

ಮಂಗಳೂರು: ಕರಾವಳಿಯ ರಾಜಕೀಯ ವಲಯದಲ್ಲಿ ಸಜ್ಜನ ಶಾಸಕ ಎಂದೇ ಗುರುತಿಸಿಕೊಂಡಿರುವ 55ರ ಹರೆಯದ ಎಸ್.ಅಂಗಾರ ಮೀಸಲು ಕ್ಷೇತ್ರ ಸುಳ್ಯವನ್ನು ಸತತ 6ನೇ ಬಾರಿಗೆ ಪ್ರತಿನಿಧಿಸುತ್ತಿದ್ದಾರೆ. 1994ರ ಬಳಿಕ ನಿರಂತರ ಜಯ ಸಾಧಿಸುತ್ತಾ ಬಂದಿರುವ ದ.ಕ.ಜಿಲ್ಲೆ ಏಕೈಕ ಶಾಸಕರಾಗಿದ್ದಾರೆ.
ನೆಲ್ಲೂರು ಕೆಮ್ರಾಜೆ ಗ್ರಾಮ ದಾಸನಕಜೆಯ ಬಡ ಕುಟುಂಬದಲ್ಲಿ ಜನಿಸಿದ ಅಂಗಾರ ಚೊಕ್ಕಾಡಿ ಪ್ರೌಢಶಾಲೆಯಯಲ್ಲಿ
9ನೇ ತರಗತಿಯವರೆಗೆ ಶಿಕ್ಷಣ ಪೂರೈಸಿದರು. ಬಡತನದ ಕಾರಣದಿಂದ ಶಿಕ್ಷಣ ಮುಂದುವರಿಸಲಾಗದೆ , ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಜತೆಗೆ ಆರ್‌ಎಸ್‌ಎಸ್‌ನಲ್ಲಿ ಸಕ್ರಿಯರಾಗಿದ್ದರು. ಸುಳ್ಯ ಬಿಜೆಪಿ ಶಾಸಕರಾಗಿದ್ದ ಬಾಕಿಲ ಹುಕ್ರಪ್ಪ ಪಕ್ಷಾಂತರ ಮಾಡಿದ ಕಾರಣ ಸಂಘದ ಹಿರಿಯರು ಸೂಕ್ತ ಅಭ್ಯರ್ಥಿ ಹುಡುಕಾಟದಲ್ಲಿದ್ದರು. ಆಗ ಗಮನ ಸೆಳೆದದ್ದು 24 ಹರೆಯದ ಯುವಕ ಅಂಗಾರ.
ಸುಳ್ಯ ತಾಲೂಕು ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಂಡ ಅಂಗಾರ ಕ್ಷೇತ್ರದುದ್ದಕ್ಕೂ ಸಂಚರಿಸಿ ಪಕ್ಷ ಸಂಘಟನೆ ಜತೆಗೆ ಕಾರ್ಯಕರ್ತರ ಪರಿಚಯ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು. 1989ರಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಕಾಂಗ್ರೆಸ್‌ನ ಕೆ.ಕುಶಲ ವಿರುದ್ಧ 5,840 ಮತಗಳಿಂದ ಪರಾಭವಗೊಂಡಿದ್ದರು. 1994ರ ಚುನಾವಣೆಯಲ್ಲಿ ಜಯ ಸಾಧಿಸಿ ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಬಳಿಕ 1999, 2004, 2008, 2013 ಮತ್ತು 2018ರ ಚುನಾವಣೆಯಲ್ಲಿ ನಿರಂತರ ಜಯ. 2013ರ ಚುನಾವಣೆಯಲ್ಲಿ ದ.ಕ.ಜಿಲ್ಲೆಯ 7 ಕ್ಷೇತ್ರಗಳಲ್ಲಿ ಬಿಜೆಪಿ ಸೋಲು ಅನುಭವಿಸಿದರೂ, ಸುಳ್ಯದಲ್ಲಿ ಮಾತ್ರ ಅಂಗಾರ 1373 ಮತಗಳ ಅಂತರದಿಂದ ಜಯ ಸಾಧಿಸಿದ್ದರು. 2018ರ ಚುನಾವಣೆಯಲ್ಲಿ ದಾಖಲೆಯ 26,068 ಮತಗಳ ಅಂತರದಿಂದ ಗೆದ್ದಿದ್ದರು.
ವಿಧಾನ ಮಂಡಲದ ಹಿಂದುಳಿದ ವರ್ಗಗಳ ಕಲ್ಯಾಣ ಸಮಿತಿ ಅಧ್ಯಕ್ಷರಾಗಿದ್ದ ಅವರು ಪ್ರಸ್ತುತ ವಿಧಾನ ಮಂಡಲದ ಅನೂಚಿತ ಜಾತಿ ಮತ್ತು ಪಂಗಡಗಳ ಅಭಿವೃದ್ಧಿ ಸಮಿತಿ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸುಳ್ಯ ಕ್ಷೇತ್ರದ ಪ್ರಥಮ ಸಚಿವ
ಸುಳ್ಯ ವಿಧಾನಸಭೆ ಕ್ಷೇತ್ರಕ್ಕೆ ಪ್ರಥಮ ಬಾರಿಗೆ ಸಚಿವ ಸ್ಥಾನ ಒಲಿದಿದೆ.
ಈ ಹಿಂದೆ ಬಿಜೆಪಿ ಅಧಿಕಾರಕ್ಕೆ ಬಂದಾಗ ಜಿಲ್ಲೆಯ ಹಿರಿಯ ಶಾಸಕರಾಗಿದ್ದರೂ ಎಸ್.ಅಂಗಾರ ಅವರಿಗೆ ಸಚಿವರಾಗುವ ಅವಕಾಶ ಸಿಗಲಿಲ್ಲ. ಅವರ ಹಿರಿತನ, ಸರಳತೆ ಹಾಗೂ ಪಕ್ಷನಿಷ್ಠೆಗೆ ಕೊನೆಗೂ ಮನ್ನಣೆ ದೊರೆತಿದೆ. ತನ್ಮೂಲಕ ಮೀಸಲು ಕ್ಷೇತ್ರ ಸುಳ್ಯದ ಪ್ರಥಮ ಸಚಿವ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
1952 ಮತ್ತು 1957ರ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರ ರಚನೆ ಆಗಿರಲಿಲ್ಲ. ಅದು ಪುತ್ತೂರು ಕ್ಷೇತ್ರದ ವ್ಯಾಪ್ತಿಯಲ್ಲಿತ್ತು. ಆಗ ದ್ವಿಸದಸ್ಯ ಕ್ಷೇತ್ರವಾಗಿದ್ದ ಪುತ್ತೂರಿನಲ್ಲಿ ಇಬ್ಬರು ಶಾಸಕರನ್ನು ಆಯ್ಕೆ ಮಾಡಲು ಅವಕಾಶವಿತ್ತು. 1962ರಲ್ಲಿ ಸುಳ್ಯ ಕ್ಷೇತ್ರ ರಚನೆ ಬಳಿಕ ಇದುವರೆಗೆ ಒಟ್ಟು 6 ಮಂದಿಗೆ ಶಾಸಕರಾಗುವ ಅವಕಾಶ ದೊರೆತಿದೆ. ಮೊದಲ ಬಾರಿಗೆ ಅಂಗಾರರಿಗೆ ಮಂತ್ರಿ ಪಟ್ಟ ಒಲಿದಿದೆ.
ಸುಳ್ಯ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ನಿವಾಸಿಗಳಾಗಿದ್ದ ಡಿ.ವಿ.ಸದಾನಂದ ಗೌಡ ಮುಖ್ಯಮಂತ್ರಿ ಹಾಗೂ ಶೋಭಾ ಕರಂದ್ಲಾಜೆ ಸಚಿವರಾಗಿದ್ದರು. ಆಗ ಡಿ.ವಿ.ವಿಧಾನ ಪರಿಷತ್ ಸದಸ್ಯರಾಗಿದ್ದರೆ, ಕರಂದ್ಲಾಜೆ ಬೆಂಗಳೂರಿನ ಯಶವಂತಪುರದ ಶಾಸಕಿಯಾಗಿದ್ದರು.
ಬಿಜೆಪಿಯ 3ನೇ ಸಚಿವ
ಬಿಜೆಪಿ ಸರ್ಕಾರದಲ್ಲಿ ಈ ಹಿಂದೆ ದ.ಕ ಜಿಲ್ಲೆಯ ಬಿ.ನಾಗರಾಜ ಶೆಟ್ಟಿ(ಬಂಟ್ವಾಳ) ಮತ್ತು ಕೃಷ್ಣ ಜೆ.ಪಾಲೆಮಾರ್(ಮಂಗಳೂರು ಉತ್ತರ) ಸಚಿವರಾಗಿದ್ದರು. ಎಸ್.ಅಂಗಾರ ಬಿಜೆಪಿಯ ಮೂರನೇ ಸಚಿವರಾಗಿದ್ದಾರೆ. ಸುಳ್ಯ ಕ್ಷೇತ್ರ ಹೊರತುಪಡಿಸಿ ಜಿಲ್ಲೆಯ ಉಳಿದ ಕ್ಷೇತ್ರಗಳಿಗೆ ಈ ಹಿಂದೆ ಸಚಿವ ಸ್ಥಾನ ಲಭಿಸಿತ್ತು.
ಕಾಂಗ್ರೆಸ್ ಸಚಿವರು
ಕಾಂಗ್ರೆಸ್ ಸರ್ಕಾರದಲ್ಲಿ ಬಿ.ವಿಠಲದಾಸ ಶೆಟ್ಟಿ, ಎ.ಶಂಕರ ಆಳ್ವ(ಪುತ್ತೂರು), ಡಾ.ನಾಗಪ್ಪ ಆಳ್ವ, ಬಿ.ರಮಾನಾಥ ರೈ(ಪಾಣೆಮಂಗಳೂರು-ಬಂಟ್ವಾಳ), ವೈಕುಂಠ ಬಾಳಿಗಾ, ಬಿ.ಗಂಗಾಧರ ಗೌಡ(ಬೆಳ್ತಂಗಡಿ), ಪಿ.ಎಫ್.ರಾಡ್ರಿಗಸ್, ಬ್ಲೇಸಿಯಸ್ ಡಿಸೋಜ(ಮಂಗಳೂರು ), ಯು.ಟಿ.ಖಾದರ್(ಉಳ್ಳಾಲ-ಮಂಗಳೂರು ), ಬಿ.ಸುಬ್ಬಯ್ಯ ಶೆಟ್ಟಿ(ಸುರತ್ಕಲ್), ಅಭಯಚಂದ್ರ ಜೈನ್(ಮೂಡುಬಿದಿರೆ) ಸಚಿವರಾಗಿದ್ದರು. ಜನತಾದಳದಿಂದ ಅಮರನಾಥ ಶೆಟ್ಟಿ(ಮೂಡುಬಿದಿರೆ), ಬಿ.ಎ.ಮೊಯ್ದೀನ್(ವಿಧಾನ ಪರಿಷತ್ ಸದಸ್ಯ) ಸಚಿವರಾಗಿದ್ದರು. 1978ರಿಂದ 2008ರವರೆಗೆ ಅಸ್ವಿತ್ವದಲ್ಲಿದ್ದ ವಿಟ್ಲ ಕ್ಷೇತ್ರದಿಂದ ಯಾರೂ ಸಚಿವರಾಗಿರಲಿಲ್ಲ.
ಕ್ಷೇತ್ರದಲ್ಲಿ ಕಾರ್ಯಕರ್ತರ ಸಂಭ್ರಮ
ಸುಳ್ಯ: ಅಂಗಾರ ಸಚಿವರಾಗುತ್ತಿದ್ದಂತೆ ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದ್ದಾರೆ.
ಸುಳ್ಯ ಪಕ್ಷದ ಕಚೇರಿಯಲ್ಲಿ ಸೇರಿದ ನೂರಾರು ಕಾರ್ಯಕರ್ತರು ಪ್ರಮಾಣವಚನ ಮುಗಿಯುತ್ತಿದ್ದಂತೆ ಪಟಾಕಿ ಸಿಡಿಸಿ, ಸಿಹಿಹಂಚಿ ಸಂಭ್ರಮಿಸಿದರು. ಕಡಬದ ಮುಖ್ಯ ಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರು ಹರ್ಷಾಚರಣೆ ನಡೆಸಿದರು. ಪ್ರಮಾಣವಚನ ಕಾರ್ಯಕ್ರಮಕ್ಕೆ ಶಾಸಕರ ಮನೆಯವರು, ಕುಟುಂಬದ ಹಲವು ಸದಸ್ಯರು, ಕಡಬ, ಸುಳ್ಯ ಭಾಗದ ಪಕ್ಷದ ಮುಖಂಡರು ತೆರಳಿದ್ದರು.
ಖುಷಿ ತಂದಿದೆ
ಹಲವು ಬಾರಿ ಗೆಲುವು ಸಾಧಿಸಿ ಜನಮನ್ನಣೆ ಗಳಿಸಿದ ನಮ್ಮ ಶಾಸಕರಿಗೆ ಈಗಲಾದರೂ ಸಚಿವ ಸ್ಥಾನದ ಗೌರವ ಸಿಕ್ಕಿರುವುದು ಖುಷಿ ನೀಡಿದೆ. ಮುಂದೆ ಅವರ ಸಜ್ಜನ ರಾಜಕಾರಣ ರಾಜ್ಯದ ಎಲ್ಲೆಡೆ ಪಸರಿಸಬೇಕು ಎನ್ನುವ ಖುಷಿ ವ್ಯಕ್ತಪಡಿಸಿದ್ದಾರೆ ಶಾಸಕರ ಮನೆ ಪರಿಸರದ ಸತೀಶ್ ದೊಡ್ಡತೋಟ.