ಸುಲಭವಾಗಿ ಸಿಕ್ತಿದ್ಯಾ ಸಿಡಿಮದ್ದು?

07rajesh2
Published on

ಚಾಮರಾಜನಗರ: ಗೋವುಗಳ ಬಾಯಿ ಛಿದ್ರಗೊಂಡು, ನಾಲಿಗೆ ಹರಿದು ಹೋಗಿ, ರಕ್ತಸಿಕ್ತ ಮಾಂಸ ಸಮೇತ ದವಡೆ ಹೊರಬಂದು ತುಂಬಾ ನೋವಿನಿಂದ ನರಳಿ ಸಾಯುವಂತೆ ಮಾಡುತ್ತಿರುವ ಅಪಾಯಕಾರಿ ಸಿಡಿಮದ್ದು ಸಿಗುತ್ತಿರುವುದಾದರೂ ಎಲ್ಲಿಂದ?

ಜಿಲ್ಲೆಯ ವಿವಿಧ ಕಡೆ ವನ್ಯಜೀವಿಗಳ ಶಿಕಾರಿಗಾಗಿ ಅದರಲ್ಲೂ ಕಾಡುಹಂದಿಗಳ ಬೇಟೆಗಾಗಿ ಸಿಡಿಮದ್ದು ಬಳಕೆ ಮಾಡಲಾಗುತ್ತಿದೆ. ಆಹಾರದೊಳಗೆ ಸಿಡಿಮದ್ದು ಅಡಗಿಸಿ ಜಮೀನುಗಳ ಬಳಿ ಇಡಲಾಗುತ್ತಿದೆ. ಇದನ್ನು ಮೇವು ಮೇಯುವಾಗ ಹಸುಗಳು, ದನಗಳು ತಿಂದು ಬಾಯಿ ಭೀಕರವಾಗಿ ಛಿದ್ರಗೊಂಡು ಸಾಯುತ್ತಿವೆ. ಈ ಕೃತ್ಯಕ್ಕೆ ಬೇಟೆಗಾರರು ಬಳಕೆ ಮಾಡಿಕೊಳ್ಳುತ್ತಿರುವ ಸಿಡಿಮದ್ದು ಎಲ್ಲಿಂದ ಸಿಗುತ್ತಿದೆ. ಇದು ತಯಾರಿಕೆ ಆಗುತ್ತಿರುವುದಾದರೂ ಎಲ್ಲಿಂದ ಎಂಬ ಪ್ರಶ್ನೆ ಮೂಡಿದೆ.

ಭಾಗಶಃ ಅರಣ್ಯ ಪ್ರದೇಶದಿಂದ ಕೂಡಿರುವ ಚಾಮರಾಜನಗರ ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಬೇಟೆಗಾರಿಕೆ ನಿರಂತರವಾಗಿ ನಡೆಯುತ್ತಲೇ ಇದೆ. ನಾಡಬಂದೂಕು, ಕಚ್ಚಾ ಸಿಡಿಮದ್ದುಗಳನ್ನು ತಯಾರಿಸಿಕೊಂಡು ಶಿಕಾರಿ ಮಾಡುವುದರಲ್ಲಿ ಬೇಟೆಗಾರರು ಪರಿಣಿತಿ ಪಡೆದುಕೊಂಡಿದ್ದಾರೆ. ಅರಣ್ಯ ಇಲಾಖೆ ಕಾರ್ಯಾಚರಣೆ ವೇಳೆ ಬೇಟೆಗಾರರು ಸಿಕ್ಕಿ ಬಿದ್ದಾಗ ಇಂತಹ ಪ್ರಕರಣಗಳು ಬಹಿರಂಗಗೊಂಡಿದೆ. ಇನ್ನು ಆಹಾರದಲ್ಲಿ ಸಿಡಿಮದ್ದು ಇಡುವ ಬೇಟೆಗಾರರೂ ಸಹ ಸ್ವಂತವಾಗಿ ತಯಾರಿಕೆ ಮಾಡಿಕೊಳ್ಳುತ್ತಿದ್ದಾರೆ ಅಥವಾ ಸಿಡಿಮದ್ದು ಮಾರುವವರ ಬಳಿ ಖರೀದಿ ಮಾಡುತ್ತಿದ್ದಾರೆ ಎಂಬ ಗುಮಾನಿ ಇದೆ.

ಜಿಲ್ಲೆಯಲ್ಲಿ ಗಣಿಗಾರಿಕೆ ಪ್ರದೇಶಗಳಿವೆ. ಕ್ವಾರಿಗಳಲ್ಲಿ ಸಿಡಿಮದ್ದುಗಳನ್ನು ಬಳಕೆ ಮಾಡಬೇಕೆಂದರೆ ಅನುಮತಿ ಅಗತ್ಯ. ಈ ಸಿಡಿಮದ್ದನ್ನು ಬೇಟೆಗೆ ಬಳಕೆ ಮಾಡುತ್ತಿಲ್ಲ. ಏಕೆಂದರೆ ಇವುಗಳ ಸ್ಪೋಟದ ಪ್ರಮಾಣ ತೀವ್ರವಾಗಿದೆ. ಇದರಿಂದ ಗೋವುಗಳ ಬಾಯಿ ಮಾತ್ರವಲ್ಲದೆ ದೇಹದ ಭಾಗವೆಲ್ಲವೂ ಛಿದ್ರಗೊಳ್ಳುತ್ತದೆ. ಹೀಗಾಗಿ ಬೇಟೆಗಾರರು ಬಳಕೆ ಮಾಡುತ್ತಿರುವುದು ಗಣಿಗಾರಿಕೆಗೆ ಬಳಸುವ ಸಿಡಿಮದ್ದು ಅಲ್ಲ. ಬದಲಿಗೆ ಪಟಾಕಿಯಿಂದಲೇ ತಯಾರಿಕೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.

ಪಟಾಕಿಯಿಂದ ತಯಾರಿಕೆ:

ಹಸು, ದನಗಳ ಬಾಯಿ ಛಿದ್ರಗೊಳ್ಳುತ್ತಿರುವ ಸಿಡಿಮದ್ದನ್ನು ಪಟಾಕಿಯಿಂದ ತಯಾರಿಕೆ ಮಾಡಲಾಗುತ್ತಿದೆ. ಸಣ್ಣ ಸಣ್ಣ ಬೆಂಚು ಕಲ್ಲುಗಳ ಮಧ್ಯೆ ಪಟಾಕಿ ಪೌಡರ್ ಹಾಕಿ ದಾರದಿಂದ ಸುತ್ತಿ ನಾಡ ಶೈಲಿಯ ಸಿಡಿಮದ್ದು ತಯಾರಿಕೆ ಮಾಡಲಾಗುತ್ತಿದೆ. ಇದನ್ನು ಜೋಳದ ಹಿಟ್ಟಿನೊಳಗೆ ಅಡಗಿಸಿ ಇಟ್ಟಾಗ ಪ್ರಾಣಿಗಳು ಅಗಿದಾಗ ಕಲ್ಲುಗಳು ನಡುವೆ ಘರ್ಷಣೆ ಉಂಟಾಗಿ ಬೆಂಕಿ ಹೊತ್ತುಕೊಂಡು ಸ್ಪೋಟವಾಗುತ್ತಿದೆ ಎಂಬ ಮಾಹಿತಿ ಇದೆ.

ಅಪ್ಪ ಮತ್ತು ಮಗನ ಪ್ರಕರಣದಲ್ಲಿ..

2024ರ ಆ.20ರಂದು ಕೌದಳ್ಳಿ ಗ್ರಾಮದಲ್ಲಿ ಸಿಡಿಮದ್ದು ತಿಂದು ಬಾಯಿ ಛಿದ್ರಗೊಂಡು ಮೃತಪಟ್ಟಿದ್ದ ಸಂಬಂಧ ಪ್ರಕರಣ ದಾಖಲಾಗಿತ್ತು. ಎರಡು ಹಸುಗಳು ಕಾಡಿನ ಕಡೆಗೆ ಹೋಗುವಾಗ ರಸ್ತೆ ಬದಿ ಇಟ್ಟಿದ್ದ ಆಹಾರ ರೂಪದಲ್ಲಿದ್ದ ಸಿಡಿಮದ್ದನ್ನು ಹಸುಗಳು ತಿಂದು ಮೃತಪಟ್ಟಿವೆ ಎಂದು ರೈತ ಮಹದೇವಸ್ವಾಮಿ ದೂರು ನೀಡಿದ್ದರು. ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಅ.13ರಂದು ಡಿಆರ್‌ಎ್ಒ ಆನಂದ್ ಚಿಕ್ಕಾಲತ್ತೂರು ಗ್ರಾಮದ ಜಡೆಯಪ್ಪ (58) ಮತ್ತು ಮಗ ರುದ್ರ(30) ಅರಣ್ಯದಂಚಿನಲ್ಲಿ ಸಿಡಿಮದ್ದು ಇಡುತ್ತಿದ್ದಾರೆ ಎಂಬ ಅನುಮಾನವಿದೆ ಎಂದು ದೂರು ಕೊಟ್ಟಿದ್ದರು. ಈ ದೂರಿನ್ವಯ ಆರೋಪಿ ಜಡೆಯಪ್ಪನನ್ನು ಪೊಲೀಸರು ಬಂಧಿಸಿದ್ದರು. ಮನೆಯಲ್ಲಿ ಇಟ್ಟಿದ್ದ ಸಿಡಿಮದ್ದುಗಳನ್ನು ವಶ ಪಡಿಸಿಕೊಂಡಿದ್ದರು. ಮತ್ತೋರ್ವ ಆರೋಪಿ ರುದ್ರ ಪರಾರಿಯಾಗಿದ್ದ. ಬಳಿಕ ಕೆಲವು ದಿನಗಳ ನಂತರ ನ್ಯಾಯಾಲಯಲ್ಲಿ ಈ ಪ್ರಕರಣದ ಸಂಬಂಧ ಜಮೀನು ಪಡೆದುಕೊಂಡ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇಬ್ಬರು ರೈತರಿಂದ ದೂರು: ಚಾಮರಾಜನಗರ ತಾಲೂಕಿನ ಎರಡು ಹಳ್ಳಿಗಳಲ್ಲಿ ಹಸುಗಳ ಬಾಯಿ ಛಿದ್ರಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆಯಲ್ಲಿ ರೈತರು ದೂರು ಸಲ್ಲಿಸಿದ್ದಾರೆ. ಹೆಗ್ಗವಾಡಿಪುರ ಗ್ರಾಮದ ಗುರುಸಿದ್ದಯ್ಯ, ಹೆಗ್ಗವಾಡಿ ಗ್ರಾಮದ ಜಯಮ್ಮ ಕುದೇರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಿಡಿಮದ್ದು ಇಟ್ಟಿದ್ದವರನ್ನು ಪತ್ತೆ ಮಾಡಿ ಬಂಧಿಸಬೇಕೆಂದು ಕೋರಿಕೊಂಡಿದ್ದಾರೆ.

ದೊಡ್ಡ ಪ್ರಮಾಣದ ಪಟಾಕಿಗಳಿಂದಲೇ ಸಿಡಿಮದ್ದು ತಯಾರಿಕೆ ಮಾಡಿಕೊಳ್ಳುತ್ತಿದ್ದಾರೆ. ರಾಮಾಪುರದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು. ಬೇರೆ ಕಡೆ ದಾಖಲಾಗಿರುವ ಪ್ರಕರಣಗಳ ಆರೋಪಿಗಳನ್ನೂ ಪತ್ತೆ ಮಾಡಲಾಗುತ್ತಿದೆ. ಈ ಸಂಬಂಧ ಸ್ಥಳೀಯ ಮೂಲಗಳಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ. ಡಾ.ಬಿ.ಟಿ.ಕವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಾಮರಾಜನಗರ ಜಿಲ್ಲೆಯಲ್ಲಿ ಸಿಡಿಮದ್ದು ಸುಲಭವಾಗಿ ಸಿಗುವುದು ಖಂಡನೀಯ. ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಗಣಿ ಇಲಾಖೆಗಳೆಲ್ಲವೂ ಇದ್ದೂ ಸಿಡಿಮದ್ದು ಬಳಕೆಯಾಗುತ್ತಿದೆ. ಖಾಲಿ ಜಮೀನುಗಳಲ್ಲಿ ಸಿಡಿಮದ್ದು ಇಡಲಾಗುತ್ತಿದೆ. ಇದನ್ನು ತಿಂದು ಹಸು, ದನಗಳು ಮೃತಪಡುತ್ತಿವೆ. ಒಂದು ವೇಳೆ ಸಿಡಿಮದ್ದನ್ನು ಮನುಷ್ಯರು ತುಳಿದರೆ ಏನು ಗತಿ?. ಸಿಡಿಮದ್ದು ಇಡುತ್ತಿರುವವರನ್ನು ಕೂಡಲೇ ಬಂಧಿಸಬೇಕು. ಈ ಕುರಿತು ಮಾಹಿತಿ ನೀಡುವವರ ಹೆಸರನ್ನು ಪೊಲೀಸ್ ಇಲಾಖೆ ಬಹಿರಂಗ ಪಡಿಸಬಾರದು. ಮೃತಪಡುತ್ತಿರುವ ಹಸುಗಳ ಮಾಲೀಕರಿಗೆ ಸೂಕ್ತ ಪರಿಹಾರ ನೀಡಬೇಕು. ಮಹೇಶ್‌ಕುಮಾರ್ ಹೆಗ್ಗವಾಡಿಪುರ, ರೈತ ಮುಖಂಡ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net