

ಚಾಮರಾಜನಗರ: ಅನುಭವಿಗಳಿಗೆ, ಹಿರಿಯರಿಗೆ ಮಾತ್ರ ಸೀಮಿತ ಎಂದು ಹಣೆಪಟ್ಟಿ ಕಟ್ಟಿರುವ ಸುಸ್ಥಿರ ಕೃಷಿಯನ್ನು ಅತ್ಯಂತ ಕಿರಿಯನೊಬ್ಬ ಅಚ್ಚುಕಟ್ಟಾಗಿ ಅನುಸರಿಸಿ ಸೈ ಎನಿಸಿಕೊಳ್ಳುತ್ತಿದ್ದಾನೆ. ಗ್ರಾಮೀಣ ಭಾಗದ ಯುವಕರು ಕೃಷಿ ಬಿಟ್ಟು ನಗರ, ಪಟ್ಟಣಗಳಲ್ಲಿ ಕೆಲಸಕ್ಕೆ ಸೇರುತ್ತಿರುವ ನಡುವೆ ಈ ಚಿನ್ನಾರಿ ಮುತ್ತ ್ಯಾಕ್ಟರಿಯಲ್ಲಿ ಕೆಲಸ ಬಿಟ್ಟು ವ್ಯವಸಾಯ ಆರಂಭಿಸಿ ಕಮಾಲ್ ಮಾಡುತ್ತಿದ್ದಾನೆ.
ತಾಲೂಕಿನ ಹೆಗ್ಗೋಠಾರ ಗ್ರಾಮದ ಲೋಕೇಶ್ ಮತ್ತು ಭವಾನಿ ಮಹದೇವಮ್ಮ ಪುತ್ರ 21 ವರ್ಷ ವಯಸ್ಸಿನ ಎಚ್.ಎಲ್.ಪ್ರಜ್ವಲ್‌ಕುಮಾರ್ ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ವಿಷಮುಕ್ತ ಆಹಾರ ನೀಡಲು ರಾಸಾಯನಿಕ ರಹಿತ ಕೃಷಿ ಮಾಡುತ್ತಿದ್ದಾನೆ.
ಗ್ರಾಮದ ಹೊರವಲಯದಲ್ಲಿ ಇವರಿಗೆ ಸೇರಿದ 2 ಎಕರೆ ಜಮೀನಿದೆ. ಪಿಯುಸಿ, ಐಟಿಐ ಓದಿರುವ ಪ್ರಜ್ವಲ್ ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದ ್ಯಾಕ್ಟರಿಯೊಂದರಲ್ಲಿ ಕೆಲಸಕ್ಕೆ ಮಾಡುತ್ತಿದ್ದ. ತಂದೆ ಲೋಕೇಶ್ ರಾಸಾಯನಿಕ ಬಳಕೆ ಮಾಡಿ ಬೆಳೆದಿದ್ದ ಸಲು ಕೈಕೊಟ್ಟ ಹಿನ್ನೆಲೆಯಲ್ಲಿ ತಾನೇ ಕೃಷಿ ಅಖಾಡಕ್ಕೆ ಇಳಿಯಲು ನಿರ್ಧರಿಸಿ ಎರಡು ವರ್ಷಗಳ ಹಿಂದೆ ಕೆಲಸ ಬಿಟ್ಟ.
2 ಎಕರೆ ಜಮೀನಿನಲ್ಲಿ ಸಾವಯವ ಪದ್ಧತಿಯಲ್ಲಿ ಮಿಶ್ರ ಬೇಸಾಯ ಆರಂಭಿಸಿದ. ಸಾಕಿರುವ 6 ಹಸುಗಳಲ್ಲಿ ಎರಡು ಹಸುಗಳಿಂದ ಸಿಗುವ ಹಾಲಿನ ಹಣ ್ಯಾಕ್ಟರಿಯಲ್ಲಿ ದೊರೆಯುತ್ತಿದ್ದ ಸಂಬಳಕ್ಕೆ ಸಮವಾಯಿತು. ಇಂದು ಕೃಷಿ ಬಿಟ್ಟು ತಿಂಗಳ ಸಂಬಳಕ್ಕಾಗಿ ಬೇರೊಂದು ಕಡೆ ಕೆಲಸ ಸೇರುವ ಯುವಕರ ನಡುವೆ 21 ವರ್ಷ ವಯಸ್ಸಿನ ಪ್ರಜ್ವಲ್ ತನ್ನ ಕೆಲಸಕ್ಕೆ ಆಳು, ಅರಸ ಎರಡೂ ತಾನೇ ಆಗಿದ್ದಾನೆ. ಊರು ಬಿಟ್ಟು ಉದ್ಯೋಗ ಅರಸಿ ಹೋಗಿರುವ ಮಕ್ಕಳನ್ನು ಮರಳಿ ಮನೆಗೆ ಕರೆತರಲು ಅಪ್ಪಂದ್ರು ಬಯಸುತ್ತಾರೆ. ಇಲ್ಲಿ ಗಾರೆ ಕೆಲಸ ಮಾಡುವ ತಂದೆ ಲೋಕೇಶ್ ಅವರನ್ನು ಮುಂದಿನ ದಿನಗಳಲ್ಲಿ ಕೆಲಸ ಬಿಡಿಸಿ ಕೃಷಿಗೆ ಮರಳಿ ಕರೆತರಬೇಕೆಂಬ ಗುರಿಯನ್ನು ಮಗ ಪ್ರಜ್ವಲ್ ಹೊಂದಿದ್ದಾನೆ. ಈತನ ಜಮೀನಿಗೆ ಭೇಟಿ ನೀಡುವ ಸ್ನೇಹಿತರು ತಾವೂ ಸಾವಯವ ವಿಧಾನದಲ್ಲಿ ಕೃಷಿ ಮಾಡಬೇಕೆಂಬ ಹಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ.
ತಾಯಿಯೇ ಪ್ರೇರಣೆ:
ಮಕ್ಕಳು ಮಾಡುವ ಒಳ್ಳೆಯ ಕೆಲಸಗಳಿಗೆ ಪ್ರತಿಯೊಬ್ಬ ತಾಯಿಯ ಆಶೀರ್ವಾದ ಇದ್ದೇ ಇರುತ್ತದೆ. ಹಾಗೆಯೇ ಪ್ರಜ್ವಲ್‌ಗೂ ಕೂಡ ್ಯಾಕ್ಟರಿಯಲ್ಲಿ ಕೆಲಸ ಬಿಟ್ಟು ಕೃಷಿ ಮಾಡಲು ಸಾಥ್ ಕೊಟ್ಟಿದ್ದೇ ತಾಯಿ ಭವಾನಿ ಮಹದೇವಮ್ಮ. ತಂದೆ ಲೋಕೇಶ್ ಜಮೀನಿನಲ್ಲಿ ರಾಸಾಯನಿಕ ಬಳಕೆ ಮಾಡಿ ಬೆಳೆದಿದ್ದ ಬೆಳೆ ರೋಗಬಾಧೆಯಿಂದ ಕೈಕೊಟ್ಟಿತ್ತು. ಹೀಗಾಗಿ ಸಾವಯವ ಪದ್ಧತಿಯಲ್ಲಿ ಕೃಷಿ ಮಾಡಲು ಪ್ರಜ್ವಲ್ ನಿರ್ಧರಿಸಿದಾಗ ತಾಯಿ ಭವಾನಿ ಮಹದೇವಮ್ಮ ಬೆನ್ನೆಲುಬಾಗಿ ನಿಂತರು. ಇದರ ಪರಿಣಾಮ ಮಗ ಪ್ರಜ್ವಲ್ 2 ಎಕರೆ ಜಮೀನಿನಲ್ಲಿ ಸ್ವಲ್ಪವೂ ರಾಸಾಯನಿಕ ಔಷಧಿ, ಗೊಬ್ಬರ ಬಳಕೆ ಮಾಡದೆ 1 ಎಕರೆಯಲ್ಲಿ ಟೊಮೋಟೋ(2500 ಪೈರು), ಮುಕ್ಕಾಲು ಎಕರೆಯಲ್ಲಿ ಮೆಕ್ಕೆಜೋಳ, ಮೆಣಸಿನಕಾಯಿ, 100 ತೆಂಗಿನ ಸಸಿಗಳು, 20 ಬಾಳೆ, ಬದನೆ, ಪರಂಗಿ, 2 ಮೂಸಿಂಬೆ, ಮೇವಿನ ಹುಲ್ಲು ಮತ್ತು ಇನ್ನಿತರೆ ಗಿಡಗಳನ್ನು ಬೆಳೆದಿದ್ದಾನೆ. 1 ಬೋರ್‌ವೆಲ್ ಇದ್ದು, ಹನಿ ನೀರಾವರಿ ಪದ್ಧತಿ ಮೂಲಕ ಜಲ ನೀಡುತ್ತಿದ್ದಾನೆ. ಸರ್ಕಾರದಿಂದ ಯಾವುದೇ ಪ್ರಯೋಜಗಳನ್ನು ಪಡೆದುಕೊಂಡಿಲ್ಲ. ಇಂತಹ ಯುವ ರೈತರಿಗೆ ಸೌಲಭ್ಯಗಳ ಕುರಿತು ಮಾಹಿತಿ ತಿಳಿಸಿಕೊಡುವ ಅಗತ್ಯವಿದೆ.
ರಾಸಾಯನಿಕ ಮುಕ್ತ ಬೆಳೆ:
ಸಾವಯವ ವಿಧಾನದಲ್ಲಿ ಕೃಷಿ ಮಾಡಬೇಕೆಂದು ಬಯಸುವ ರೈತರಿಗೆ ಅದರಲ್ಲೂ ಯುವಕರಿಗೆ ಪ್ರಜ್ವಲ್ ಜಮೀನು ಉತ್ತಮ ಪ್ರಾತ್ಯಕ್ಷಿಕೆ ಸ್ಥಳವಾಗಿದೆ. ರಾಸಾಯನಿಕ ಮುಕ್ತವಾಗಿ ಬೆಳದಿರುವ ಟಮೋಟೋ ಬೆಳೆಗಳಲ್ಲಿ ಉತ್ತಮ ಇಳುವರಿ ಬಂದಿದೆ. ಗಿಡಗಳಲ್ಲಿ ಕಾಯಿ, ಹಣ್ಣುಗಳು ಹೇರಳವಾಗಿವೆ. ಟೊಮೋಟೋ ಬೆಳೆಯನ್ನು ಕಾಡುವ ಊಜಿ ಕೀಟದ ಕಾಟದ ಮುಂದೆ ರಾಸಾಯನಿಕ ಜೌಷಧಿ ಸಿಂಪಡಿಸಿದರೂ ಕಡಿಮೆಯಾಗಲ್ಲ. ಆದರೆ ಪ್ರಜ್ವಲ್ ಬೆಳೆದಿರುವ ಗಿಡಗಳಲ್ಲಿ ಕಾಯಿ, ಹಣ್ಣುಗಳು ಆರೋಗ್ಯಕರವಾಗಿವೆ. ಮೆಕ್ಕೆಜೋಳ ಕೂಡ ನಳನಳಿಸುತ್ತಿವೆ. ಮೆಣಸಿನಕಾಯಿಯೂ ಚೆನ್ನಾಗಿ ಬಂದಿವೆ. ಈ ಯಾವ ಬೆಳೆಗಳಿಗೂ ರಾಸಾಯನಿಕ ಬಳಸಿಲ್ಲ. ಸಾವಯವ ವಿಧಾನದಲ್ಲೇ ಉಪಚಾರ ಮಾಡುತ್ತಿದ್ದಾನೆ. ಹಲವು ರೈತರಿಗೆ ಮಾರ್ಗದರ್ಶನ ನೀಡುತ್ತಿರುವ ಇಕ್ರಾ ಸಂಸ್ಥೆಯ ಕಾರ್ಯಕರ್ತ ಶಿವಲಿಂಗೇಗೌಡ ಪ್ರಜ್ವಲ್‌ಗೆ ಸಲಹೆ, ಸೂಚನೆಗಳನ್ನು ನೀಡುತ್ತಿದ್ದಾರೆ.
ಎಲೆಕಷಾಯ, ಕೊಟ್ಟಿಗೆ ಗೊಬ್ಬರ, ಗಂಜಲ ಸಿಂಪಡಣೆ ಇನ್ನಿತರೆ ನೈಸರ್ಗಿಕ ವಿಧಾನವನ್ನು ಬಳಕೆ ಮಾಡಿಕೊಂಡು ಕೃಷಿ ಮಾಡುತ್ತಿದ್ದಾನೆ. ಬೆಳೆದ ಕಳೆಯನ್ನು ಕಿತ್ತು ಅಲ್ಲೇ ಕೊಳೆಸಿ ಭೂಮಿಗೆ ಗೊಬ್ಬರ ಮಾಡುತ್ತಿದ್ದಾನೆ. ಬೆಳೆಯೇನೋ ಉತ್ತಮವಾಗಿ ಬಂದಿದೆ. ಆದರೆ ಎಲ್ಲ ರೈತರನ್ನೂ ಕಾಡುವ ಸವಾಲೇನೆಂದರೆ ಬೆಲೆ ಸಮಸ್ಯೆ. ಟೊಮೋಟೊಗೆ ಬೆಲೆ ಇಲ್ಲದ ಕಾರಣ ನಷ್ಟದ ಆತಂಕವಿದೆ. ಆದರೆ ಪ್ರಜ್ವಲ್ ಅಧಿಕ ಬಂಡವಾಳ ಹಾಕದೆ, ಕಡಿಮೆ ವೆಚ್ಚದಲ್ಲಿ ಕೃಷಿ ಮಾಡುತ್ತಿರುವುದು, ಏಕ ಬೆಳೆಯನ್ನೇ ನಂಬಿ ಕೂರದೆ ವಿವಿಧ ಬೆಳೆಗಳನ್ನು ಬೆಳೆಯುತ್ತಿರುವುದು ಅನುಕೂಲಕರವಾಗಿದೆ.
ಹಳ್ಳಿಕಾರ್ ದನ, ಹಸುಗಳ ಸಾಕಾಣಿಕೆ: ಯುವ ರೈತ ಪ್ರಜ್ವಲ್ ತನ್ನ ಜಮೀನಿನಲ್ಲೇ ಕೊಟ್ಟಿಗೆ ನಿರ್ಮಾಣ ಮಾಡಿಕೊಂಡು ಹೈನುಗಾರಿಕೆಯನ್ನೂ ಮಾಡುತ್ತಿದ್ದಾನೆ. 8-10 ತಿಂಗಳ ಎರಡು ಹಳ್ಳಿಕಾರ್ ತಳಿಯ 1 ಜತೆ ದನಗಳನ್ನು ಖರೀದಿಸಿ ಸಾಕುತ್ತಿದ್ದಾನೆ. ಹಾಲು ಕೊಡುವ 2 ಹಸುಗಳಿವೆ. ಬೆಳಗ್ಗೆ ಮತ್ತು ಸಂಜೆ ಡೇರಿಗೆ ಹಾಲು ಹಾಕುತ್ತಾನೆ. 2 ಕರುಗಳನ್ನು ಸಾಕಿದ್ದಾನೆ. ಕೊಟ್ಟಿಗೆಯಲ್ಲಿ ಗಂಜಲ ಶೇಖರಣೆಗೆ ವ್ಯವಸ್ಥೆ ಮಾಡಿಕೊಂಡಿದ್ದಾನೆ. ಗೊಬ್ಬರವನ್ನು ಬೆಳೆಗಳಿಗೆ ಹಾಕುತ್ತಿದ್ದಾನೆ.
ನಾನು ಬದನಗುಪ್ಪೆ-ಕೆಲ್ಲಂಬಳ್ಳಿಯ ್ಯಾಕ್ಟರಿಯಲ್ಲಿ ಕೆಲಸ ಬಿಟ್ಟು ನೈಸರ್ಗಿಕ ಕೃಷಿ, ಹೈನುಗಾರಿಕೆ ಮಾಡುತ್ತಿದ್ದೇನೆ. ಅಲ್ಲಿ ಸಿಗುತ್ತಿದ್ದ ಸಂಬಳವನ್ನು ಇಲ್ಲೇ ಸಂಪಾದನೆ ಮಾಡುತ್ತಿದ್ದೇನೆ. ಬೆಳೆ ಬೆಳೆಯದೆ ಭೂಮಿಯನ್ನು ಪಾಳಬಿಟ್ಟು ಒಂದು ದಿನ ಭೂಮಿಯನ್ನೇ ಮಾರಾಟ ಮಾಡಿ ಅಲ್ಲೇ ಉದ್ಯೋಗಕ್ಕೆ ಸೇರಿದರೆ ಏನು ಪ್ರಯೋಜನ. ರೈತ ಕುಟುಂಬ ಇಂತಹ ಸ್ಥಿತಿಗೆ ಬರಲು ಮನೆಯ ಮಕ್ಕಳೇ ಕಾರಣರಾಗಬಾರದು. ಗ್ರಾಮೀಣ ಭಾಗದ ಯುವಕರನ್ನು ಮಾಲೀಕನ ಸ್ಥಾನಕ್ಕೆ ಏರಿಸುವ ವೃತ್ತಿಯೇ ಕೃಷಿ. ಸಾವಯವ ವಿಧಾನದಲ್ಲಿ ವ್ಯವಸಾಯ ಮಾಡಿದರೆ ಖರ್ಚು ಕಡಿಮೆ, ವಿಷ ಮುಕ್ತ ಆಹಾರ ಬೆಳೆಯಬಹುದು. ಹಂತ ಹಂತವಾಗಿ ಲಾಭ ಕಾಣಬಹುದು. ಎಚ್.ಎಲ್.ಪ್ರಜ್ವಲ್‌ಕುಮಾರ್, ಯುವ ರೈತ, ಹೆಗ್ಗೋಠಾರ