ಸುಸ್ಥಿರ ಅಭಿವೃದ್ಧಿಯಿಂದ ಆರೋಗ್ಯಯುತ ಸಮಾಜ ನಿರ್ಮಾಣ

11
Published on

ಮೈಸೂರು: ಸುಸ್ಥಿರ ಅಭಿವೃದ್ಧಿ ಮೂಲಕ ಉತ್ತಮ ಹಾಗೂ ಶಾಂತಿಯುತ ಸಮಾಜ ನಿರ್ಮಾಣ ಸಾಧ್ಯ ಎಂದು ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಸದಾಶಿವೇಗೌಡ ಅಭಿಪ್ರಾಯಪಟ್ಟರು.


ಇಂಜಿನಿಯರ್‌ಗಳ ಸಂಸ್ಥೆಯ ವತಿಯಿಂದ ನಗರದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ವಿಶ್ವ ಇಂಜಿನಿಯರಿಂಗ್ ದಿನಾಚರಣೆ ಕಾರ್ಯಕ್ರಮದಲ್ಲಿ ‘ಸುಸ್ಥಿರ ಅಭಿವೃದ್ಧಿ’ ಕುರಿತು ಉಪನ್ಯಾಸ ನೀಡಿದರು.


ಸುಸ್ಥಿರ ಅಭಿವೃದ್ಧಿ ಜಗತ್ತು ಬದಲಾಯಿಸಲು ಸಹಕಾರಿಯಾಗಲಿದೆ. ಅಲ್ಲದೆ ಶುದ್ಧಗಾಳಿ, ಉತ್ತಮ ಆರೋಗ್ಯ ದೊರಕುತ್ತದೆ. ಪರಿಪೂರ್ಣ ಜೀವನ ಶೈಲಿ ರೂಢಿಸಿಕೊಳ್ಳಬಹುದು. ಪರಿಸರಕ್ಕೆ ಮಾರಕವಾಗಿರುವ ಇಂಗಾಲದ ಡೈ ಆಕ್ಸೈಡ್ ಕಡಿಮೆ ಮಾಡುವುದು ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ರಹದಾರಿ. ಈ ನಿಟ್ಟಿನಲ್ಲಿ ಯುವ ಸಮುದಾಯವು ಮುಂದಾಗಬೇಕು ಎಂದರು.


ತಮ್ಮ ಕಾಲೇಜಿನ ಕ್ಯಾಂಪಸ್‌ನಲ್ಲಿ ಅಳವಡಿಸಿಕೊಂಡಿರುವ ಸುಸ್ಥಿರ ಅಭಿವೃದ್ಧಿ ಕಾರ್ಯ ಯೋಜನೆಯನ್ನು ವಿವರಿಸಿದ ಅವರು, ನೀರಿನ ಬಳಕೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದು, ಮಳೆ ನೀರು ಕೊಯ್ಲು, ಅಂತರ್ಜಲ ಸಂರಕ್ಷಣೆ, ಮರುಪೂರಣ ಕಾರ್ಯಕ್ಕೆ ಕ್ರಮ ವಹಿಸಲಾಗಿದೆ ಎಂದರು.


ಸುಸ್ಥಿರ ಅಭಿವೃದ್ಧಿ ಕುರಿತು ಶಾಲಾ-ಕಾಲೇಜಿನ ಪಠ್ಯಕ್ರಮದಲ್ಲಿ ಅಳವಡಿಸಬೇಕು. ಜತೆಗೆ, ಅದನ್ನು ಬೋಧನೆಯೊಂದಿಗೆ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.


ಅರಿವಿನ ಕೊರತೆಯಿಂದ ನೈಸರ್ಗಿಕ ಸಂಪತ್ತು ಪೋಲಾಗುತ್ತಿದೆ. ನೀರು, ವಿದ್ಯುತ್ ಇನ್ನಿತರ ಸಂಪತ್ತು ವ್ಯರ್ಥವಾಗುತ್ತಿದೆ. ಈ ಕುರಿತು ಯುವ ಜನರಲ್ಲಿ ಅರಿವು ಮೂಡಿಸಿದರೆ ಇದನ್ನು ತಡೆಯಲು ಸಾಧ್ಯ. ಜಾಗತಿಕ ತಾಪಮಾನದ ನಿಯಂತ್ರಣದ ನಿಟ್ಟಿನಲ್ಲಿ ಸುಸ್ಥಿರ ಅಭಿವೃದ್ಧಿ ಹಿಂದೆಂದಿಗಿಂತಲೂ ಹೆಚ್ಚಿನ ಅಗತ್ಯವಿದ್ದು, ಗುರಿ ಸಾಧಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದರು


ಐಇಐ ಸಂಸ್ಥೆಯ ಮುಖ್ಯಸ್ಥ ಬಿ.ಎಸ್. ಪ್ರಭಾಕರ್, ಸಂಸ್ಥೆಯ ಸಂಚಾಲಕ ಕೆ.ಬಿ. ಭಾಸ್ಕರ್, ಕಾರ್ಯದರ್ಶಿ ಎಚ್.ಎಸ್. ಸುರೇಶ್ ಬಾಬು, ಜಂಟಿ ಕಾರ್ಯದರ್ಶಿ ಡಾ.ಆರ್. ದೀಪು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net