ಸುರಿಯುವ ಮಳೆಯಲ್ಲೇ ಕೈ ಪ್ರತಿಭಟನೆ

4hnr3
Published on

ಕಾರವಾರ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಜಿಲ್ಲಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಸುರಿಯುವ ಮಳೆಯ ನಡುವೆ ಮೆರವಣಿಗೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು. ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಘೊಷಣೆ ಕೂಗಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಇಳಿಕೆಯಾದರೂ ಇಲ್ಲಿ ಮಾತ್ರ ದಿನದಿಂದ ದಿನಕ್ಕೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ. ಇದರಿಂದ ಕರೊನಾ ವಿಷಮ ಪರಿಸ್ಥಿತಿಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆಕ್ಷೇಪಿಸಿದರು. ಕಾರವಾರದಲ್ಲಿ ಜಿಲ್ಲಾಧಿಕಾರಿ ಕಚೇರಿಯಿಂದ ತಹಸೀಲ್ದಾರ್ ಕಚೇರಿವರೆಗೆ ಮೆರವಣಿಗೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ ನಾಯ್ಕ, ತಾಪಂ ಸದಸ್ಯ ಮಾರುತಿ ನಾಯ್ಕ, ಮುಖಂಡರಾದ ಶಂಭು ಶೆಟ್ಟಿ, ಪ್ರಭಾಕರ ಮಾಳ್ಸೇಕರ್, ಸ್ಯಾಮ್ಸನ್ ಡಿಸೋಜಾ, ರಾಜು ತಾಂಡೇಲ, ಪುರುಷೋತ್ತಮ ಗೌಡ, ಮೋಹನ ನಾಯ್ಕ, ದಿಲೀಪ ನಾಯ್ಕ, ಚೇತನ ಹರಿಕಂತ್ರ, ಮಕ್ಬುಲ್ ಶೇಖ್ ಇದ್ದರು.

ಗಾಯದ ಮೇಲೆ ಬರೆ: ಹಳಿಯಾಳ: ಇಂಧನ ಬೆಲೆ ಏರಿಕೆ ಖಂಡಿಸಿ ಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ಘಟಕದಿಂದ ತಹಸೀಲ್ದಾರ್ ಕಚೇರಿಯ ಎದುರು ಶನಿವಾರ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಯಿತು.

ವಿಧಾನಪರಿಷತ್ ಸದಸ್ಯ ಎಸ್.ಎಲ್. ಘೊಟ್ನೇಕರ್ ಮಾತನಾಡಿ, ಕರೊನಾ ಲಾಕ್​ಡೌನ್​ನಿಂದ ಜನ ಆರ್ಥಿಕ ಮುಗ್ಗಟ್ಟಿನಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಇಂಧನ ಬೆಲೆ ಏರಿಸಿ ಗಾಯದ ಮೇಲೆ ಬರೆ ಎಳೆಯುತ್ತಿದೆ. ಜನ ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಸರ್ಕಾರ ಶೀಘ್ರ ಇಂಧನ ಬೆಲೆ ಇಳಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನಾಕಾರರು ರಾಷ್ಟ್ರಪತಿ ಅವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ವಿದ್ಯಾಧರ ಗುಳಗುಳೆ ಅವರಿಗೆ ಸಲ್ಲಿಸಿದರು. ಯುವ ಕಾಂಗ್ರೆಸ್ ಘಟಕ ಅಧ್ಯಕ್ಷ ರವಿ ತೋರಣಗಟ್ಟಿ, ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಹನೋರಿಯಾ ಬೃಗಾಂಜಾ, ಎಪಿಎಂಸಿ ಅಧ್ಯಕ್ಷ ಶ್ರೀನಿವಾಸ ಘೂಟ್ನೇಕರ್, ಜಿಲ್ಲಾ ಸಹಕಾರಿ ಯುನಿಯನ್ ಉಪಾಧ್ಯಕ್ಷ ಶಿವಪುತ್ರಪ್ಪ ನುಚ್ಛಂಬ್ಲಿ, ಗುಲಾಭಷ್ಯಾ ಲತೀಪಣ್ಣನವರ, ಸತ್ಯಜಿತ ಗಿರಿ, ಎಸ್.ಜಿ. ಮಾನಗೆ, ಪುರಸಭಾ ಸದಸ್ಯ ಅನಿಲ ಚೌಹಾಣ, ಪ್ರಮುಖರಾದ ಉಮೇಶ ಬೊಳಶೆಟ್ಟಿ, ರೋಹನ್ ಬೃಗಾಂಜಾ, ಯಶ್ವಂತ ಪಟ್ಟೇಕರ್, ಸಿಕಂದರ ಮುಲ್ಲಾ, ಅಬ್ದುಲ್ ಸಲೇಂ ದಲಾಲ, ಚಂದ್ರು ಗೊಂದಳಿ ಮೊದಲಾದವರು ಇದ್ದರು.

ಪ್ರಮುಖರು ಗೈರು: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಭಾಷ ಕೊರ್ವೆಕರ್, ಜಿಪಂ ಉಪಾಧ್ಯಕ್ಷ ಸಂತೋಷ ರೇಣಕೆ, ಸದಸ್ಯ ಕೃಷ್ಣ ಗೌಡ ಪಾಟೀಲ್, ಲಕ್ಷ್ಮೀ ಕೊರ್ವೆಕರ್, ಮಹೇಶ್ವರಿ ಮಿಶಾಳೆ ಸೇರಿ ಹಲವರು ಪ್ರತಿಭಟನೆಗೆ ಗೈರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net