ಸುಳ್ಳು ಮಾಹಿತಿ ಹರಿಬಿಟ್ಟ ಎನ್​ಜಿಒ ಮುಖ್ಯಸ್ಥೆ

20 vikram 9
Published on

ಧಾರವಾಡ: ಕರೊನಾ ಪ್ರಕರಣಗಳು ದಾಖಲಾಗಿರುವ ಹಾಗೂ ಸೋಂಕಿತ ವ್ಯಕ್ತಿಗಳ ಕುರಿತು ಸುಳ್ಳು ಸುದ್ದಿ ಹರಡಿದರೆ ಕಾನೂನು ಕ್ರಮಕೈಗೊಳ್ಳುವುದಾಗಿ ಜಿಲ್ಲಾಡಳಿತ ಹೇಳುತ್ತಲೇ ಇದೆ. ಇದರ ಮಧ್ಯೆಯೇ, ಎನ್​ಜಿಒ ನಡೆಸುವ ಮಹಿಳೆಯೊಬ್ಬರು ರಾಜಾರೋಷವಾಗಿ ಫೇಸ್​ಬುಕ್​ನಲ್ಲಿ ಬುಧವಾರ ಸುಳ್ಳು ಮಾಹಿತಿ ನೀಡಿ ಜನರಲ್ಲಿ ಭಯ ಹುಟ್ಟಿಸಿದ್ದಾರೆ.

ಓಟಿಲಿ ಅನ್ಬನ್​ಕುಮಾರ ಎಂಬಾಕೆ ಈ ಯಡವಟ್ಟಿಗೆ ಕಾರಣರಾಗಿದ್ದಾರೆ. ಜಿಲ್ಲೆಯಲ್ಲಿ ಬುಧವಾರ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಆದರೆ, ಈಕೆ ಮಾತ್ರ 9 ಪ್ರಕರಣಗಳು ದಾಖಲಾಗಿವೆ. ಅಹಮದಾಬಾದ್​ನಿಂದ ಜಿಲ್ಲೆಗೆ ಆಗಮಿಸಿದವರಲ್ಲಿ ಕರೊನಾ ಪತ್ತೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ 28ಕ್ಕೆ ಏರಿದೆ ಎಂದು ತನ್ನ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದರು.

ರಾಜ್ಯ ಸರ್ಕಾರ ಮಧ್ಯಾಹ್ನ ಬಿಡುಗಡೆ ಮಾಡಿದ ಬುಲೆಟಿನ್​ನಲ್ಲಿ ಇದರ ಮಾಹಿತಿ ಇರಲಿಲ್ಲ. ಜಿಲ್ಲಾಡಳಿತವೂ ಅಧಿಕೃತ ಘೊಷಣೆ ಮಾಡಲಿಲ್ಲ. ಫೇಸ್​ಬುಕ್​ನಲ್ಲಿ ಬರೆದುಕೊಂಡ ಈಕೆಗೆ ಮಾಹಿತಿ ನೀಡಿದ್ದು ಯಾರು? ಸೂಕ್ಷ್ಮ ವಿಷಯದಲ್ಲಿ ಅವಾಂತರ ಸೃಷ್ಟಿಸಿ ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ ಈ ಹೊಣೆಗೇಡಿತನದ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆಯೆ? ಕೆಲ ದಿನಗಳ ಹಿಂದೆ ಸೋಂಕಿತ ವ್ಯಕ್ತಿಯ ಭಾವಚಿತ್ರ ಎಂದು ಮತ್ತೊಬ್ಬರ ಭಾವಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟವರ ಮೇಲೆ ಕ್ರಮಕೈಗೊಳ್ಳಲಾಗಿತ್ತು. ಅದೇ ರೀತಿ ಒಟಿಲಿ ವಿರುದ್ಧವೂ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿ ಎಂದು ಜಾಲತಾಣದಲ್ಲೇ ಅನೇಕರು ಒತ್ತಾಯಿಸಿದ್ದಾರೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net