

ಚಿತ್ರದುರ್ಗ: ಬಿಜೆಪಿ ಹೇಳುತ್ತಿರುವ ಸುಳ್ಳುಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಜಿ.ಸಿ. ಸುರೇಶ್ ಬಾಬು ಹೇಳಿದರು.
ಸಿಪಿಐ ಸಹಯೋಗದಲ್ಲಿ ನಗರದ ಎಐಟಿಯುಸಿ ಕಚೇರಿ ಬಳಿ ಏರ್ಪಡಿಸಿದ್ದ 47 ನೇ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿ, ಬಿಜೆಪಿ ಸುಳ್ಳುಗಳ ಬಗ್ಗೆ ಮತದಾರರಿಗೆ ಮಾಹಿತಿ ನೀಡಬೇಕಿದೆ. ಕೋಮುವಾದಿ ಪಕ್ಷಗಳು ದೇಶದಿಂದ ತೊಲಗಬೇಕಿದೆ ಎಂದರು.
ನಗರಸಭೆ ಚುನಾವಣೆಯಲ್ಲಿ ನಗರದ ಎಲ್ಲ ವಾರ್ಡ್‌ಗಳಲ್ಲಿ ಸಿಪಿಐ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದರು.
ನಗರದ ಬಾಪೂಜಿ ವಿದ್ಯಾಸಂಸ್ಥೆ ಅಧ್ಯಕ್ಷ ಡಾ.ಕೆ.ಎಂ. ವೀರೇಶ್ ಮಾತನಾಡಿ, ಕಟ್ಟಡ ಕಾರ್ಮಿಕರ ಅರ್ಹ ಮಕ್ಕಳಿಗೆ ಸಂಸ್ಥೆಯಲ್ಲಿ ಉಚಿತ ಶಿಕ್ಷಣ ನೀಡುವ ಭರವಸೆಯಿತ್ತರು.
ಎಐಟಿಯುಸಿ ಜಿಲ್ಲಾ ಮಂಡಳಿ ಅಧ್ಯಕ್ಷ ಬಿ.ಬಸವರಾಜಪ್ಪ ಮಾತನಾಡಿ, ರೈತ, ಕಾರ್ಮಿಕರ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ವರ್ಗದ ವಿರೋಧಿಯಾಗಿವೆ ಎಂದರು.
ಕಾರ್ಮಿಕ, ರೈತರ ಪರ ಕಾನೂನುಗಳ ಜಾರಿ ಬದಲು ಸರ್ಕಾರಗಳು ಶ್ರೀಮಂತರ ಪರವಾಗಿ ಕೆಲಸ ಮಾಡುತ್ತಿವೆ ಎಂದರು.
ಸಿ.ವೈ. ಶಿವರುದ್ರಪ್ಪ, ದೊಡ್ಡಉಳ್ಳಾರ್ತಿ ಕರಿಯಣ್ಣ, ಟಿ.ಆರ್. ಉಮಾಪತಿ, ಜಯದೇವಮೂರ್ತಿ, ಜಾಫರ್‌ಷರೀಫ್, ಕುಮಾರಸ್ವಾಮಿ, ದುರುಗೇಶ್,ನಾಗಮ್ಮ, ಲಕ್ಷ್ಮಮ್ಮ, ಚೌಡಪ್ಪ, ನಾಗರಾಜ್, ಸತ್ಯಕೀರ್ತಿ ಮತ್ತಿತರ ಎಐಟಿಯುಸಿ ಹಾಗೂ ಸಿಪಿಐ ಪ್ರಮುಖರು ಇದ್ದರು.