ಸುಳ್ಳು ಹೇಳುವ ಸ್ಪರ್ಧೆಯಲ್ಲಿದೆ ಕಾಂಗ್ರೆಸ್

6 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಜಗತ್ತಿನಲ್ಲೇ ಅತೀ ಹೆಚ್ಚು ಮೂಲ ಸೌಕರ್ಯ ಅಭವೃದ್ಧಿ ಆಗುತ್ತಿದೆ. ಆದರೆ ಕಾಂಗ್ರೆಸ್ ಎಲ್ಲ ಸಂದರ್ಭದಲ್ಲೂ ವಿರೋಧ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ದೂರಿದರು.
ಅಳ್ನಾವರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸುಳ್ಳು ಹೇಳುವ ಸ್ಪರ್ಧೆಗೆ ಇಳಿದಿದೆ. ಉದ್ಯಮಿಗಳ ಕೋಟ್ಯಂತರ ರೂ. ಸಾಲ ಮನ್ನಾ ಮಾಡಿದ್ದೇವೆ ಎಂದಿದ್ದಾರೆ. ಇವರಿಗೆ ನಾಚಿಕೆ, ಮಾನ, ಮರ್ಯಾದೆ ಇದೆಯಾ?. ಅವರ ಕಾಲದಲ್ಲೇ ಅತೀ ಹೆಚ್ಚು ಸಾಲ ಕೊಡಿಸಿದ್ದಾರೆ. ಮೋದಿ ಅಧಿಕಾರಕ್ಕೆ ಬಂದ ನಂತರ ಬಾಕಿ ಸಾಲ ತುಂಬಲು ಹೇಳುತ್ತಿದ್ದಂತೆ ಉದ್ಯಮಿಗಳು ಓಡಿ ಹೋಗಿದ್ದಾರೆ ಎಂದರು.
ಓಡಿ ಹೋದ ಉದ್ಯಮಿ, ವಂಚಕರ ಆಸ್ತಿ ವಶಪಡಿಸಿಕೊಳ್ಳುತ್ತೇವೆ. ಇದಕ್ಕಾಗಿ ಹೊಸ ಕಾಯಿದೆ ತರಲಾಗಿದೆ. ಕಾಂಗ್ರೆಸ್ ಕಾಯಿದೆ, ಕಾನೂನು ಬಿಟ್ಟು ಸಾಲ ಕೊಟ್ಟಿದೆ. ಉದ್ಯಮಿ ಸಾಲ ಮನ್ನಾ ಮಾಡಿದ್ದೇವೆ ಎಂಬುದನ್ನು ಸಿದ್ದರಾಮಯ್ಯ, ಡಿಕೆಶಿ ಸಾಬೀತು ಮಾಡಿದರೆ ನಾವು ರಾಜಕೀಯ ನಿವೃತ್ತಿ ಪಡೆಯುತ್ತೇವೆ. ಒಂದು ವೇಳೆ ಇಲ್ಲವಾದರೆ ಅವರು ರಾಜಕೀಯ ನಿವೃತ್ತಿ ಪಡೆಯುತ್ತಾರೆ? ಎಂದು ಸವಾಲು ಹಾಕಿದರು.
ಈಗಾಗಲೇ 30-40 ಸಾವಿರ ಕೋಟಿ ರೂ. ಸಾಲ ವಸೂಲಿ ಮಾಡಿದ್ದೇವೆ. ಓಡಿ ಹೋದವರನ್ನು ಕರೆದು ವಸೂಲಿ ಮಾಡುತ್ತೇವೆ. ಓಡಿ ಹೋದವರಿಗೆ ಸಾಲ ಕೊಟ್ಟವರೇ ಇವರು. ಅವರು ಬಂದರೆ ಅದೆಲ್ಲ ಹೊರಗೆ ಬರಲಿದೆ ಎಂಬ ಕಾರಣಕ್ಕೆ ವಾಪಸ್ ಬರದಂತೆ ತಡೆಯುತ್ತಿದ್ದಾರೆ ಎಂದು ಟೀಕಿಸಿದರು.
ಧಾರವಾಡ-ಬೆಳಗಾವಿ ರೈಲು ಮಾರ್ಗಕ್ಕೆ ಭೂಸ್ವಾಧೀನ ಪ್ರಕ್ರಿಯೆ ಆಗಬೇಕು. ಅರ್ಧಕ್ಕಿಂತ ಹೆಚ್ಚು ಭೂಮಿ ನೀಡಿದರೆ ಕಾಮಗಾರಿ ಆರಂಭಿಸಬಹುದು. ರಾಜ್ಯ ಸರ್ಕಾರ ಭೂಸ್ವಾಧೀನ ಮಾಡಿ ಕೊಡಬೇಕು. ಆದರೆ ರಸ್ತೆ ಮಾಡುವುದಕ್ಕೇ ಹಣ ಇಲ್ಲ ಎಂದು ಹೇಳುತ್ತಿದ್ದಾರೆ. ಗ್ಯಾರಂಟಿ ಕೊಡುವುದರಲ್ಲೆ ಸಾಕಾಗಿದೆ ಎಂದು ಸಚಿವರುಗಳು ಹೇಳುತ್ತಿದ್ದಾರೆ. ರಸ್ತೆ, ಮೂಲ ಸೌಕರ್ಯಕ್ಕೆ ಇವರು ಹಣ ಕೊಡುವ ಖಚಿತತೆ ಇಲ್ಲ ಎಂದು ವ್ಯಂಗ್ಯವಾಡಿದರು.
ನೈಸ್ ವಿಚಾರವಾಗಿ ಪ್ರತಿಕ್ರಿಯಿಸಿದ ಜೋಶಿ, ಎಚ್.ಡಿ. ಕುಮಾರಸ್ವಾಮಿ ದಾಖಲೆಗಳನ್ನು ಕೊಡಲಿ. ಅದರ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುತ್ತೇವೆ ಎಂದ ಅವರು, ಕಾಂಗ್ರೆಸ್ ವರ್ಗಾವಣೆ ದಂಧೆಗೆ ಇಳಿದಿದೆ. ಹೀಗಾದರೆ ರಾಜ್ಯದ ಪರಿಸ್ಥಿತಿ ಕೇಳತೀರದು. ರಸ್ತೆಗಳ ಅಭಿವೃದ್ಧಿ ಮಾಡುತ್ತಿಲ್ಲ. ಹೀಗಾಗಿ ರಸ್ತೆಗಿಳಿದು ಹೋರಾಡಲು ನಮ್ಮ ಶಾಸಕರಿಗೆ ಕರೆ ನೀಡಿದ್ದೇನೆ. ಕೆಟ್ಟ ರಸ್ತೆಗಳಲ್ಲಿ ನಮ್ಮ ಶಾಸಕರು ಹೋರಾಟ ನಡೆಸಲಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net