

ಬೆಳಗಾವಿ: ಬೆಳಗಾವಿಯನ್ನು ಎರಡನೇ ರಾಜಧಾನಿಯನ್ನಾಗಿ ಘೋಷಿಸಬೇಕು ಎಂಬುದು ಸೇರಿ ಉತ್ತರ ಕರ್ನಾಟಕದ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಸುವರ್ಣ ವಿಧಾನಸೌಧದ ಎದುರು ನ.11ರಂದು ಬೆಳಗ್ಗೆ 11ರಿಂದ ಸಂಜೆ 4ರವರೆಗೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಎರಡನೇ ರಾಜಧಾನಿಯಾಗಿ ಬೆಳಗಾವಿ ಅಧಿಕೃತವಾಗಿ ಘೋಷಣೆಯಾಗಬೇಕು. ಕಿತ್ತೂರು ಕರ್ನಾಟಕಕ್ಕೆ ಪೂರ್ಣ ಸಚಿವಾಲಯ ಆರಂಭಿಸಬೇಕು ಹಾಗೂ ವಿವಿಧ ಇಲಾಖೆಗಳ ಕಾರ್ಯದರ್ಶಿ ಮಟ್ಟದ ಕಚೇರಿಗಳು ಸುವರ್ಣ ಸೌಧದಿಂದ ಕಾರ್ಯನಿರ್ವಹಿಸುವಂತಾಬೇಕು ಎಂಬ ಬೇಡಿಕೆಗಳನ್ನಿಟ್ಟುಕೊಂಡು ಹೋರಾಟ ಕೈಗೊಳ್ಳಲಾಗಿದೆ ಎಂದರು.
ಸರ್ಕಾರ ಅನುದಾನ ಹಂಚಿಕೆ, ಕಚೇರಿಗಳ ಸ್ಥಾಪನೆ, ವಿವಿಧ ಪ್ರಶಸ್ತಿಗಳ ಆಯ್ಕೆ ಸೇರಿ ಪ್ರತಿ ವಿಚಾರದಲ್ಲೂ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ. ಈ ತಾರತಮ್ಯ ಹೋಗಲಾಡಿಸಬೇಕು, ಇಲ್ಲವೇ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವಾಗಿ ಘೋಷಿಸಬೇಕು ಎಂದು ಆಗ್ರಹಿಸಿದರು. ಅಶೋಕ ಪೂಜಾರಿ, ಪ್ರವೀಣ ಪಾಟೀಲ, ವಿ.ಜಿ.ನೀರಲಗಿಮಠ ಇದ್ದರು.