ಸುಳ್ಳು ಆಶ್ವಾಸನೆಗಳೆ ಬಂಡವಾಳ ; ಶಾಸಕರ ವಿರುದ್ಧ ಸಚಿವ ಎಂಟಿಬಿ ನಾಗರಾಜ್ ಆರೋಪ

06sulibele2 NEW
Published on

ಸೂಲಿಬೆಲೆ: ಸುಳ್ಳುಗಳನ್ನು ಹೇಳಿಕೊಂಡೇ ಜನರನ್ನು ಯಾಮಾರಿಸಿಕೊಂಡು ಬಂದಿದ್ದಾರೆ. ಸುಳ್ಳು ಆಶ್ವಾಸನೆಗಳೇ ಅವರ ಬಂಡವಾಳವಾಗಿದೆ ಎಂದು ಪೌರಾಡಳಿತ ಮತ್ತು ಸಣ್ಣಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್ ಸ್ಥಳೀಯ ಶಾಸಕರ ವಿರುದ್ಧ ಕಿಡಿಕಾರಿದರು.

ಹೋಬಳಿಯ ವಾಲ್ಮೀಕಿನಗರದಲ್ಲಿನ ಶ್ರೀ ಕೋದಂಡ ರಾಮಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಬಾಗಿಲು ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಹೊಸಕೋಟೆ ಕ್ಷೇತ್ರದಲ್ಲಿ ಒಂದೇ ಒಂದು ದೇಗುಲ ನಿರ್ಮಾಣಕ್ಕೂ ಶಾಸಕರು ಯಾವುದೇ ನೆರವು ನೀಡಿಲ್ಲ. ಜನರ ಕಣ್ಣೋರೆಸವ ತಂತ್ರ ಅನುಸರಿಸುವುದು ಬಿಟ್ಟರೆ ನಿಜವಾದ ಅಭಿವೃದ್ಧಿ ಕಾರ್ಯ ಮಾಡಲ್ಲ ಎಂದು ಆರೋಪಿಸಿದರು.

ಶಾಂತನಾಪುರ ಮುನ್ನೆಲೆಗೆ:ಶಾಂತನಾಪುರ ಭೂಕಬಳಿಗೆ ವಿವಾದವನ್ನು ಪುನರುಚ್ಚರಿಸಿದ ಎಂಟಿಬಿ, ಬಡವರ ಜಮೀನನ್ನು ಕಬಳಿಸುವುದು, ಮೋಸ ಮಾಡುವುದು ಬಿಟ್ಟರೆ ಧಾರ್ಮಿಕ ಕಾರ್ಯಗಳಿಗೆ ನೆರವು ನೀಡುವ ಮನಸ್ಸು ಅವರಿಗೆ ಇಲ್ಲ ಎಂದರು. ನನಗೆ ದುಡ್ಡಿನ ಆಸೆ ಇಲ್ಲ, ದೇವರು ನನಗೆ ಎಲ್ಲವನ್ನೂ ಕೊಟ್ಟಿದ್ದಾನೆ. ಹಣ ಮಾಡಲು ರಾಜಕೀಯಕ್ಕೆ ಬಂದಿಲ್ಲ ಅಥವಾ ಯಾವುದೇ ಬೇನಾಮಿ ಆಸ್ತಿ ರಕ್ಷಣೆಯ ಉದ್ದೇಶವಿಲ್ಲ, ಪ್ರಾಮಾಣಿಕ ರಾಜಕಾರಣಿಯಾಗಿ ಜನರ ಸೇವೆಗಾಗಿ ಬಂದಿದ್ದೇನೆ ಎಂದರು.

ದೇಗುಲ ನಿರ್ಮಾಣಕ್ಕೆ ಧನ ಸಹಾಯ: ಇಲ್ಲಿನ ಜನರ ಹಲವು ವರ್ಷದ ಕನಸಾದ ಶ್ರೀ ಕೋದಂಡ ರಾಮಸ್ವಾಮಿ ದೇಗುಲ ನಿರ್ಮಾಣ ಕಾರ್ಯಕ್ಕೆ ಸ್ವಂತ ಖರ್ಚಿನಲ್ಲಿ ಆರ್ಥಿಕ ನೆರವು ನೀಡುತ್ತೇನೆ. ದೇಗುಲ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವವರಿಗೂ ಈ ಬಗ್ಗೆ ಕಾಳಜಿ ವಹಿಸುತ್ತೇನೆ ಎಂದು ಎಂಟಿಬಿ ಭರವಸೆ ನೀಡಿದರು. ಹೊಸಕೋಟೆ ಕ್ಷೇತ್ರದಲ್ಲಿ ಹಲವು ದೇಗುಲ ನಿರ್ಮಾಣಕ್ಕೆ ನೆರವಾಗಿದ್ದೇನೆ, ದಾನಿಗಳು, ಭಕ್ತರ ಕಾರ್ಯಕ್ಕೆ ಕೈಲಾದ ಸಹಾಯ ಮಾಡಿದ್ದೇನೆ. 500 ವರ್ಷಗಳಷ್ಟು ಹಳೇಯದಾದ ಕೆಲವೊಂದು ದೇಗುಲಗಳ ಜೀರ್ಣೋದ್ಧಾರಕ್ಕೂ ಮುಂದೆ ನಿಂತಿದ್ದೇನೆ. ಇಂಥ ಧಾರ್ಮಿಕ ಸಾಮಾಜಿಕ ಕಾರ್ಯಗಳನ್ನು ಮಾಡಲು ದೇವರು ಎಲ್ಲರಿಗೂ ಮನಸ್ಸು ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ಪಾರ್ಟಿ ಬಿಟ್ಟಿದ್ದೇ ಅವರ ಗೆಲುವಿಗೆ ಕಾರಣ: ನಾನು ಕಾರ್ಯಕರ್ತರ ಸಲಹೆ ಸೂಚನೆ ಪಡೆಯದೆ ಏಕಾಏಕಿ ಪಕ್ಷ ಬದಲಿಸಿದ್ದರಿಂದ ಕಳೆದ ಮರುಚುನಾವಣೆಯಲ್ಲಿ ಸೋಲು ಅನುಭವಿಸಬೇಕಾಯಿತು. ಅದೇ ಪಕ್ಷೇತರ ಅಭ್ಯರ್ಥಿ ಗೆಲುವಿಗೆ ಕಾರಣವಾಯಿತು. ಇಲ್ಲವಾಗಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ ಎಂದ ಸಚಿವರು, ಮುಂದೆ ಇಂಥ ತಪ್ಪು ಮಾಡುವುದಿಲ್ಲ ಎಂದು ಪುನರುಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net