ಸುರಕ್ಷತಾ ಕಿಟ್ ವಿತರಣೆಗೆ ಕ್ರಮ ವಹಿಸಿ

29-hvr-03
Published on

ಹಾವೇರಿ: ಜಿಲ್ಲೆಯ ಕಟ್ಟಡ ಕಾರ್ವಿುಕರು ಹಾಗೂ ಅಸಂಘಟಿತ ಕಾರ್ವಿುಕರಿಗೆ ಕರೊನಾ ವೈರಸ್​ನಿಂದ ಸಂರಕ್ಷಣೆ ಕುರಿತಂತೆ ಜಾಗೃತಿ ಹಾಗೂ ಸುರಕ್ಷತಾ ಕಿಟ್ ವಿತರಿಸಲು ಕ್ರಮ ವಹಿಸಬೇಕು ಎಂದು ಕಾರ್ವಿುಕ ಇಲಾಖೆ, ರೆಡ್​ಕ್ರಾಸ್ ಸಂಸ್ಥೆಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಸಂಜೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನೋಂದಾಯಿಸಿಕೊಂಡ ಕರೊನಾ ಹಾಗೂ ರೆಡ್​ಕ್ರಾಸ್ ಸಂಸ್ಥೆಯ ಸ್ವಯಂ ಸೇವಕರ ಸಭೆಯಲ್ಲಿ ಮಾತನಾಡಿದ ಅವರು, ಕರೊನಾ ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ ಹಲವು ಕ್ರಮಗಳನ್ನು ಕೈಗೊಂಡಿದೆ. ಹಲವು ತಂಡಗಳನ್ನು ರಚಿಸಲಾಗಿದೆ. ಈ ತಂಡದೊಂದಿಗೆ ಕೈಜೋಡಿಸಿ ಕಾರ್ಯನಿರ್ವಹಿಸಿ ಎಂದು ಸಲಹೆ ನೀಡಿದರು.

ಜಿಲ್ಲೆಯ ನೋಂದಾಯಿತ ಕಟ್ಟಡ ಕಾರ್ವಿುಕರು, ಅಸಂಘಟಿತ ಕಾರ್ವಿುಕರಿಗೆ ಜಾಗೃತಿ ಹಾಗೂ ಕರೊನಾ ಸುರಕ್ಷತಾ ಕಿಟ್ ವಿತರಿಸಲು ಕಾರ್ವಿುಕ ಇಲಾಖೆಗೆ ಅನುದಾನ ಬಿಡುಗಡೆಯಾಗಿದೆ. ಈ ಕುರಿತಂತೆ ಕಾರ್ಯಕ್ರಮ ಆಯೋಜಿಸಿ ಸರ್ಕಾರದ ಮಾರ್ಗಸೂಚಿಯಂತೆ ಸ್ವಯಂ ಸೇವಕರನ್ನು ಬಳಸಿಕೊಂಡು ಜಾಗೃತಿಯೊಂದಿಗೆ ಪರಿಕರ ವಿತರಿಸಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಹೋಮ್ ಕ್ವಾರಂಟೈನ್​ನಲ್ಲಿರುವ ವ್ಯಕ್ತಿಗಳ ಮೇಲೆ ನಿಗಾ, ಸಹಾಯವಾಣಿಗಳ ಕಾರ್ಯನಿರ್ವಹಣೆ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕರೊನಾ ಕುರಿತಂತೆ ಹರಡುವ ಸುಳ್ಳು ಸುದ್ದಿಗಳನ್ನು ಗಮನಿಸಿ ನೈಜತೆಯನ್ನು ತಿಳಿಸುವ ನಿಟ್ಟಿನಲ್ಲಿ ಸ್ವಯಂ ಸೇವಕರು ಕಾರ್ಯನಿರ್ವಹಿಸಬೇಕು ಎಂದರು.

ಜಿಲ್ಲಾ ಕಾರ್ವಿುಕ ಇಲಾಖೆ ಅಧಿಕಾರಿ ಕಲಾವತಿ ಸಾತೇನಹಳ್ಳಿ ಮಾತನಾಡಿ, ಜಿಲ್ಲೆಯಲ್ಲಿ ನೋಂದಾಯಿತ ಹಾಗೂ ಅಸಂಘಟಿತ ಕಾರ್ವಿುಕರಿಗೆ ಕರೊನಾ ಸುರಕ್ಷತಾ ಕಿಟ್ ವಿತರಿಸಿ ಜಾಗೃತಿ ಮೂಡಿಸಲು 10 ಲಕ್ಷ ರೂ. ಬಿಡುಗಡೆಯಾಗಿದೆ. 60 ಸಾವಿರ ಕಾರ್ವಿುಕರು ಜಿಲ್ಲೆಯಲ್ಲಿದ್ದಾರೆ. ಈ ಕಾರ್ವಿುಕರಿಗೆ ಕರೊನಾ ಸುರಕ್ಷತೆಗಾಗಿ ಮಾಸ್ಕ್, ಸೋಪು, ಸ್ಯಾನಿಟೈಸರ್ ಒಳಗೊಂಡು ಕಿಟ್ ವಿತರಿಸಲಾಗುವುದು. ಮನೆ-ಮನೆಗೆ ಕರೊನಾ ಲಕ್ಷಣಗಳು, ಮುಂಜಾಗ್ರತೆ ಕ್ರಮಗಳ ಕುರಿತಂತೆ ಪ್ರಚಾರ ಸಾಮಗ್ರಿಯನ್ನು ಮುದ್ರಿಸಿ ವಿತರಿಸಿ ಜಾಗೃತಿ ಮೂಡಿಸಲಾಗುವುದು ಎಂದರು.

ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ರೆಡ್​ಕ್ರಾಸ್ ಸಂಸ್ಥೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಕಾರ್ಯದರ್ಶಿ ಡಾ. ನಿಲೇಶ್, ವಾರ್ತಾಧಿಕಾರಿ ಡಾ. ಬಿ.ಆರ್. ರಂಗನಾಥ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮಠದ, ವಿವಿಧ ಸ್ವಯಂ ಸೇವಕರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net