

ಹುಬ್ಬಳ್ಳಿ: ಕರೊನಾ ವೈರಸ್ಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳನ್ನು ನಂಬಿ, ಆತಂಕಕ್ಕೊಳಗಾಗಬೇಡಿ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಸಲಹೆ ನೀಡಿದರು.
ಕರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆಯಾಗಿ ಏನು ಮಾಡಬೇಕು ಹಾಗೂ ಏನು ಮಾಡಬಾರದೆಂಬುದರ ಬಗ್ಗೆ ಸರ್ಕಾರ ಈಗಾಗಲೇ ಸೂಚನೆ ನೀಡಿದೆ. ಅವುಗಳನ್ನು ಪಾಲಿಸಿ, ಹೊರತು ಸಾಮಾಜಿಕ ಜಾಲತಾಣಗಳಲ್ಲಿನ ಊಹಾಪೋಹಗಳನ್ನಲ್ಲ ಎಂದು ಸೂಚಿಸಿದರು. ನಿತ್ಯ ಪತ್ರಿಕೆ ಓದಿ. ವೈರಸ್ನಿಂದ ರಕ್ಷಿಸಿಕೊಳ್ಳಲು ಪತ್ರಿಕೆಯಲ್ಲಿರುವ ಸೂಚನೆಗಳನ್ನು ಪಾಲಿಸಿ, ಇತರರಿಗೂ ಮನವರಿಕೆ ಮಾಡಿಕೊಡಿ ಎಂದರು.
ವೈರಸ್ ನಿಯಂತ್ರಣಕ್ಕೆ ಹಲವಾರು ಪದಾರ್ಥಗಳನ್ನು ಸೇವಿಸುವುದು ಸೇರಿ ಇತರ ಊಹಾಪೋಹಗಳ ಬಗ್ಗೆ ಬಂದ ಫೋನ್ಕಾಲ್ಗಳಿಗೆ ಉತ್ತರಿಸಿದ ಜಿಲ್ಲಾಧಿಕಾರಿ, ತಪ್ಪು ಸಂದೇಶಗಳನ್ನು ರವಾನಿಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದೆಂದು ಎಚ್ಚರಿಕೆ ನೀಡಿದರು.
ಕುಂದಗೋಳ ತಾಲೂಕಿನ ರಾಮಾಪುರ ಗ್ರಾಮದ ನಾಗರಿಕರೊಬ್ಬರು ಕರೆ ಮಾಡಿ, ತಮ್ಮ ಊರಿಗೆ ವಿದೇಶದಿಂದ ವ್ಯಕ್ತಿಯೊಬ್ಬರು ಬಂದಿದ್ದು, ಸಾರ್ವಜನಿಕ ಸ್ಥಳದಲ್ಲಿ ಓಡಾಡುತ್ತಿದ್ದಾರೆ. ಇದರಿಂದ ಆತಂಕ ಹೆಚ್ಚಾಗಿದೆ ಎಂದು ದೂರಿದರು.
ಜಿಲ್ಲಾಧಿಕಾರಿ ದೀಪಾ ಚೋಳನ್ ಹಾಗೂ ಜಿಪಂ ಸಿಇಒ ಡಾ. ಬಿ.ಸಿ. ಸತೀಶ ಅವರು ಕರೆ ಮಾಡಿದ ವ್ಯಕ್ತಿಯ ಮೊಬೈಲ್ ಸಂಖ್ಯೆ ಪಡೆದು, ತಕ್ಷಣ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಧಾರವಾಡದಿಂದ ಪೊಲೀಸ್ ಪೇದೆಯೊಬ್ಬರು ಕರೆ ಮಾಡಿ, ವಿದೇಶದಿಂದ ಬಂದಿರುವ ವ್ಯಕ್ತಿಯೊಬ್ಬರು ಹೊರಗಡೆ ಓಡಾಡದಂತೆ ಸೂಚಿಸಿದರೂ ಕೇಳುತ್ತಿಲ್ಲ ಎಂದು ದೂರಿದರು.ಆ ವ್ಯಕ್ತಿಗೆ ಎಫ್ಐಆರ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿ. ಪುನಃ ಹಾಗೆ ಮಾಡಿದರೆ ಎಫ್ಐಆರ್ ದಾಖಲಿಸಿ ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಇವು ಇರಲ್ಲ: ಚರ್ಚ್ಗಳಲ್ಲಿ ಪ್ರಾರ್ಥನೆ ರದ್ದು. ಬಿಆರ್ಟಿಎಸ್ ಚಿಗರಿ ಸಂಚಾರ ಸ್ಥಗಿತ. ದೇವಸ್ಥಾನಗಳ ಬಾಗಿಲು ಬಂದ್. ಐಸ್ಕ್ರೀಂ, ಕೂಲ್ ಡ್ರಿಂಕ್ಸ್ ಇರಲ್ಲ. ಎಲ್ಲ ರೀತಿಯ ಹೋಟೆಲ್ಗಳು ಬಂದ್. ಬಾರ್ ಆಂಡ್ ರೆಸ್ಟೋರೆಂಟ್, ಎಂಆರ್ಪಿ, ವೈನ್ ಶಾಪ್ಗಳಿಲ್ಲ. ಪಾನಿಪೂರಿ, ಗೂಡಂಗಡಿ, ಬೀದಿ ಬದಿ ವ್ಯಾಪಾರ ಸ್ಥಗಿತ. ಸಂತೆ ಮಾರುಕಟ್ಟೆಗಳು ಇರಲ್ಲ.
ಇರುತ್ತವೆ: ಹಾಲು ಸಿಗುತ್ತದೆ. ಔಷಧ ಲಭ್ಯ. ದಿನಸಿ ಅಂಗಡಿ ತೆರೆದಿರಲಿವೆ. ಪೆಟ್ರೋಲ್ ಬಂಕ್ ಚಾಲ್ತಿ. ಸಿಲಿಂಡರ್ ಸಿಗಲಿದೆ. ಪೌರ ಕಾರ್ವಿುಕರು ಸೇವೆ ಸಲ್ಲಿಸುವರು.
ವಿಜಯವಾಣಿ, ದಿಗ್ವಿಜಯಕ್ಕೆ ಅಭಿನಂದನೆ: ‘ವಿಜಯವಾಣಿ’ ಕನ್ನಡದ ನಂ. 1 ದಿನಪತ್ರಿಕೆಯನ್ನು ಹೆಚ್ಚಿನ ಜನ ಓದುತ್ತಾರೆ ಹಾಗೂ ‘ದಿಗ್ವಿಜಯ’ ಸುದ್ದಿ ವಾಹಿನಿಯನ್ನು ಹೆಚ್ಚು ಜನ ನೋಡುತ್ತಾರೆ. ಈ ಮಾಧ್ಯಮಗಳ ಮೂಲಕ ಕರೊನಾ ವೈರಸ್ ಹರಡುವಿಕೆ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ್ದು ಹಾಗೂ ಊಹಾಪೋಹಗಳಿಗೆ ಕಿವಿಗೊಡದಂತೆ ಸಲಹೆ ನೀಡಿರುವುದು ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು. ವೈರಸ್ ಹರಡದಂತೆ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಸಾರ್ವಜನಿಕರಿಗೆ ತಿಳಿಸಲು ವೇದಿಕೆ ಕಲ್ಪಿಸಿಕೊಟ್ಟ ‘ವಿಜಯವಾಣಿ’ ಹಾಗೂ ‘ದಿಗ್ವಿಜಯ’ ಸುದ್ದಿವಾಹಿನಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
4 ಪ್ರಕರಣದ ವರದಿ ಬಾಕಿ: ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಕರೊನಾ ಸೋಂಕು ಹೊಂದಿರುವ ಶಂಕಿತ 8 ಜನರ ಪೈಕಿ ನಾಲ್ವರ ಗಂಟಲ ದ್ರವ ಮಾದರಿಯ ವೈದ್ಯಕೀಯ ವರದಿ ಶನಿವಾರ ಜಿಲ್ಲಾಡಳಿತದ ಕೈ ಸೇರಿದೆ. ನಾಲ್ಕೂ ವರದಿ ನೆಗೆಟಿವ್ ಇದೆ. ಇನ್ನೂ ನಾಲ್ವರ ವರದಿ ಬರುವುದು ಬಾಕಿ ಇದೆ. ಈ ಕುರಿತು ಆರೋಗ್ಯ ಇಲಾಖೆ ಶನಿವಾರ ರಾತ್ರಿ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಗೊಂದಲದಲ್ಲಿದ್ದ ಜನತೆ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 8 ಜನರ ಗಂಟಲು ದ್ರವ ಮಾದರಿಯನ್ನು ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ಪೈಕಿ ನಾಲ್ವರ ವರದಿ ಮಾ. 22ರಂದು ಬರುವ ನಿರೀಕ್ಷೆ ಇದೆ. ವೈರಸ್ ಸೋಂಕು ಹೊಂದಿರುವ ಶಂಕೆಯ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ 228 ಜನರ ಮೇಲೆ ನಿಗಾ ಇಡಲಾಗಿದೆ. ಅದರಲ್ಲಿ 173 ಜನರು ಮನೆಗಳಲ್ಲಿ ಪ್ರತ್ಯೇಕವಾಗಿ ವಾಸವಿದ್ದಾರೆ. ನಾಲ್ವರು ಆಸ್ಪತ್ರೆಯ ಪ್ರತ್ಯೇಕ ವಾರ್ಡ್ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 42 ಜನ 14 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದಾರೆ. 9 ಜನ 28 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದಾರೆ ಎಂದು ತಿಳಿಸಲಾಗಿದೆ.