ಸುಳ್ಳು ಹೇಳಿ ಬಸವ ಭಕ್ತರಿಗೆ ದಾರಿ ತಪ್ಪಿಸುತ್ತಿರುವ ಖಂಡ್ರೆ

Bidar MP
Published on

ಬೀದರ್: ನೂತನ ಅನುಭವ ಮಂಟಪಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬುಧವಾರ ಭೂಮಿ ಪೂಜೆ ನೆರವೇರಿಸುತ್ತಿರುವ ವಿಷಯ ಸಂಬಂಧ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸುಳ್ಳು ಹೇಳಿಕೆ ನೀಡಿ ಬಸವಭಕ್ತರ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ಸಂಸದ ಭಗವಂತ ಖೂಬಾ ತಿರುಗೇಟು ನೀಡಿದ್ದಾರೆ.

ಅನುಭವ ಮಂಟಪಕ್ಕೆ ಸರ್ಕಾರ ದುಡ್ಡು ಬಿಡುಗಡೆ ಮಾಡಿಲ್ಲ, ಕಾಮಗಾರಿಗೆ ಕ್ರಿಯಾಯೋಜನೆ ಸಹ ಸಿದ್ಧಪಡಿಸಿಲ್ಲ ಎಂದಿರುವುದು ಶುದ್ಧ ಸುಳ್ಳು. ಇದಕ್ಕೆ 100 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಕ್ರಿಯಾಯೋಜನೆ ಸಹ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಖಂಡ್ರೆ ಸುಳ್ಳಿನ ಆರೋಪಕ್ಕೆ ಬಸವಭಕ್ತರು ಕಿಮ್ಮತ್ತು ನೀಡಬಾರದು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಈಶ್ವರ ಖಂಡ್ರೆ ಸಚಿವರಿದ್ದಾಗ ಅನುಭವ ಮಂಟಪಕ್ಕೆ ಎಷ್ಟು ಹಣ ಒದಗಿಸಿದ್ದರು? 2018ರ ಚುನಾವಣೆಯಲ್ಲಿ ಗೆಲ್ಲುವ ಉದ್ದೇಶಕ್ಕೆ ಕ್ರಿಯಾಯೋಜನೆ ಮಾಡಿಸಿ, ಜನರಿಗೆ ದಾರಿ ತಪ್ಪಿಸಿದ್ದರು. ಅಂದು ತಯಾರಿಸಿದ್ದ ಕ್ರಿಯಾಯೋಜನೆಗೆ ಆಗಿನ ಸಿಎಂ ಸಿದ್ದರಾಮಯ್ಯ ಕ್ಯಾರೆ ಎನ್ನಲಿಲ್ಲ. ನಂತರ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವೂ ಅನುದಾನ ಕೊಟ್ಟಿಲ್ಲ. ಆವತ್ತು ಖಂಡ್ರೆ ಏಕೆ ಮಾತನಾಡಿಲ್ಲ ಎಂದು ಖೂಬಾ ಪ್ರಶ್ನಿಸಿದ್ದಾರೆ.

ಖಂಡ್ರೆ ಅವರ ಹಸಿ ಸುಳ್ಳು ಮತ್ತು ಆಧಾರರಹಿತ ಆರೋಪಗಳಿಗೆ ಯಾರೂ ನಂಬುವುದಿಲ್ಲ. ಅವರ ಪಕ್ಷ 60 ವರ್ಷಕ್ಕಿಂತಲೂ ಹೆಚ್ಚು ಅಧಿಕಾರ ನಡೆಸಿ, ಬಸವ ಭಕ್ತರಿಗೆ ಶೂನ್ಯ ಕೊಡುಗೆ ನೀಡಿದೆ. ಅನುಭವ ಮಂಟಪದ ಮೇಲೆ ಖಂಡ್ರೆ ಪರಿವಾರ ಸದಾ ರಾಜಕಾರಣವನ್ನೇ ಮಾಡಿದೆ. ಅನುಭವ ಮಂಟಪ ವಿಷಯದಲ್ಲಿ ಬಿಜೆಪಿ ನುಡಿದಂತೆ ನಡೆಯುತ್ತಿದೆ. ಇದು ಚುನಾವಣೆ ಗೆಲ್ಲಲು ಮಾಡಿದ ಕ್ರಿಯಾಯೋಜನೆ ಅಲ್ಲ. ಅನುದಾನ ಒದಗಿಸಿ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದು ಟಾಂಗ್ ನೀಡಿದ್ದಾರೆ.

ಈಶ್ವರ ಖಂಡ್ರೆ ಅವರು ಭಸವಭಕ್ತರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಅನುಭವ ಮಂಟಪಕ್ಕೆ ನಯಾ ಪೈಸೆ ಕೊಡಿಸಲು ಅವರಿಗೆ ಸಾಧ್ಯವಾಗಿಲ್ಲ. ಅವರ ಮಾತಿಗೆ ಹಿಂದಿನ ಸರ್ಕಾರ ಕವಡೆ ಕಿಮ್ಮತ್ತು ನೀಡಿಲ್ಲ, ಇಂದು ಸರ್ಕಾರ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಚಾಲನೆ ಮಾಡುತ್ತಿದ್ದಾಗ ಸುಳ್ಳು ಹೇಳಿಕೆ ನೀಡುತ್ತ ಜನರ ಮುಂದೆ ಮಾನ ಹರಾಜು ಹಾಕಿಕೊಳ್ಳಬೇಡಿ.| ಭಗವಂತ ಖೂಬಾ, ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net