

ಅರಕಲಗೂಡು: ಕ್ಯಾನ್ಸರ್ ಮಾರಕ ಕಾಯಿಲೆ ಎಂದು ಚಿಂತಿಸದೆ ಸೂಕ್ತ ಕಾಲದಲ್ಲಿ ಲಸಿಕೆ ಪಡೆದರೆ ರೋಗದಿಂದ ಗುಣಮುಖರಾಗಲು ಸಾಧ್ಯವಿದೆ ಎಂದು ಶ್ರೀ ಅರಸೀಕಟ್ಟೆ ಅಮ್ಮ ದೇವಾಲಯ ಸಮಿತಿ ಅಧ್ಯಕ್ಷ ಎ.ಟಿ.ರಾಮಸ್ವಾಮಿ ಸಲಹೆ ನೀಡಿದರು.
ತಾಲೂಕಿನ ಶ್ರೀ ಅರಸೀಕಟ್ಟೆ ಅಮ್ಮ ದೇವಾಲಯ ಸಮಿತಿಯಿಂದ ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಗುರುವಾರ ಮಹಿಳೆಯರಿಗೆ ಹಮ್ಮಿಕೊಂಡಿದ್ದ ಗರ್ಭ, ಕೊರಳ ಕ್ಯಾನ್ಸರ್ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದ ಅವರು, ಅನೇಕ ಮಹಿಳೆಯರು ಸೂಕ್ತ ಸಮಯದಲ್ಲಿ ಲಸಿಕೆ ಪಡೆಯದ ಕಾರಣ ರೋಗದಿಂದ ಬಳಲುವಂತಾಗಿದೆ. ಇದನ್ನು ಮನಗಂಡು ಮಹಿಳೆಯರ ಜೀವ ಉಳಿಸುವ ಸಲುವಾಗಿ ಶಾಲಾ ಹೆಣ್ಣು ಮಕ್ಕಳಿಗೆ ಹಾಗೂ ನೂರಾರು ಮಹಿಳೆಯರಿಗೆ ಲಸಿಕೆ ನೀಡಿ ಪರೀಕ್ಷೆ ನಡೆಸಿ ರೋಗದ ತೀವ್ರತೆ ತಡೆಗಟ್ಟಲು ಆದ್ಯತೆ ನೀಡಲಾಗಿದೆ ಎಂದರು.
ಹಾಸನದ ಐವಿಎಫ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ವೈದ್ಯೆ ಡಾ. ಭವ್ಯಾ ಮಾತನಾಡಿ, ದೇಶದಲ್ಲಿ ಲಕ್ಷಾಂತರ ಮಹಿಳೆಯರು ಗರ್ಭಕೊರಳ ಕ್ಯಾನ್ಸರ್‌ಗೆ ತುತ್ತಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಎಚ್.ಪಿ.ವಿ ವೈರಸ್ ತಗಲದಂತೆ ನಿಗಾವಹಿಸಬೇಕು. ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಿಕೊಂಡು ಲೈಂಗಿಕ ಸಂಪರ್ಕ ಹೊಂದಬಾರದು. ಹಲವರ ಜತೆ ಲೈಂಗಿಕ ಸಂಪರ್ಕ ಹೊಂದುವುದರಿಂದ ಹಾಗೂ ಜನನಾಂಗದ ಅಶುಚಿತ್ವದ ಕಾರಣ ಸೋಂಕು ಉಲ್ಭಣಿಸುತ್ತದೆ. 9ರಿಂದ 26 ವರ್ಷದ ಹೆಣ್ಣು ಮಕ್ಕಳು ಮದುವೆಗೆ ಮುನ್ನ ಸೂಕ್ತ ಲಸಿಕೆ ಪಡೆಯಬೇಕು. 25ರಿಂದ 65 ವರ್ಷದೊಳಗಿನ ಮಹಿಳೆಯರಿ ಪ್ರತಿ 3ರಿಂದ 5 ವರ್ಷದೊಳಗೆ ನಿಯಮಿತವಾಗಿ ಪರೀಕ್ಷೆಗೆ ಒಳಗಾಗಬೇಕು. ಗರ್ಭ ಕೊರಳ ದ್ರವ ಪರೀಕ್ಷಿಸಿ ಜೀವಕೋಶಗಳಲ್ಲಿ ಬದಲಾವಣೆ ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ಡಾ. ಸಾವಿತ್ರಿ, ಶುಶ್ರೂಷಕಿಯರಾದ ಅನಿತಾ, ರೋಜಾ, ಅಶ್ವಿನಿ, ವನಜಾಕ್ಷಿ, ಮೋಸಿನಾ ಮಹಿಳೆಯರ ತಪಾಸಣೆ ನಡೆಸಿದರು.