ಸುವರ್ಣ ಸಂಪೂರ್ತಿ ಮಹೋತ್ಸವ ಅಂಗವಾಗಿ ನಗರದಲ್ಲಿ ಅದ್ದೂರಿ ಮೆರವಣಿಗೆ

ಸುವರ್ಣ ಸಂಪೂರ್ತಿ ಮಹೋತ್ಸವ ಅಂಗವಾಗಿ ನಗರದಲ್ಲಿ ಅದ್ದೂರಿ ಮೆರವಣಿಗೆ
Published on

ಹಾಸನ: ಭೈರವೈಕ್ಯ ಡಾ.ಶ್ರಿ ಬಾಲಗಂಗಾಧರನಾಥ ಸ್ವಾಮೀಜಿ ಅವರ ಪಟ್ಟಾಭಿಷೇಕ ಸುವರ್ಣ ಸಂಪೂರ್ತಿ ಮಹೋತ್ಸವ ಅಂಗವಾಗಿ ನಗರದಲ್ಲಿ ಶುಕ್ರವಾರ ಅದ್ದೂರಿ ಮೆರವಣಿಗೆ ನಡೆಸಲಾಯಿತು.
ನಗರದ ಹಾಸನಾಂಬ ಕಲಾಕ್ಷೇತ್ರ ಆವರಣದಲ್ಲಿ ಮೆರವಣಿಗೆಗೆ ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರಿ ಶಂಭುನಾಥ ಸ್ವಾಮೀಜಿ ಅವರು ಚಾಲನೆ ನೀಡಿದರು. ಕಾಗಿನೆಲೆ ಕನಕಗುರು ಪೀಠದ ಶ್ರಿ ಶಿವಾನಂದಪುರಿ ಸ್ವಾಮೀಜಿ, ಶ್ರಿ ಚಂದ್ರಶೇಖರನಾಥ ಸ್ವಾಮೀಜಿ, ಶ್ರಿ ಕೈಲಾಸಪತಿನಾಥ, ಬೆಂಗಳೂರಿನ ಶ್ರಿ ಸೌಮ್ಯನಾಥ ಸ್ವಾಮೀಜಿ ಹಾಗು ವಿವಿಧ ಮಠಾಧೀಶರು ಮೆರವಣಿಗೆಯುದ್ದಕ್ಕೂ ಹೆಜ್ಜೆ ಹಾಕಿದರು. ಹಾಸನಾಂಬ ಕಲಾಕ್ಷೇತ್ರದಿಂದ ಆರಂಭವಾದ ಮೆರವಣಿಗೆ ಹೇಮಾವತಿ ಪ್ರತಿಮೆ, ಬಿಎಂ ರಸ್ತೆ, ಶಂಕರ ಮಠ ರಸ್ತೆ ಮಾರ್ಗವಾಗಿ ಆದಿಚುಂಚನಗಿರಿ ಮಠ ತಲುಪಿತು.
ಮೆರವಣಿಗೆಯುದ್ದಕ್ಕೂ ವಿವಿಧ ಕಲಾತಂಡಗಳು ಗಮನ ಸೆಳೆದವು. ನೂರಾರು ಮಹಿಳೆಯರು ಪೂರ್ಣಕುಂಭ ಮೆರವಣಿಗೆ ನಡೆಸಿದರು. ವೀರಗಾಸೆ, ಡೊಳ್ಳು ಕುಣಿತ, ನಾಸಿಕ್ ಡೋಲು, ಚಂಡೆ ವಾದ್ಯ, ನಂದಿ ಧ್ವಜ, ಕರಡೆ ವಾದ್ಯ ವೃಂದದವರು ಹೆಜ್ಜೆ ಹಾಕಿದರು. ಆದಿಚುಂಚನಗಿರಿ ಮಹಾಸಂಸ್ಥೆಯ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ, ಮಾಜಿ ಅಧ್ಯಕ್ಷ ಎಚ್.ಎಸ್.ಅನಿಲ್‌ಕುಮಾರ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಕೋಶಾಧ್ಯಕ್ಷ ಬಿ.ಆರ್.ಬೊಮೇಗೌಡ ಅವರು ವಾದ್ಯ ನುಡಿಸುವ ಮೂಲಕ ಭಕ್ತಿ ಮೆರೆದರು. ದಾರಿಯದ್ದಕ್ಕೂ ಭಕ್ತರು ಪುಷ್ಪಾರ್ಚನೆ ಮೂಲಕ ಬಾಲಗಂಧಾರನಾಥ ಸ್ವಾಮೀಜಿ ಅವರನ್ನು ಬರಮಾಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net