ಸುವ್ಯವಸ್ಥಿತ ಸಮಾಜದ ಭದ್ರ ಬುನಾದಿ ಅವಿಭಕ್ತ ಕುಟುಂಬಗಳು

43
Published on

ಮೈಸೂರು: ಮೊದಲೆಲ್ಲ ಇದ್ದ ಅವಿಭಕ್ತ ಕುಟುಂಬಗಳು ಸುವ್ಯವಸ್ಥಿತ ಸಮಾಜದ ಭದ್ರ ಬುನಾದಿಯಾಗಿದ್ದವು. ಆದರೆ ಈಗ ಅವಿಭಕ್ತ ಕುಟುಂಬಗಳು ಮರೆಯಾಗುತ್ತಿದ್ದು, ಸಾಮಾಜಿಕ ಭದ್ರತೆ ಕಡಿಮೆಯಾಗುತ್ತಿದೆ ಎನ್ನುವ ಭಾವನೆ ಮೂಡಿಸಿದೆ ಎಂದು ಮೇಯರ್ ಶಿವಕುಮಾರ್ ವಿಷಾದ ವ್ಯಕ್ತಪಡಿಸಿದರು.
ಮಾತಾ ಅಮೃತಾನಂದಮಯಿ ಅವರ ಎಪ್ಪತ್ತನೇ ಜನ್ಮದಿನದ ಪ್ರಯುಕ್ತ ಬೋಗಾದಿಯಲ್ಲಿರುವ ಅಮೃತ ವಿಶ್ವವಿದ್ಯಾಪೀಠಂ ಮೈಸೂರು ಕ್ಯಾಂಪಸ್, ಅಮೃತ ಕೃಪಾ ಆಸ್ಪತ್ರೆ ಹಾಗೂ ಮಾತಾ ಅಮೃತಾನಂದಮಯಿ ಮಠದಿಂದ ಬುಧವಾರ ಆಯೋಜಿಸಿದ್ದ ‘ಸೇವನವಾರಂ’ ಕಾರ್ಯಕ್ರಮದಲ್ಲಿ ಅವರು ಫಲಾನುಭವಿಗಳಿಗೆ ಉಚಿತ ಆಹಾರದ ಕಿಟ್ ವಿತರಿಸಿ ಮಾತನಾಡಿದರು.
ಅವಿಭಕ್ತ ಕುಟುಂಬಗಳು ಒಬ್ಬ ವ್ಯಕ್ತಿಯ ಸೋಲು, ಗೆಲುವಿಗೆ ಬೆನ್ನೆಲುಬಾಗಿ ನಿಲ್ಲುತ್ತವೆ. ವ್ಯಕ್ತಿಯ ಮಾನಸಿಕ ಬೆಂಬಲವಾಗಿ ಈ ಕುಟುಂಬಗಳು ಇರುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಅವಿಭಕ್ತ ಕುಟುಂಬದ ಪರಿಕಲ್ಪನೆ ಮಾಯವಾಗುತ್ತಿದೆ. ಹಾಗಾಗಿ, ಉತ್ತಮ ಸಮಾಜಕ್ಕೆ ಕುಟುಂಬ ವ್ಯವಸ್ಥೆ ತುಂಬಾ ಮುಖ್ಯ ಎಂದು ಅಭಿಪ್ರಾಯಪಟ್ಟರು.
ಇಂದಿನ ಮಕ್ಕಳಿಗೆ ಸಾಕಷ್ಟು ಆಕರ್ಷಣೆಗಳಿದ್ದು, ಕೆಲವು ಸಲ ಅವರು ಹಾದಿ ತಪ್ಪುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಮಕ್ಕಳ ವರ್ತನೆಗಳ ಬಗ್ಗೆ ತಾಯಂದಿರು ಗಮನ ಕೊಡಲೇಬೇಕಾಗಿದೆ. ಇಂದು ಮಕ್ಕಳನ್ನು ಆವರಿಸುತ್ತಿರುವ ಮೊಬೈಲ್ ಗೀಳು ಹಾಗೂ ಮಾದಕ ದ್ರವ್ಯ ವ್ಯಸನದ ಬಗ್ಗೆಯೂ ಎಚ್ಚರಿಕೆಯಿಂದ ಇರಬೇಕು ಎಂದರು.
ವಯಸ್ಸಾದ ತಂದೆ, ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಪ್ರವೃತ್ತಿ ಇಂದಿನ ಪೀಳಿಗೆಯಲ್ಲಿ ಹೆಚ್ಚುತ್ತಿದೆ. ಎಷ್ಟೋ ಮಕ್ಕಳು ತಂದೆ-ತಾಯಿಯರನ್ನು ಬಿಟ್ಟು ಹೋಗುತ್ತಿದ್ದಾರೆ. ಇದು ಸಂಸ್ಕಾರವಂತ ಸಮಾಜದ ಲಕ್ಷಣವಲ್ಲ. ಇಂದಿನ ಮಕ್ಕಳು ತಮ್ಮ ಪಾಲಕರ ಕಡೆ ಹೆಚ್ಚಿನ ಗಮನ ಕೊಡಬೇಕು ಎಂದು ಹೇಳಿದರು.
ಮಹಿಳಾ ಸಬಲೀಕರಣದ ಭಾಗವಾಗಿ ಮಾತಾ ಅಮೃತಾನಂದಮಯಿ ಅವರು ನಡೆಸುತ್ತಿರುವ ಕೌಶಲ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿಯರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಇದರ ಜತೆಗೆ ಲೋಕ ಕಲ್ಯಾಣಾರ್ಥವಾಗಿ ಬ್ರಹ್ಮಸ್ಥಾನಂ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಹೋಮ ಮಾಡಲಾಯಿತು.
ಮಠದ ಶ್ರೀಸ್ವಸ್ವರೂಪಾನಂದಪುರಿ ಯತಿಗಳು, ಮಾತಾ ಅಮೃತಾನಂದಮಯಿ ಮಠದ ಮುಖ್ಯಸ್ಥ ಬ್ರಹ್ಮಾಚಾರಿ ಪ್ರಸಾದಾಮೃತಾನಂದ ಚೈತನ್ಯ, ಅಮೃತ ವಿಶ್ವವಿದ್ಯಾಪೀಠಂ ಮೈಸೂರು ಕ್ಯಾಂಪಸ್‌ನ ಸಂಚಾಲಕ ಮುಕ್ತಿದಾಮೃತ ಚೈತನ್ಯ, ಅಮೃತ ವಿಶ್ವವಿದ್ಯಾಪೀಠಂನ ಪ್ರಾಂಶುಪಾಲ ಡಾ.ಜಿ.ರವೀಂದ್ರನಾಥ್, ಅಮೃತ ಕೃಪಾ ಆಸ್ಪತ್ರೆಯ ಡಾ.ವಿಕಾಸ್ ಮೋದಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net