ಸುರಭಿ ಸಹಕಾರ ಸಂಘದಿಂದ ಜೇನು ಕೃಷಿ ತರಬೇತಿ

24sor2
ಸೊರಬದತೋಟೋತ್ಪನ್ನ ಸಂಸ್ಕರಣ ಮತ್ತು ಮಾರಾಟ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ಕೆ.ವಿ.ಗೌಡ ಉದ್ಘಾಟಿಸಿದರು. ಟಿ.ಬಿ.ರಾಜೇಂದ್ರನಾಯ್ಕ, ಬಸವರಾಜಪ್ಪ ಕೆರೂರು, ಪುಟ್ಟಪ್ಪ, ಸಚ್ಚಿದಾನಂದ ಹೆಗಡೆ ಇತರರಿದ್ದರು.
Published on

ಸೊರಬ: ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೃಷಿ ಯಂತ್ರೋಪಕರಣಗಳನ್ನು ಸಬ್ಸಿಡಿ ದರದಲ್ಲಿ ನೀಡುವ ಜತೆಗೆ ಸಹಕಾರ ಸಂಘ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಸುರಭಿ ತೋಟೋತ್ಪನ್ನ ಸಂಸ್ಕರಣ ಮತ್ತು ಮಾರಾಟ ಸಹಕಾರ ಸಂಘದ ಅಧ್ಯಕ್ಷ ಕೆ.ವಿ.ಗೌಡ ಹೇಳಿದರು.

ಪಟ್ಟಣದ ಮುರುಘಾ ಮಠದ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘ ಆರಂಭವಾಗಿ ನಾಲ್ಕು ವರ್ಷಗಳನ್ನು ಕಳೆದಿದ್ದು ಆರಂಭದ ಎರಡು ವರ್ಷ ಕರೊನಾ ವ್ಯಾಪಿಸಿದ್ದರಿಂದ ವ್ಯಾಪಾರ-ವಹಿವಾಟು ಸಮರ್ಪಕವಾಗಿ ನಡೆಯದೆ ನಷ್ಟದ ಸ್ಥಿತಿಯಲ್ಲಿತ್ತು. ಕಳೆದೆರಡು ವರ್ಷಗಳಿಂದ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿದೆ. ನಷ್ಟ ಪ್ರಮಾಣವೂ ಸಾಕಷ್ಟು ಇಳಿಕೆಯಾಗಿದೆ. ರೈತರಿಗೆ ಅನುಕೂಲ ಕಲ್ಪಿಸಲು ಕೃಷಿ ಯಂತ್ರೋಪಕರಣಗಳನ್ನು ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಶಿರಸಿಯ ಟಿಎಂಎಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಅಡಕೆ, ಕಾಳು ಮೆಣಸು, ಏಲಕ್ಕಿ ಸೇರಿದಂತೆ ಇತರೆ ವಸ್ತುಗಳ ಚಿಲ್ಲರೆ ಮಾರಾಟ ಮಳಿಗೆಯನ್ನು ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಬೆಳೆಗಾರರಿಗೆ ಕೃಷಿ ಜತೆಗೆ ಜೇನು ಕೃಷಿ ತರಬೇತಿಯನ್ನು ನೀಡುವ ಮೂಲಕ ಜೇನು ಪೆಟ್ಟಿಗೆಗಳನ್ನು ಸಹ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ತಾಲೂಕಿನಿಂದ ಆಯ್ದ 35 ಜನರಿಗೆ ಜೇನು ಕೃಷಿ ತರಬೇತಿ ನೀಡುವ ಉದ್ದೇಶ ಹೊಂದಲಾಗಿದೆ. ಇದರಿಂದ ತೋಟಗಾರಿಕಾ ಬೆಳೆಗಳ ಜತೆಗೆ ಜೇನು ಕೃಷಿ ಕೈಗೊಂಡರೆ ಆರ್ಥಿಕವಾಗಿಯೂ ಲಾಭವಾಗಲಿದೆ. ತೋಟಗಾರಿಕಾ ಔಷಧ ಮತ್ತು ಗೊಬ್ಬರ ಮಳಿಗೆಯನ್ನು ಸ್ಥಾಪಿಸಲು ಯೋಜನೆ ರೂಪಿಸಿ ಸಿದ್ಧತೆ ಕೈಗೊಳ್ಳಲಾಗಿದೆ ಎಂದರು.
ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಾಲತೇಶ್ ವಾರ್ಷಿಕ ವರದಿ ವಾಚಿಸಿದರು. ಸಂಘದ ಸಭೆ ಮತ್ತು ಹೋಬಳಿವಾರು ಬೀಜ-ಗೊಬ್ಬರ ಖರೀದಿ ಮಳಿಗೆ ಸ್ಥಾಪನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಸದಸ್ಯರು ಚರ್ಚಿಸಿದರು. ಹಾಪ್‌ಕಾಮ್ಸ್‌ನಲ್ಲಿ ಷೇರು ಖರೀದಿಸಲು ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.
ನಿರ್ದೇಶಕರಾದ ಟಿ.ಬಿ.ರಾಜೇಂದ್ರ ನಾಯ್ಕ, ಬಸವರಾಜಪ್ಪ ಕೆರೂರು, ಪುಟ್ಟಪ್ಪ, ಸಚ್ಚಿದಾನಂದ ಹೆಗಡೆ, ಎನ್.ಎಂ.ನಾಗರಾಜ, ಕೆ.ಎಚ್.ಬಂಗಾರಪ್ಪಗೌಡ, ಎಚ್.ಪಿ.ಪ್ರೇಮಾ, ಹೇಮಲತಾ, ಒ.ಬಿ.ರಾಜಶೇಖರ, ಉಮಾಪತಿ, ಎನ್.ಆರ್.ಶಿವಕುಮಾರ್, ಎಚ್.ಎನ್. ಬಸವೇಶ್ವರಪ್ಪ, ಮಧುಬನ ಜೇನು ಸಂಸ್ಕರಣಾ ಮತ್ತು ಮಾರಾಟ ಸಹಕಾರ ಸಂಘದ ಕಾರ್ಯದರ್ಶಿ ವಿಘ್ನೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net