

ವಿಜಯವಾಣಿ ಸುದ್ದಿಜಾಲ ಧಾರವಾಡ
ಜ್ಞಾನಾರ್ಜನೆ, ಆದರ್ಶ ವಿದ್ಯಾರ್ಥಿಯ ಸೊತ್ತು. ಪಡೆದ ಜ್ಞಾನ ಸುಸಂಸ್ಕೃತ ಸಮಾಜ ಕಟ್ಟುವ ಕಾರ್ಯಕ್ಕೆ ಸಹಕಾರಿ ಆಗಬೇಕು ಎಂದು ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪ ಅಡಿ ಕುರುಬಗಟ್ಟಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸೋಮವಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಅಧ್ಯಯನದಲ್ಲಿ ಏಕಾಗ್ರತೆ ಸಾಧಿಸುವುದು ಹೇಗೆ? ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲರಲ್ಲೂ ಒಂದೊಂದು ಅದಮ್ಯ ಶಕ್ತಿ ಇರುತ್ತದೆ. ಆ ಶಕ್ತಿ ಸದ್ಬಳಕೆ ಮಾಡಿಕೊಂಡು ಅಧ್ಯಯನದಲ್ಲಿ ತೊಡಗಬೇಕಲ್ಲದೆ, ಆರೋಗ್ಯ ಕೆಡದಂತೆ ಸಹ ಎಚ್ಚರ ವಹಿಸಬೇಕು. ಗ್ರಾಮೀಣ ಮಕ್ಕಳು ಸಂಕುಚಿತ ಭಾವನೆ, ಕೀಳರಿಮೆ ಬಿಡಬೇಕು. ಹಸನ್ಮುಖಿಯಾಗಿ ಪರೀಕ್ಷೆ ಎದುರಿಸಿ ಸಾಧಿಸುತ್ತೇನೆಂಬ ಛಲವಿರಲಿ. ಆತ್ಮ ವಿಶ್ವಾಸವೇ ದೊಡ್ಡ ಶಕ್ತಿ ಎಂದರು.
ಪ್ರಶಾಂತ ಪಾಟೀಲ ಉಪನ್ಯಾಸ ನೀಡಿ, ಅಧ್ಯಯನಶೀಲರಾದಾಗ ಓದಿನ ಬಗ್ಗೆ ಪ್ರೀತಿ, ಆಸಕ್ತಿ ಬರಲಿದೆ. ವಿದ್ಯಾರ್ಥಿಗಳು ಹಗಲುಗನಸು ಕಾಣದೆ ಧನಾತ್ಮಕ ಚಿಂತನೆ ಬೆಳೆಸಿಕೊಳ್ಳಬೇಕು. ಪೂರ್ವ ಸಿದ್ಧತೆ ಇಲ್ಲದ ಓದು ಭಯ ಹುಟ್ಟಿಸುತ್ತದೆ. ಈ ಭಯ ಆತ್ಮವಿಶ್ವಾಸ ಕುಗ್ಗಿಸುತ್ತದೆ. ಯಾವುದೇ ಆತಂಕ, ಭಾವೋದ್ವೇಗಕ್ಕೆ ಒಳಗಾಗದೆ ಮನಸ್ಸನ್ನು ಸಮಚಿತ್ತದಲ್ಲಿ ಇರಿಸಿಕೊಳ್ಳಿ. ಪರೀಕ್ಷೆ ಸಿದ್ಧತೆಯ ಸಮಯ ಹಣಕ್ಕಿಂತ ಶ್ರೇಷ್ಠ. ನಿರುತ್ಸಾಹಿಗಳಾಗದೆ ಪರೀಕ್ಷೆಯನ್ನು ಒಂದು ಹಬ್ಬ ಎಂದು ಸಂಭ್ರಮಿಸಬೇಕು ಎಂದರು.
ಮುಖ್ಯಾಧ್ಯಾಪಕಿ ಸರಸ್ವತಿ ನಾಯಕ, ಪಿಡಿಒ ಸಿ.ಎಂ. ಧರೆಣ್ಣವರ ಪರೀಕ್ಷಾ ಸಿದ್ಧತೆ ಕುರಿತು ಮಾಹಿತಿ ನೀಡಿದರು. ಪ್ರೌಢ ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷ ಬಸವರಾಜ ವಕ್ಕುಂದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಸುನಿತಾ ಗುಡಗೊಳ್ಳಿ, ಪ್ರೇಮಾ ಯಲಿಗಾರ, ಸುನಿತಾ ಪಾಟೀಲ, ಹೇಮಂತ ಲಮಾಣಿ, ಶಶಿಕಲಾ ಕಮ್ಮಾರ ಸೇರಿ ಇತರರು ಇದ್ದರು.
ಸೋಮಶೇಖರ ಬೆನಕನಾಳ ಸ್ವಾಗತಿಸಿದರು. ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಧರ ಗಸ್ತಿ ನಿರೂಪಿಸಿದರು. ಸುಮಂಗಲಾ ಕುಲಕರ್ಣಿ ವಂದಿಸಿದರು.