

ಕೊಳ್ಳೇಗಾಲ: ಪಟ್ಟಣದ ನಗರಸಭೆಯ 1ನೇ ವಾರ್ಡ್ ವ್ಯಾಪ್ತಿಯ ಹೊಸ ಅಣಗಳ್ಳಿಯಲ್ಲಿ ನಗರಸಭೆ ವತಿಯಿಂದ ಬುಧವಾರ ಖಾತಾ ಆಂದೋಲನ ಕಾರ್ಯಕ್ರಮ ನಡೆಸಲಾಯಿತು.
ಗ್ರಾಮದ ಕಾಲ ಭೈರವೇಶ್ವರ ಸ್ವಾಮಿ ಸನ್ನಿಧಿ ಮುಂಭಾಗ ಖಾತಾ ಆಂದೋಲನಕ್ಕೆ ಕಾರ್ಯಕ್ರಮಕ್ಕೆ ನಗರಸಭೆ ಅಧ್ಯಕ್ಷೆ ರೇಖಾ ರಮೇಶ್ ಚಾಲನೆ ನೀಡಿದರು.
ಈ ಹಿಂದೆ 30 ರಿಂದ 40 ದಿನಗಳ ಕಾಲ ತಮ್ಮ ಆಸ್ತಿಗಳಿಗೆ ಖಾತೆ ಪಡೆಯಲು ಜನರು ಕಚೇರಿ ಅಲೆಯಬೇಕಿತ್ತು. ಆದರೆ ಇದೀಗ ನಿಮ್ಮ ಮನೆ ಬಾಗಿಲಿಗೆ ಅಧಿಕಾರಿಗಳೇ ಬಂದು ಸೂಕ್ತ ದಾಖಲೆ ಪಡೆದು ಖಾತೆಯನ್ನು ನೀಡುತ್ತಾರೆ. ಇದರ ಪ್ರಯೋಜನ ಪಡೆಯಬೇಕು ಎಂದು ಸಲಹೆ ನೀಡಿದರು.
ನಿವಾಸಿ ಸಿದ್ದಯ್ಯ ಮಾತನಾಡಿ, ಖಾತಾ ಆಂದೋಲನದ ಬಗ್ಗೆ ಜನರಿಗೆ ಮಾಹಿತಿಯೇ ಇಲ್ಲ. ಆದ್ದರಿಂದ ಮೊದಲು ಜನರಿಗೆ ಕಾರ್ಯಕ್ರಮದ ವೇಳಾಪಟ್ಟಿ ಬಿಡುಗಡೆಗೊಳಿಸಬೇಕು ಎಂದು ಮನವಿ ಮಾಡಿದರು.
ನಗರಸಭೆ ಆಯುಕ್ತ ನಂಜುಂಡಸ್ವಾಮಿ ಮಾತನಾಡಿ, ನಗರಸಭೆ ಅಧಿಕಾರಿಗಳು ಹಾಗೂ ನಿಮ್ಮ ವಾರ್ಡ್ ಸದಸ್ಯರು ನಿಮ್ಮ ಮನೆ ಬಾಗಿಲಿಗೆ ಬಂದು ಖಾತೆ ಮಾಡಿಕೊಡುವುದರಿಂದ ಕಚೇರಿ ಅಲೆಯುವುದು ತಪ್ಪಿದೆ. ಆದ್ದರಿಂದ ಈ ಸದಾವಕಾಶವನ್ನು ಉಪಯೋಗಿಸಿಕೊಳ್ಳಬೇಕು. ಅಧಿಕಾರಿಗಳಿಗೆ ಖಾತೆಗೆ ಬೇಕಾದ ದಾಖಲೆಗಳು ಹಾಗೂ ಕಂದಾಯದ ಹಣವನ್ನು ಸಂದಾಯ ಮಾಡಿಕೊಂಡರೆ ಕೆಲಸ ಸುಗಮವಾಗುತ್ತದೆ ಎಂದರು.
ಸದಸ್ಯೆ ಕವಿತಾ, ನಗರಸಭೆ ಸಿಬ್ಬಂದಿ,ಸಾಮಾಜಿಕ ಕಾರ್ಯಕರ್ತ ದಶರಥ್ ಹಾಜರಿದ್ದರು.