

ಹಾಸನ: ಹಿರಿಯ ಕವಯತ್ರಿ, ವಚನಗಾರ್ತಿ ಸುಶೀಲಾ ಸೋಮಶೇಖರ ಅವರ ಜೀವಪರ ನಿಲುವುಗಳ ಕೃತಿ ಸಂಸ್ಕೃತಿ ಪ್ರತೀಕವಾಗಿದೆ. ಇಂತಹ ಕೃತಿಗಳು ಸಮಾಜದಲ್ಲಿ ಬದಲಾವಣೆ ತರಲಿವೆ ಎಂದು ಸಾಹಿತಿ ಸಮುದ್ರವಳ್ಳಿ ವಾಸುರವರು ಹೇಳಿದರು.
ನಗರದ ಸಾಲಗಾಮೆ ಮುಖ್ಯ ರಸ್ತೆಯಲ್ಲಿರುವ ಸೆಂಟ್ರಲ್ ಕಾಮರ್ಸ್ ಪಿಯು ಕಾಲೇಜಿನಲ್ಲಿ ಕವಯತ್ರಿ ಸಿ.ಎನ್. ನೀಲಾವತಿ ಅವರ ಪ್ರಾಯೋಜಕತ್ವದಲ್ಲಿ 318ನೇ ಸೋಮವಾರ ನಡೆದ ಮನೆ ಮನೆ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಸುಶೀಲಾ ಸೋಮಶೇಖರ ಅವರ ‘ಶರಣರ ವಚನಗಳಲ್ಲಿ ಜೀವಪರ ನಿಲುವುಗಳ’ ಕೃತಿ ಕುರಿತು ಮಾತನಾಡಿದ ಅವರು, ಸುಶೀಲಾ ಸೋಮಶೇಖರ್ ಅವರ ಪ್ರಕಟಿತ 20 ಕೃತಿಗಳಲ್ಲಿ 6 ವಚನ ಸಾಹಿತ್ಯ ಕೃತಿಗಳಾಗಿ ವಚನ ಸಾಹಿತ್ಯದಲ್ಲಿ ವಿಶೇಷ ಕೃತಿಗಳಾಗಿವೆ. ಶರಣರ ವಚನಗಳು ಮಾನವ ಸಂಸ್ಕೃತಿಯ ಪ್ರತೀಕವಾಗಿವೆ. ಶರಣರು ತಾವು ಕಂಡುಂಡ ಅನುಭವಗಳನ್ನು ವಚನವಾಗಿಸಿದ್ದರು. ಸುಶೀಲಾ ಅವರ ಕೃತಿಯಲ್ಲಿ ವಚನಗಳಲ್ಲಿ ಕಾವ್ಯಾಂಶ, ದಾಂಪತ್ಯ, ಮನೋಪರಿವರ್ತನೆ ಜತೆಗೆ ಕೃಷಿ ಚಟುವಟಿಕೆ ಕುರಿತು ವಿವರಗಳು ಲಭ್ಯವಾಗಿರುವುದು ವಿಶೇಷ ಎಂದರು.
ವಚನಗಳು ಕಿರಿದರಲ್ಲಿ ಹಿರಿದರ್ಥವನ್ನು ನೀಡುತ್ತವೆ. 12ನೇ ಶತಮಾನದ ವಚನ ಸಾಹಿತ್ಯಕ್ಕೆ ಅಭೂತಪೂರ್ವ ಕೊಡುಗೆ ನೀಡಿದೆ. ಸಾಮಾಜಿಕ ಅಸಮಾನತೆ, ಮೌಢ್ಯ, ಅಸ್ಪೃಶ್ಯತೆ, ಅಂಧಾನುಕರಣೆ, ಅನಿಷ್ಟ ಪದ್ಧತಿಗಳ ವಿರುದ್ಧ ಧ್ವನಿ ಎತ್ತಿದ್ದರು. ಅವರ ಬದುಕು, ಬರಹ ಎರಡೂ ಒಂದೇ ಆಗಿತ್ತು. ಕೃತಿಕಾರರು ವಚನಗಳನ್ನು ಕೇವಲ ವಿಶ್ಲೇಷಣೆ ಮಾಡದೆ ಶರಣರ ಬದುಕು, ಶರಣರ ನಿಲುವುಗಳ ಜತೆಗೆ ವಾಸ್ತವ ನೆಲೆಗಟ್ಟಿನಲ್ಲಿ ಸಮಷ್ಟಿ ಪ್ರಜ್ಞೆಯನ್ನಿಟ್ಟುಕೊಂಡು ಅಚ್ಚುಕಟ್ಟಾಗಿ ತಮ್ಮ ಕೃತಿಯಲ್ಲಿ ಎಳೆಎಳೆಯಾಗಿ ತೆರೆದಿಟ್ಟಿದ್ದಾರೆ ಎಂದರು.
ನಂತರ ನಡೆದ ಕವಿ ಗೋಷ್ಠಿಯಲ್ಲಿ ಕವಿ ಹಾಗೂ ಕವಯತ್ರಿಗಳು ಕವನ ವಾಚಿಸಿದರು.
ಕಾರ್ಯಕ್ರಮದಲ್ಲಿ ಸಾಹಿತಿ ಗೊರೂರು ಅನಂತರಾಜು, ಲೇಖಕಿ ಸುಮಾ ರಮೇಶ್, ಕಾಮಾಕ್ಷಿ ಬಿ.ಜಿ, ಜಯಲಕ್ಷ್ಮೀ ರಾಮ್ ಠಾಕೂರ್, ರಾಣಿ ಚರಶ್ರೀ, ಗಾಯತ್ರಿ ಪ್ರಕಾಶ್, ಶ್ವೇತಾ ಮೋಹನ್, ಧನಲಕ್ಷ್ಮೀ ಜಿ.ಆರ್ ಶ್ರೀಕಾಂತ್, ಕೆ.ಪ್ರಶಾಂತ ಕುಮಾರ್, ಎ.ವಿ ರುದ್ರಾಪ್ಪಾಜಿರಾವ್, ಜಯದೇವಪ್ಪ, ಪ್ರಣತಿ ಪಿ ಹರಿತ್ಸಾ, ಪ್ರಜ್ಞಾ ಪಿ ಹರಿತ್ಸಾ, ನಿರ್ಮಲಾ ಚಂದ್ರಶೇಖರ್, ಪದ್ಮಾವತಿ ವೆಂಕಟೇಶ್, ಬಿ.ಎಸ್.ವನಜಾ ಸುರೇಶ್, ಬಿ.ಸಿ. ವಸಂತಮ್ಮಾ ಮುಂತಾದವರು ಹಾಜರಿದ್ದರು.