ಸೂಕ್ತ ಚಿಕಿತ್ಸೆ ನೀಡಿ ಕ್ಷಯ ರೋಗಿಗಳ ಮರಣ ತಗ್ಗಿಸಿ

CTD NEWS ADC KSHAYA---
Published on

ಚಿತ್ರದುರ್ಗ: ಕ್ಷಯ ರೋಗಿಗಳಿಗೆ ತ್ವರಿತ ಮತ್ತು ಸೂಕ್ತ ಚಿಕಿತ್ಸೆ ನೀಡಿ, ಮರಣ ಪ್ರಮಾಣ ಕಡಿಮೆ ಮಾಡಲು ಅಗತ್ಯ ಕ್ರಮ ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಕ್ಷಯರೋಗ ನಿರ್ಮೂಲನೆ ಅಭಿಯಾನ 100 ದಿನಗಳ ಪ್ರಚಾರ ಕಾರ್ಯಕ್ರಮ ಕುರಿತ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ಕ್ಷಯರೋಗ ನಿರ್ಮೂಲನೆ ಮಾಡಬೇಕು. ಕ್ಷಯದಿಂದ ಒಬ್ಬ ರೋಗಿಯೂ ನಿಧನ ಹೊಂದಬಾರದು. ರೋಗಿಗಳನ್ನು ಗುರುತಿಸಿ ಜಾಗರೂಕತೆಯಿಂದ ಆರೈಕೆ ಮಾಡಬೇಕು. ಅವರಿಗೆ ನಿರಂತರ ಚಿಕಿತ್ಸೆ, ಔಷಧ ವಿತರಿಸಿ ಗುಣಮುಖರಾಗಲು ಕ್ರಮ ಕೈ ಗೊಳ್ಳಬೇಕು ಎಂದು ಸೂಚಿಸಿದರು.

ಆಂದೋಲನದ ಅಂಗವಾಗಿ ಆಶಾ ಕಾರ್ಯಕರ್ತೆಯರು ಕಡ್ಡಾಯವಾಗಿ ಮನೆ ಮನೆ ಭೇಟಿ ನೀಡಿ, ಕ್ಷಯ ರೋಗದ ಬಗ್ಗೆ ಜಾಗೃತಿ ಮೂಡಿಸಬೇಕು. ಶಾಲಾ ಮಕ್ಕಳಲ್ಲೂ ಅರಿವು ಮೂಡಿಸಬೇಕು. ರೋಗ ನಿರ್ಮೂಲನೆಗೆ ಸಂಘ ಸಂಸ್ಥೆಗಳು, ಸಾರ್ವಜನಿಕರು ಸಹಕರಿಸಬೇಕು. ರೋಗಿಗಳಿಗೆ ಪೌಷ್ಟಿಕ ಆಹಾರ ಅಗತ್ಯವಿದೆ. ರೋಗ ನಿವಾರಣೆಗೆ ಚಿಕಿತ್ಸೆಯಷ್ಟೇ ಪೌಷ್ಟಿಕ ಆಹಾರ ಸೇವನೆಯೂ ಮುಖ್ಯ ಎಂದರು.

ನಿಕ್ಷಯ್ ಮಿತ್ರ ಕುರಿತು ಹೆಚ್ಚಿನ ಪ್ರಚಾರ ನೀಡಬೇಕು. ದಾನಿಗಳು, ಸಂಘ ಸಂಸ್ಥೆಗಳಿಂದ ಪೌಷ್ಟಿಕ ಆಹಾರ ಕಿಟ್‌ಗಳ ವಿತರಣೆಗೆ ಕ್ರಮ ವಹಿಸಬೇಕು ಎಂದು ತಿಳಿಸಿದರು.

ಡಿಎಚ್‌ಒ ಡಾ.ಜಿ.ಪಿ. ರೇಣುಪ್ರಸಾದ್ ಮಾತನಾಡಿ, 2025ರ ವೇಳೆಗೆ ಟಿಬಿ ಮುಕ್ತ ಭಾರತವನ್ನಾಗಿಲು ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕಳೆದ 2024ರ ಡಿ. 7ರಿಂದ ಪ್ರಾರಂಭವಾಗಿರುವ ಈ ಅಭಿಯಾನ ಮಾ.24ರವರೆಗೆ ನಡೆಯಲಿದೆ ಎಂದರು.

ಡಿವೈಎಸ್‌ಪಿ ಪಿ.ಕೆ. ದಿನಕರ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸಿ.ಒ. ಸುಧಾ, ಡಿಎಸ್ ಡಾ. ರವೀಂದ್ರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಂದ್ರಶೇಖರ್ ಕಂಬಾಳಿಮಠ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್‌ಹೆಬ್ಬಳ್ಳಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕ ಮಹೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಭಾರತಿ ಆರ್. ಬಣಕಾರ್, ಡಿಡಿಪಿಐ ಎಂ.ಆರ್. ಮಂಜುನಾಥ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net