

ಹಾಸನ: ಕಥೆಗಾರನಿಗೆ ಸಾಮಾಜಿಕ ಜವಾಬ್ದಾರಿಗಳಿದ್ದು, ಪಾತ್ರಗಳ ಮೂಲಕ ವೈಚಾರಿಕ-ವೈಜ್ಞಾನಿಕ ಮನೋಭಾವವನ್ನು ಸೃಷ್ಟಿಸಬೇಕು ಎಂದು ಸಾಹಿತಿ ಡಾ.ಹೆಚ್.ಆರ್.ಸ್ವಾಮಿ ತಿಳಿಸಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸುವರ್ಣ ಕೆ.ಟಿ.ಶಿವಪ್ರಸಾದ್ ಅವರ ತಿರುವು ಕಥಾ ಸಂಕಲನ ಬಿಡುಗಡೆ ಸಾಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವೆಲ್ಲ ಇಂದಿಗೂ ವೈದಿಕ ಸಂಸ್ಕೃತಿಯನ್ನು ಅನುಸರಿಸಿಕೊಂಡು ಹೋಗುತ್ತಿದ್ದೇವೆ. ಅದನ್ನು ಬಿಟ್ಟು ನಮ್ಮದೆಯಾದ ಇತಿಹಾಸವನ್ನು ಅರಿತಕೊಂಡು ಆ ಮೂಲಕ ಹೊಸ ಸಂಸ್ಕೃತಿಯನ್ನು ಸೃಷ್ಟಿ ಮಾಡಿಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ನಮ್ಮ ಆಲೋಚನೆಗಳು ಮೂಡಬೇಕು. ಹೀಗಾಗಿ ಲೇಖಕಿ ಸುವರ್ಣ ತಮ್ಮ ಬರಹದಲ್ಲಿ ವೈಚಾರಿಕತೆಯನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ತಿರುವು ಕಥಾ ಸಂಕಲನ ಭರವಸೆಯ ಕೃತಿಯಾಗಿದ್ದು, ಕಥೆಗಳು ಸುಲಲಿತವಾಗಿದ್ದು ಪ್ರತಿ ಕಥೆಗಳು ಕೊನೆಯಲ್ಲಿ ಸಖಾಂತ್ಯ ಕಾಣುತ್ತವೆ. ಇದೊಂದು ಆಶಾಭಾವನೆಯಿಟ್ಟುಕೊಂಡಿರುವ ಕೃತಿಯಾಗಿದೆ. ಆದರೆ, ನಮ್ಮ ಕನ್ನಡ ಸಾಹಿತ್ಯ ಲೋಕದಲ್ಲಿ ದಲಿತ, ಬಂಡಾಯ ಸಾಹಿತ್ಯಗಳು ಹುಟ್ಟಿಕೊಂಡಿರುವುದರಿಂದ, ಒಬ್ಬ ದಲಿತ ಲೇಖಕಿಯಾಗಿ ಇನ್ನಷ್ಟು ಆಳವಾಗಿ, ವೈಜ್ಞಾನಿಕ ಮತ್ತು ವೈಚಾರಿಕ ದೃಷ್ಟಿಕೋನದಲ್ಲಿ ಸಮಾಜದ ವ್ಯವಸ್ಥೆಯನ್ನು ನೋಡುವಂತಾಗಬೇಕು. ಕಥೆಗಳಲ್ಲಿ ಬರುವ ಪಾತ್ರಗಳ ಮೂಲಕ ಯೋಚನಾ ಕ್ರಮ, ದಿಕ್ಕು ಬದಲಿಸಬೇಕು ಎಂದು ಹೇಳಿದರು.
ಪ್ರಾಧ್ಯಾಪಕಿ ಡಾ.ಪಿ.ಭಾರತೀದೇವಿ ಮಾತನಾಡಿ, 19-20ನೇ ಶತಮಾನದಲ್ಲಿ ಆಧುನಿಕ ಪ್ರಶ್ನೆಗಳೊಂದಿಗೆ ಕನ್ನಡ ಸಾಹಿತ್ಯದಲ್ಲಿ ಮಹಿಳಾ ಕಥನ ಆರಂಭವಾಗುತ್ತದೆ. ಮಹಿಳೆಯರ ಬಹುತೇಕ ಕಥೆಗಳು ಕೌಟುಂಬಿಕ ಸಂಬಂಧಗಳ ಸಂಕೀರ್ಣತೆಯನ್ನು ಹೆಚ್ಚು ಹಾಜರು ಪಡಿಸುತ್ತವೆ. ಮಹಿಳಾ ಕಥಾ ಸಂಕಲನಗಳು ಹೆಚ್ಚಾಗಿ ಆಧುನೀಕತೆಯನ್ನು ಪ್ರಶ್ನಿಸುತ್ತವೆ. ಕುಟುಂಬ ವ್ಯವಸ್ಥೆಯಲ್ಲಿನ ತಲ್ಲಣ, ಪಲ್ಲಟ, ತುಮುಲಗಳೇ ಹೆಚ್ಚಾಗಿವೆ. ಕೌಟುಂಬಿಕದ ಆಚೆಗೂ ನೋಡುವ ಕೆಲಸವಾಗಬೇಕು. ಸಾಮಾಜಿಕ ಸಮಸ್ಯೆಗಳ ಬಗ್ಗೆ ಚಿಂತಿಸುವಂತಾಗಬೇಕು ಎಂದು ಹೇಳಿದರು.
ಈ ಕಥ ಸಂಕಲನದಲ್ಲಿ ತಿರುವ ಎನ್ನುವ ಕಥೆಯಲ್ಲಿ ಗೌರಮ್ಮ ಎಂಬ ಮಹಿಳೆಯ ಪಾತ್ರ ಹೆಚ್ಚು ಗಮನ ಸೆಳೆಯುತ್ತದೆ. ಈ ಕಥೆಯ ಪ್ರಾರಂಭದಲ್ಲಿ ಆತಂಕ, ಅನಿವಾರ್ಯತೆಗೆಗಳು ಎದುರಾದರೂ ಕೊನೆಯಲ್ಲಿ ಸುಖಾಂತ್ಯ ಕಾಣಿಸುತ್ತದೆ. ಈ ಕೃತಿಯಲ್ಲಿ ಲೇಖಕಿ ಸಮಸ್ಯೆಗಳತ್ತ ಬೊಟ್ಟು ಮಾಡಿ ತೋರಿಸಿ ಮತ್ತೆ ಸುಮ್ಮನಾಗುತ್ತಾರೆ. ಆತಂಕ, ಅನಿವಾರ್ಯತೆಯ ಆಚೆಗೂ ವಿವರಿಸುವ ಕೆಲಸವಾಗಬೇಕು. ಬೇರೆ ಬೇರೆ ಭಾಷೆಯಲ್ಲಿ ಪ್ರಕಟಗೊಳ್ಳುವ ಗಂಭೀರ ವಿಷಯಗಳು ನಮ್ಮ ಕನ್ನಡ ಭಾಷೆಯಲ್ಲೂ ಬರಬೇಕು ಎಂದು ಆಶಯ ವ್ಯಕ್ತಪಡಿಸಿದರು.
ವಿಮರ್ಶಕ ಡಾ.ರವಿಕುಮಾರ್ ನೀಹ ಮಾತನಾಡಿ, ಈ ಕೃತಿಯಲ್ಲಿ ಒಟ್ಟು 18 ಕತೆಗಳಿಗೆ, ಅವುಗಳಿಗೆ ಬೇರೆ ಬೇರೆ ಕಾರಣಗಳಿವೆ. ಇದೊಂದು ಕೂಡು ಕುಟುಂಬವನ್ನು ಚಿತ್ರಿಸುತ್ತದೆ. ಮಹಿಳಾ ಸಾಹಿತ್ಯದ ಸಣ್ಣ ಸನ್ನಿವೇಶಗಳು ಇಲ್ಲಿ ದೊಡ್ಡದಾಗಿ ಕಾಣುತ್ತವೆ. ಸುಸ್ಥಿತಿಯ ಬದುಕು, ಸಂಕಟದ ಬದುಕು ಎರಡನ್ನೂ ಈ ಕೃತಿಯಲ್ಲಿ ಕಾಣಬಹುದಾಗಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಹೆಚ್.ಎಲ್.ಮಲ್ಲೇಗೌಡ, ಅಂತಾರಾಷ್ಟ್ರೀಯ ಚಿತ್ರಕಲಾವಿದ ಕೆ.ಟಿ.ಶಿವಪ್ರಸಾದ್, ಲೇಖಕಿ ಸುವರ್ಣ ಕೆ.ಟಿ.ಶಿವಪ್ರಸಾದ್, ಸಿ.ಸುಜಾತ ಇದ್ದರು.