ಸೂಕ್ತ ಚಿಕಿತ್ಸೆ, ಸ್ಪಂದನೆಯೇ ಮಾನಸಿಕ ಕಾಯಿಲೆಗೆ ಪರಿಹಾರ : ಡಾ. ಶಿವಸ್ವಾಮಿ

ಸೂಕ್ತ ಚಿಕಿತ್ಸೆ, ಸ್ಪಂದನೆಯೇ ಮಾನಸಿಕ ಕಾಯಿಲೆಗೆ ಪರಿಹಾರ : ಡಾ. ಶಿವಸ್ವಾಮಿ
Published on

ಹಾಸನ: ಮಾನಸಿಕ ರೋಗಿಗಳು ಕೂಡ ಎಲ್ಲರಂತೆ ಬದುಕುವ ಹಕ್ಕು ಇದ್ದು, ಅವರನ್ನು ಕೀಳಾಗಿ ಕಾಣದೇ ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಟ್ಟರೇ ಸಮಾಜದಲ್ಲಿ ಎಲ್ಲರಂತೆ ಅವರು ಕೂಡ ಉತ್ತಮ ಬದುಕು ನಡೆಸಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಸಿ. ರವಿಕಾಂತ್ ಅವರು ಕರೆ ನೀಡಿದರು.

ನಗರದ ಸಾಲಗಾಮೆ ರಸ್ತೆ ಬಳಿ ಇರುವ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಸ್ಕಿಜೋಫ್ರೇನಿಯಾ ದಿನಾಚರಣೆ ಜಾಗೃತಿ ವಾಹನಕ್ಕೆ ಹಸಿರು ಬಾವುಟ ಪ್ರದರ್ಶಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಈ ಭೂಮಿ ಮೇಲೆ ಇರುವ ಮಾನಸಿಕ ರೋಗಿಗಳು ಕೂಡ ಸಮಾಜದಲ್ಲಿ ಎಲ್ಲರಂತೆ ಬದುಕಬೇಕು. ಅವರಿಗೂ ಒಳ್ಳೆಯ ಬದುಕು ಕಟ್ಟಿಕೊಡಬೇಕು ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಿವಸ್ವಾಮಿ ಮಾತನಾಡಿ, ಮಾನಸಿಕ ಕಾಯಿಲೆಗಳಿಗೆ ಪ್ರತಿ ತಾಲೂಕು ಮಟ್ಟದಲ್ಲಿ ವಾರಕ್ಕೆ ಒಂದು ದಿನ ಚಿಕಿತ್ಸೆ ಕೊಡುತ್ತಾರೆ. ನಮ್ಮಲ್ಲಿ ಇಂತಹ ಸಮಸ್ಯೆಗಳಿಗೆ ಔಷಧ ಇದ್ದು, ಸರಿಯಾಗಿ ಚಿಕಿತ್ಸೆ ಪಡೆದರೆ ಮಾನಸಿಕ ಕಾಯಿಲೆಯಿಂದ ಮುಕ್ತರಾಗಬಹುದು. ಅವರಿಗೆ ಶಕ್ತಿ ತುಂಬುವ ಕೆಲಸ ಮಾಡೋಣ ಎಂದು ಹೇಳಿದರು.

ಸ್ಕಿಜೋಫ್ರೇನಿಯಾ ರೋಗಕ್ಕೆ ಏಕಮಾತ್ರ ಕಾರಣ ಎಂಬುದು ಇರುದಿಲ್ಲ. ಪರಿಸರದ ಅಂಶಗಳು ಹಾಗೂ ನರವಾಹಕಗಳ ಏರುಪೇರುಗಳಿಂದ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ರೋಗದ ಲಕ್ಷಣಗಳು ಅಸ್ತವ್ಯಸ್ತ ಆಲೋಚನೆ, ಭಾವನೆಗಳ ಏರುಪೇರು, ವಿನಾಃಕಾರಣ ನಗುವುದು, ಅಳುವುದು, ವಿಪರೀತ ಕೋಪ, ದುಃಖ-ಸಂತೋಷ, ಇತ್ಯಾದಿ. ಅಸಹಜ ಹಾಗೂ ವಿಚಿತ್ರ ಅನುಭವಗಳ ಭ್ರಮೆಗಳು, ರಾಜಭ್ರಮೆಗಳು, ಕಾಲ್ಪನಿಕ ಧ್ವನಿ ಕೇಳಿಸುವುದು, ಇಲ್ಲದ ವಾಸನೆ ಬರುವುದು, ಹಾಗೂ ಸಾಧ್ಯತೆಯೇ ಇಲ್ಲದಂತಹ ನಂಬಿಕೆ, ಸಂಶಯ ಈ ರೋಗದ ಲಕ್ಷಣಗಳಾಗಿವೆ ಎಂದು ಮಾಹಿತಿ ನೀಡಿದರು.

ಈ ರೋಗಕ್ಕೆ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು. ಈ ಕಾಯಿಲೆಗೆ ಮಾತ್ರೆ ಅಥವಾ ಚುಚ್ಚುಮದ್ದಿನ ರೂಪದಲ್ಲಿ ಔಷಧ ಕೊಡಬಹುದಾಗಿದೆ. ಇದರ ಉಪಯೋಗವನ್ನು ಜನರಿಗೆ ತಿಳಿಸುವ ಜಾಗೃತಿ ಕಾರ್ಯಕ್ರಮ ಮಾಡಬೇಕಾಗಿದೆ. ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ರೋಗಿಯನ್ನು ನಿರ್ಲಕ್ಷ್ಯ ಮಾಡದೆ ಅಗತ್ಯ ಚಿಕಿತ್ಸೆ, ಔಷಧೋಪಚಾರ ಮಾಡಿಸುವ ಮೂಲಕ ಸಮಾಜದಲ್ಲಿ ಗೌರವಯುತವಾಗಿ ಬಾಳುವಂತೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ಸ್ಕಿಜೋಫ್ರೀನಿಯಾ ರೋಗವು ಮಾನಸಿಕ ಖಿನ್ನತೆಯಿಂದ ಬಳಲುವ ಕಾಯಿಲೆಯಾಗಿದ್ದು, ವಿಶ್ವದಾದ್ಯಂತ ಕಂಡು ಬರುವ ರೋಗವಾಗಿದೆ. ಎಲ್ಲರೂ ಒಂದಲ್ಲ ಒಂದು ರೀತಿ ಈ ರೋಗಕ್ಕೆ ತುತ್ತಾಗುತ್ತಲೇ ಇರುತ್ತಾರೆ. ಅನುಮಾನ, ಅಪನಂಬಿಕೆ, ಅತಿಯಾದ ಕಾಳಜಿ ಈ ರೋಗಕ್ಕೆ ರಹದಾರಿಯಾಗಿದೆ. ಮಾನಸಿಕವಾಗಿ ಗಟ್ಟಿತನ ಬೆಳೆಸಿಕೊಳ್ಳುವ ಮೂಲಕ ರೋಗವು ಸುಳಿಯದಂತೆ ನೋಡಿಕೊಳ್ಳಬಹುದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅಧಿಕಾರಿ ವೇಣುಗೋಪಾಲ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಹರೀಶ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಶಿವಶಂಕರ್, ರೋಗ ನಿಯಂತ್ರಣಾಧಿಕಾರಿ ಡಾ. ನಾಗಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ. ವಿಜಯ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net