ಪೊಲೀಸರು ಮತ್ತು ತಾಲೂಕು ಆಡಳಿತ ಹಾಗೂ ಇನ್ನಿತರೆ ಅಧಿಕಾರಿಗಳು ಎಷ್ಟೇ ಪ್ರಯತ್ನಿಸಿದರು ಕೂಡ ಅದು ಸಾಧ್ಯವಾಗಿರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net