ಸುರಪುರದಲ್ಲಿ ಸಂಭ್ರಮದ ಹಾಲೋಕುಳಿ ಜಾತ್ರೆ

8 srp 1
ಸುರಪುರದ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನ ಆವರಣದಲ್ಲಿ ಜಾತ್ರೆ ನಿಮಿತ್ತ ಸ್ತಂಭಾರೋಹಣ ಸ್ಪರ್ಧೆವೀಕ್ಷಿಸಲು ನೆರದಿದ್ದ ಜನ ಸಾಗರ.
Published on

ಸುರಪುರ: ಸಗರ ನಾಡು, ಗೋಸಲ ರಾಜವಂಶದ ಆರಾಧ್ಯ ದೈವ ಶ್ರೀವೇಣುಗೋಪಾಲ ಸ್ವಾಮಿ ಹಾಲೋಕುಳಿ ಜಾತ್ರಾ ಮಹೋತ್ಸವ ಸಂಭ್ರಮದಿAದ ಜರುಗಿತು.

ಶುಕ್ರವಾರ ಬೆಳಿಗ್ಗೆಯಿಂದಲೇ ವೇಣುಗೋಪಾಲ ಸ್ವಾಮಿಗೆ ಸುಪ್ರಭಾತ ಸೇವೆ, ದಾಸರ ಸಂಗೀತ ಸೇವೆ, ವಿಶಿಷ್ಟ ಅಲಂಕಾರ ಸೇರಿ ವಿವಿಧ ಪೂಜಾ ಕೈಂಕರ್ಯಗಳು ದೇವಸ್ಥಾನ ಅರ್ಚಕ ಆಂಜನೇಯಚಾರ್ಯಲು ನೇತೃತ್ವದಲ್ಲಿ ನೆರವೇರಿದವು. ಅರಮನೆಯಲ್ಲಿ ತಿರುಪತಿಯ ವೆಂಕಟೇಶ್ವರ ಸ್ವಾಮಿಗೆ ಮುಡುಪು ಕಟ್ಟುವ ಕಾರ್ಯಕ್ರಮ, ದರಬಾರಿನ ದೇವರುಗಳಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಗುರುವಾರ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯೊಂದಿಗೆ ಆರಂಭಗೊಂಡ ಜಾತ್ರಾ ಕಾರ್ಯಕ್ರಮಗಳು ವೇಣುಗೋಪಾಲ ಸ್ವಾಮಿಗೆ ವಿಶೇಷ ಅಲಂಕಾರ, ಮಹಾಪೂಜೆ, ತೊಟ್ಟಿಲು ಸೇವೆ ನಡೆದವು. ಉಪವಾಸ ವ್ರತ ಕೈಗೊಂಡ ಭಕ್ತರು ಸಂಜೆ ಸ್ವಾಮಿಯ ದರ್ಶನ ಪಡೆದರು.

ದೇವರ ಕಂಭಾರೋಹಣ: ವೇಣುಗೋಪಾಲ ಸ್ವಾಮಿ ಜಾತ್ರೆಯ ಮುಖ್ಯ ಆಕರ್ಷಣೆ ದೇವರ ಕಂಭಾರೋಹಣಕ್ಕೆ ಸಂಸ್ಥಾನದ ವತನದಾರರಾದ ಗಣೇಶ ಜಹಗೀರದಾರ ದೇವಸ್ಥಾನದ ಮೇಲಿಂದ ನಾಣ್ಯ ಚಲ್ಲುವ ಮೂಲಕ ಚಾಲನೆ ನೀಡಿದರು. ಸಂಪ್ರದಾಯದಂತೆ ದೇವಸ್ಥಾನದ ಕೆಳಗಿನ ಆವರಣದಲ್ಲಿ ಪಂಚ ಕಂಬಗಳನ್ನು ನಡು ಹಾಕಲಾಗಿತ್ತು.

ಸ್ಪರ್ಧೆ ಪದ್ಧತಿ: ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ನೆಟ್ಟ ಎತ್ತರದ ಮರದ ತುಂಡುಗಳಿಗೆ ಬಾಳೆಹಣ್ಣು ಸೇರಿ ಇತರೆ ಜಾರುವ ಪದಾರ್ಥಗಳನ್ನು ಲೇಪಿಸಿ ಸಿದ್ದಾಪುರ, ಮಲ್ಲಿಬಾವಿ, ಕುಂಬಾರಪೇಟೆ, ಸತ್ಯಂಪೇಟೆ ಹಾಗೂ ೭ ಕೇರಿಗಳ ವತನದಾರರು ಕಂಬಗಳನ್ನು ಏರಿ ಮೇಲೆ ಕಟ್ಟಿದ ಬಾಳೆಹಣ್ಣು ಮತ್ತು ಇತರ ಪದಾರ್ಥಗಳನ್ನು ಹರಿಯುವುದು ಸ್ಪರ್ಧೆ ಪದ್ಧತಿ. ಕಂಬಕ್ಕೆ ಕಟ್ಟಿರುವ ಹಣ್ಣಿನ ತುಂಡುಗಳನ್ನು ಹರಿಯಲು ಕಂಬವನ್ನು ಹತ್ತಲು ೭ ಕೇರಿ ವತನದಾರರು ಪ್ರಯತ್ನಿಸುತ್ತಿದ್ದರು. ಕಂಬದ ಮೇಲಿದ್ದ ವ್ಯಕ್ತಿ ಕೆಳಗೆ ನೀರನ್ನು ಚೆಲ್ಲುತ್ತಿದ್ದರಿಂದ ಕಂಬ ಹತ್ತಲಾಗದೆ ಕೆಳಗೆ ಜಾರುತ್ತಿದ್ದರು. ಈ ಸ್ಪರ್ಧೆಯು ನೆರೆದಿರುವ ಭಕ್ತ ಸಮೂಹದ ಕಣ್ಮನ ಸೆಳೆಯಿತು. ಅಲ್ಲದೆ ಸ್ತಂಭಾರೋಹಿಗಳು ಜಾರಿ ಜಾರಿ ಕೆಳಗೆ ಬೀಳುವ ದೃಶ್ಯ ಭಕ್ತ ಸಮೂಹಕ್ಕೆ ಸಂತಸ ಉಂಟು ಮಾಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net