

ಮೈಸೂರು: ಸುಳ್ಳು ದಾಖಲೆ ನೀಡಿ ಗ್ರಾಮ ಸಹಾಯಕ ಹುದ್ದೆ ಪಡೆದಿರುವುದನ್ನು ರದ್ದುಪಡಿಸುವಂತೆ ಒತ್ತಾಯಿಸಿ ಆಯರಹಳ್ಳಿ ದೇವಮ್ಮ ಕುಟುಂಬದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರದಿಂದ ಅನಿರ್ದಿಷ್ಟ ಕಾಲ ಪ್ರತಿಭಟನೆ ಆರಂಭಿಸಿದರು.
ಮೈಸೂರು ತಾಲೂಕಿನ ಆಯರಹಳ್ಳಿಯಲ್ಲಿ ತಿಮ್ಮಯ್ಯ ಎಂಬುವರು ಗ್ರಾಮ ಸಹಾಯಕರಾಗಿದ್ದರು. ತಿಮ್ಮಯ್ಯ ಅವರ ಸಂಬಂಧಿಕರೆನ್ನಲಾಗುವ ಎ.ಆರ್.ರಘುವಯ್ಯ ಎಂಬುವರು ನಕಲಿ ದಾಖಲೆ ಸೃಷ್ಟಿಸಿ ಹುದ್ದೆ ಪಡೆದಿದ್ದಾರೆ. ಈ ಸಂಬಂಧ 2013ರಿಂದ ಹೋರಾಟ ಮಾಡುತ್ತಿದ್ದರೂ ನ್ಯಾಯ ದೊರೆತಿಲ್ಲ ಎಂದು ತಿಮ್ಮಯ್ಯ ಅವರ ಪುತ್ರಿ ದೇವಮ್ಮ ದೂರಿದರು.
ಅನ್ಯಾಯವನ್ನು ಸರಿಪಡಿಸುವಂತೆ 10 ವರ್ಷಗಳಿಂದ ಹೋರಾಟ ಮಾಡುತ್ತಿದ್ದು, 2013ರಲ್ಲಿ ತಹಸೀಲ್ದಾರ್ ಅವರು ಈ ಹುದ್ದೆ ವಜಾ ಮಾಡುವಂತೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಆದರೂ ಈ ಸಮಸ್ಯೆ ಬಗೆಹರಿದಿಲ್ಲ. ಜಿಲ್ಲಾಧಿಕಾರಿ ನಮ್ಮ ಸಮಸ್ಯೆ ಬಗೆಹರಿಸಬೇಕು ಅಥವಾ ದಯಾಮರಣಕ್ಕೆ ಅವಕಾಶ ನೀಡಬೇಕು ಎಂದು ಮೊಮ್ಮಗ ಆರ್.ಭಾಸ್ಕರ್ ಒತ್ತಾಯಿಸಿದರು.
ತಿಮ್ಮಯ್ಯ ಅವರ ಸೊಸೆ ಜಯಲಕ್ಷ್ಮೀ, ಬಾಲರಾಜ್ ಇದ್ದರು.