ಸುರಕ್ಷತಾ ಕ್ರಮಗಳಿಗೆ ಸಿಇಒ ತಾಕೀತು

CTD ZP Ceo Dr. Akash---
Published on

ಚಿತ್ರದುರ್ಗ: ಸಮಾಜ ಕಲ್ಯಾಣ ಇಲಾಖೆ ಮೆಟ್ರಿಕ್ ಹಾಗೂ ಮೆಟ್ರಿಕ್ ನಂತರದ ಜಿಲ್ಲೆಯ ಎಲ್ಲ ಅಂಬೇಡ್ಕರ್ ವಿದ್ಯಾರ್ಥಿ ನಿಲಯಗಳಲ್ಲಿ ಅಗತ್ಯ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಪಂ ಸಿಇಒ ಡಾ.ಎಸ್.ಆಕಾಶ್ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.

ನಿಲಯ ಮೇಲ್ವಿಚಾರಕರು ವಿದ್ಯಾರ್ಥಿನಿಲಯಗಳಲ್ಲಿ ಅಳವಡಿಸಿರುವ ಸಿಸಿ ಟಿವಿ ಕ್ಯಾಮರಾಗಳನ್ನು ಸುಸ್ಥಿತಿಯಲ್ಲಿ ಇಡುವಂತೆ ನೋಡಿಕೊಳ್ಳಬೇಕು. ಕ್ಯಾಮರಾ ಕೆಟ್ಟು ಹೋದ ಸಂದರ್ಭದಲ್ಲಿ ಕೂಡಲೆ ದುರಸ್ತಿ ಮಾಡಿಸಿ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಪ್ರತಿ ತಿಂಗಳು ಸಿಸಿ ಟಿವಿ ಕ್ಯಾಮರಾ ದೃಶ್ಯಗಳನ್ನು ಸಿಡಿ ಅಥವಾ ಪೆನ್‌ಡ್ರೈವ್‌ನಲ್ಲಿ ಸಂಗ್ರಹಿಸಿಡಬೇಕು ಎಂದಿದ್ದಾರೆ.

ವಿದ್ಯಾರ್ಥಿನಿಲಯದ ಸಿಬ್ಬಂದಿ ಪ್ರವೇಶ ದ್ವಾರದಲ್ಲಿದ್ದು, ವಿದ್ಯಾರ್ಥಿಗಳು ಹೊರಗೆ ತೆರಳುವ ಹಾಗೂ ಒಳಗೆ ಬರುವ ಮುನ್ನ ಅವರ ಹೆಸರು, ಸಮಯ, ಸ್ಥಳ ಮತ್ತು ದಿನಾಂಕವನ್ನು ಕಡ್ಡಾಯವಾಗಿ ನಮೂದಿಸಬೇಕು. ವಿದ್ಯಾರ್ಥಿಗಳು ರಜೆ ಕೋರಿದಾಗ ಪಾಲಕರಿಂದ ಅಥವಾ ಪತ್ರದ ಮೂಲಕ ಖಾತ್ರಿಪಡಿಸಿಕೊಂಡ ನಂತರವೇ ರಜೆ ಮಂಜೂರು ಮಾಡಬೇಕು ಎಂದಿದ್ದಾರೆ.

ವಿದ್ಯಾರ್ಥಿನಿಯರು ರಜೆ ಮೇಲೆ ತೆರಳಿದ ಸಂದರ್ಭದಲ್ಲಿ ಪಾಲಕರ ಮೊಬೈಲ್‌ಗೆ ವಿಡಿಯೋ ಕರೆ ಮಾಡಿ ಸುರಕ್ಷಿತವಾಗಿ ವಿದ್ಯಾರ್ಥಿನಿ ಮನೆ ತಲುಪಿದ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕು. ಮುಖ್ಯವಾಗಿ ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಹತ್ತಿರ ಪೊಲೀಸ್ ಠಾಣೆಯಿಂದ ಬೀಟ್ ವ್ಯವಸ್ಥೆ ಕಲ್ಪಿಸಿಕೊಳ್ಳಬೇಕು. ವಿದ್ಯಾರ್ಥಿನಿಲಯದ ಮುಖ್ಯದ್ವಾರದ ಒಂದು ಕಿ.ಮೀ.ವ್ಯಾಪ್ತಿಯಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ, ತಕ್ಷಣವೇ ಪೊಲೀಸರಿಗೆ ವಾರ್ಡನ್ ದೂರು ನೀಡಬೇಕೆಂದು ತಿಳಿಸಿದ್ದಾರೆ.

ನಿಲಯ ಮೇಲ್ವಿಚಾರಕರು ಹಾಗೂ ಸಿಬ್ಬಂದಿ ನಿತ್ಯ ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆಯವರೆಗೆ ಕಡ್ಡಾಯವಾಗಿ ನಿಲಯದಲ್ಲಿ ಹಾಜರಿದ್ದು ವಿದ್ಯಾರ್ಥಿಗಳ ಚಲನ-ವಲನಗಳ ಮೇಲೆ ನಿಗಾ ಇರಿಸಬೇಕು. ರಾತ್ರಿ ಕಾವಲುಗಾರರು ಸಂಜೆ 5 ಗಂಟೆಗೆ ಕರ್ತವ್ಯಕ್ಕೆ ಹಾಜರಾಗಿ ಮಾರನೇ ದಿನ ಬೆಳಗ್ಗೆ 7 ಗಂಟೆಗೆ ತೆರಳಬೇಕು. ವಿದ್ಯಾರ್ಥಿಗಳು ಮೊಬೈಲ್ ಬಳಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದಿದ್ದಾರೆ.

ವಿದ್ಯಾರ್ಥಿ ನಿಲಯದಲ್ಲಿ ಪ್ರತಿ 3 ತಿಂಗಳಿಗೊಮ್ಮೆ ಇಲಾಖೆ ಸಹಾಯಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಲೈಂಗಿಕ ದೌರ್ಜನ್ಯ ಹಾಗೂ ಮಾನಸಿಕ ಸಧೃಡತೆ ಕುರಿತು ನುರಿತ ತಜ್ಞರಿಂದ ಅರಿವು ಮೂಡಿಸುವ ಕಾರ್ಯಾಗಾರ ಆಯೋಜಿಸಬೇಕು. ಕಾರ್ಯಾಗಾರದ ಛಾಯಾಚಿತ್ರಗಳೊಂದಿಗೆ ತಪ್ಪದೇ ರಿಜಿಸ್ಟರ್‌ನಲ್ಲಿ ನಮೂದಿಸಬೇಕು ಎಂದಿದ್ದಾರೆ.

ಮಾನಸಿಕ ತಪಾಸಣೆ ವೇಳೆ ಒತ್ತಡ, ಖಿನ್ನತೆಗೊಳಗಾದ ವಿದ್ಯಾರ್ಥಿನಿಯರಿಗೆ ನುರಿತ ಸಮಾಲೋಚಕರಿಂದ ಚಿಕಿತ್ಸೆ ಕೊಡಿಸಬೇಕೆಂದು ಸಿಇಒ ನಿರ್ದೇಶಿಸಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net