

ಕಲಬುರಗಿ: ದಾರಿಹೋಕನ ಮೇಲೆ ದಾಳಿ ಮಾಡಿ ಹಣ, ಮೊಬೈಲ್ ದರೋಡೆ ಮಾಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಚನ್ನವೀರ ನಗರದ ಪ್ರಶಾಂತ ಜಮಾದಾರ (೨೧), ಶಿವಶಕ್ತಿ ನಗರದ ಸುಭಾಷ ರಾಣೆ (೨೦) ಬಂಧಿತರು. ಬಂಧಿತರಿAದ ೫೦೦ ರೂ., ಎಂಟು ಸಾವಿರ ರೂ.ಮೌಲ್ಯದ ಒಂದು ಮೊಬೈಲ್ ಜಪ್ತಿ ಮಾಡಿಕೊಳ್ಳಲಾಗಿದೆ. ಏ.೪ರಂದು ಚನ್ನವೀರ ನಗರದ ನಿವಾಸಿ ಗಣಪತರಾವ ರಾತ್ರಿ ೧೦ಕ್ಕೆ ಮುಸ್ಲಿಂ ಸಂಘ ಬಡಾವಣೆಯಲ್ಲಿ ನಡೆದುಕೊಂಡು ಹೋಗುವಾಗ ಮೂವರು ಆಗಂತುಕರು ದಾಳಿ ಮಾಡಿ, ದೋಚಿಕೊಂಡು ಹೋಗಿದ್ದರು. ಬಿಡಿಸಲು ಬಂದಿದ್ದ ಮಹಿಳೆಯರ ಮೇಲೂ ದಾಳಿ ಮಾಡಿ, ಪರಾರಿಯಾಗಿದ್ದರು. ಪಿಐ ದಿಲೀಪ ನಿಂಬಾಳಕರ ನೇತೃತ್ವದಲ್ಲಿ ಸಿಬ್ಬಂದಿ ಶಿವಾನಂದ, ಸಂಜೀವಕುಮಾರ, ರಾಜಕುಮಾರ, ಮೋಶೀನ, ಸೈಯದ್ ತೌಸಿಫ್, ನಾಗೇಂದ್ರ, ಸುರೇಶ ಅವರ ತಂಡ ತನಿಖೆ ನಡೆಸಿ, ಆರೋಪಿಗಳನ್ನು ಪತ್ತೆ ಹಚ್ಚಿದೆ. ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.