

ಮೈಸೂರು: ‘ಗ್ಯಾರಂಟಿ ಯೋಜನೆಗಳಿಗೂ ಹಣ ಇಲ್ಲ’ ಎಂದು ಬಿಜೆಪಿಯವರು ಸುಳ್ಳು ಹರಡಿಸುತ್ತಿದ್ದಾರೆ. ಇದು ವಾಸ್ತವಾಂಶವಲ್ಲ. ಸುಳ್ಳೇ ಬಿಜೆಪಿಯವರ ಮನೆ ದೇವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿಯಿಂದ ಎಚ್.ಡಿ.ಕೋಟೆಯಲ್ಲಿ ಮಂಗಳವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ, 443.64 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ರಾಜ್ಯ ಸರ್ಕಾರದ ಬಳಿ ನೌಕರರಿಗೆ ಸಂಬಳ ಕೊಡಲು ಮತ್ತು ಅಭಿವೃದ್ಧಿಗೂ ದುಡ್ಡಿಲ್ಲ ಎಂದು ಬಿಜೆಪಿಯವರು ಹಸಿ ಸುಳ್ಳು ಬಿತ್ತುತ್ತಿದ್ದಾರೆ. ನಮ್ಮಲ್ಲಿ ಹಣ ಇಲ್ಲದಿದ್ದರೆ ಈ 443 ಕೋಟಿ ರೂ. ಎಲ್ಲಿಂದ ಬಂತು? ತಿ.ನರಸೀಪುರದ ಅಭಿವೃದ್ಧಿ ಕಾರ್ಯಕ್ಕೆ 500 ಕೋಟಿ ರೂ. ಕೊಡಲು ಹೇಗೆ ಸಾಧ್ಯವಾಯಿತು? ಯಾವುದಾದರೂ ರಾಜ್ಯ ಸರ್ಕಾರಿ ನೌಕರರಿಗೆ ಸಂಬಳ ನಿಂತಿಲ್ಲ. ಹೀಗಾಗಿ, ಬಿಜೆಪಿಯವರ ಟೀಕೆಯಲ್ಲಿ ಸತ್ಯಾಂಶ ಇಲ್ಲ ಎಂದು ಹೇಳಿದರು.
ರಾಜ್ಯದ ಕೋಟ್ಯಂತರ ಫಲಾನುಭವಿಗಳು ನಮ್ಮ ಐದು ಗ್ಯಾರಂಟಿ ಯೋಜನೆಗಳ ಫಲವನ್ನು ಪ್ರತಿ ತಿಂಗಳೂ ಪಡೆಯುತ್ತಿದ್ದಾರೆ. ಆದರೂ ಬಿಜೆಪಿಯವರು ಬರೀ ಸುಳ್ಳು ಹೇಳುವುದನ್ನು ನಿಲ್ಲಿಸಿಲ್ಲ ಎಂದು ಹರಿಹಾಯ್ದರು.
ನಮ್ಮ ಗ್ಯಾರಂಟಿಗಳಿಂದ ಅನುಕೂಲ ಪಡೆದವರು ನಮಗೆ ಮತ ಕೊಡಲಿ, ಬಿಡಲಿ ಆದರೆ ನಾವು ಬಡವರ ಕಲ್ಯಾಣಕ್ಕೆ ಕೆಲಸ ಮಾಡುವುದನ್ನು ಮಾತ್ರ ನಿಲ್ಲಿಸಲ್ಲ. ಸಾಮಾಜಿಕ, ರಾಜಕೀಯವಾಗಿ ಶಕ್ತಿ ತುಂಬಲು ಅವರ ಪರ ಕೆಲಸ ಮಾಡುವುದು ನಮ್ಮ ಬದ್ಧತೆ ಎಂದು ಹೇಳಿದರು.
ಸಿದ್ದರಾಮಯ್ಯ ಇದ್ದರೆ, ಕಾಂಗ್ರೆಸ್ ಸರ್ಕಾರ ತೆಗೆಯಲು ಸಾಧ್ಯವಿಲ್ಲವೆಂದು ಪ್ರತಿಪಕ್ಷದವರಿಗೆ ತಿಳಿದಿದೆ. ಅದಕ್ಕಾಗಿಯೇ ಬಡವರು, ಮಹಿಳೆಯರು, ಹಿಂದುಳಿದವರು, ದಲಿತರು, ಶೋಷಿತರ ಪರವಾಗಿ ಕೆಲಸ ಮಾಡುತ್ತಾನೆ ಎಂಬ ಕಾರಣಕ್ಕೆ ನನ್ನ ವಿರುದ್ಧ ಸುಳ್ಳು ಪ್ರಕರಣ ಹಾಕಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಶಕ್ತಿ ಯೋಜನೆಯಲ್ಲಿ 324 ಕೋಟಿ ಬಾರಿ ಮಹಿಳೆಯರು ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ. 1.65 ಕೋಟಿ ಮನೆಗಳಿಗೆ 200 ಯುನಿಟ್ ವಿದ್ಯುತ್ ಉಚಿತವಾಗಿ ಕೊಡಲಾಗುತ್ತಿದೆ. 1.22 ಕೋಟಿ ಕುಟುಂಬದ ಯಜಮಾನಿಯರಿಗೆ ಗೃಹಲಕ್ಷ್ಮಿ ಯೋಜನೆಯಡಿ ಮಾಸಿಕ 2 ಸಾವಿರ ರೂ. ದೊರೆಯುತ್ತಿದೆ.
ನಿರುದ್ಯೋಗಿ ಪದವೀಧರರಿಗೆ ಯುವನಿಧಿ ಯೋಜನೆಯಡಿ ಮಾಸಿಕ 3 ಸಾವಿರ ರೂ. ನೀಡಲಾಗುತ್ತಿದೆ. ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿಯಾಗಿ 5 ಕೆ.ಜಿ ಅಕ್ಕಿ ಕೊಡಲು ಮುಂದಾದಾಗ ಹಣ ಕೊಡುತ್ತೇವೆಂದರೂ ಬಡವರಿಗೆ ಅಕ್ಕಿ ಕೊಡದ ಬಿಜೆಪಿಯವರು ಮನೆ ಹಾಳರು. ಹೀಗಾಗಿ 5 ಕೆ.ಜಿ ಅಕ್ಕಿ ಬದಲು 170 ರೂ. ನೀಡಲಾಗುತ್ತಿದೆ. ಬಿಜೆಪಿಯವರೂ ಇವುಗಳ ಲಾಭ ಪಡೆಯುತ್ತಿಲ್ಲವೇ? ಎಂದು ಪ್ರಶ್ನಿಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭಿವೃದ್ಧಿಗಾಗಿ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಜನಸಂಖ್ಯೆ ಆಧಾರವಾಗಿ ಕ್ರಮವಾಗಿ 28 ಸಾವಿರ ಕೋಟಿ ರೂ. ಮತ್ತು 11,447 ಕೋಟಿ ರೂ. ನೀಡಲಾಗಿದೆ. ಹೀಗೆ ಯಾರಾದ್ರೂ ಕೊಟ್ಟಿದ್ದರೆ? ಆದರೆ, ನಾವು ಕೊಟ್ಟಿದ್ದೇವೆ ಎಂದು ಹೇಳಿದರು.