

ತುಮಕೂರು : ಸ್ವಾತಂತ್ರೃ ಪೂರ್ವದಿಂದಲೂ ಕುರುಬರಿಗೆ ಎಸ್ಟಿ ಮೀಸಲಾತಿ ಇದೆ, ಡಾ.ಬಿ.ಆರ್.ಅಂಬೇಡ್ಕರ್ ಕೂಡ ಸಂವಿಧಾನದಲ್ಲಿ ಮೀಸಲಾತಿ ಕಲ್ಪಿಸಿದ್ದಾರೆ. ಅದನ್ನು ಮತ್ತೆ ಪಡೆಯಲು ಹೋರಾಟ ಅನಿರ್ವಾಯವಾಗಿದ್ದು, ಇದು ನಿರ್ಣಾಯಕವಾಗಲಿದೆ ಎಂದು ಕಾಗಿನೆಲೆ ಕನಕಗುರು ಪೀಠದ ಜಗದ್ಗುರು ಶ್ರೀನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.
ನಗರ ಹೊರವಲಯದ ಮಂಚಕಲ್ಕುಪ್ಪೆಯಲ್ಲಿ ಭಾನುವಾರ ಆಯೋಜಿಸಿದ್ದ ಕುರುಬರ ಎಸ್ಟಿ ಮೀಸಲಾತಿ ಹೋರಾಟ ಜನ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಸುಮ್ಮನೆ ಕುಳಿತರೆ ಮೀಸಲಾತಿ ದೊರಕುವುದಿಲ್ಲ, ರಸ್ತೆಗೆ ಇಳಿದು ಹೋರಾಟ ಮಾಡಬೇಕಿದೆ ಎಂದರು.
40 ವರ್ಷಗಳಿಂದ ತಮಿಳುನಾಡಿನಲ್ಲಿ ಕುರುವರ್ ಮತ್ತು ಕುರುಬರ್ ಸಮುದಾಯ ಎಸ್ಟಿ ಮೀಸಲಾತಿಗೆ ಮನವಿ ಸಲ್ಲಿಸುತ್ತಿವೆ. ಆದರೆ, ಯಾವ ಪ್ರಯೋಜನವಾಗಿಲ್ಲ, ಗೊಂಡ, ರಾಜಗೊಂಡ, ಕುರುಬ, ಹಾಲುಮತ ಎಲ್ಲವೂ ಕುರುಬ ಸಮುದಾಯದ ಹೆಸರುಗಳೇ, ರಾಯಚೂರು ಮತ್ತು ಕೊಡಗಿನಲ್ಲಿ ಎಸ್ಟಿ ಮೀಸಲಾತಿ ನೀಡಲಾಗುತ್ತಿದೆ, ಅದನ್ನು ರಾಜ್ಯಾದ್ಯಂತ ವಿಸ್ತರಿಸಬೇಕಷ್ಟೇ ಎಂದರು.
ದೇವರಾಜ ಅರಸು, ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಗಳಾಗಿದ್ದಾಗ ಕುರುಬರನ್ನು ಎಸ್ಟಿ ಮೀಸಲಾತಿ ನೀಡಲು ಶಿಫಾರಸು ಮಾಡಿದ್ದರು, ಅಂದು ಸಮುದಾಯ ಎಚ್ಚೆತ್ತಿದ್ದರೆ ಇಂದು ನಾವು ಎಸ್ಟಿ ಮೀಸಲಾತಿ ಪಡೆಯುತ್ತಿದ್ದೆವು ಎಂದರು.
ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಕುರುಬರಿಗೆ ಎಸ್ಟಿ ಮೀಸಲಾತಿ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಆದರೆ, ಯಾವ ಪ್ರಗತಿಯೂ ಆಗಿಲ್ಲ, ಎಲ್ಲ ರಾಜಕೀಯ ಪಕ್ಷಗಳು ಕುರುಬರ ಮತ ಪಡೆಯುತ್ತವೆಯೇ ಹೊರತು ಮೀಸಲಾತಿ ಕಲ್ಪಿಸುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಕುರುಬರಿಗೆ ಎಸ್ಟಿ ಮೀಸಲಾತಿ ದೊರಕಿಸಲು ಯಾರ ಮನೆ ಬಾಗಿಲಿಗೆ ಬೇಕಾದರೂ ಹೋಗುತ್ತೇವೆ, ಅವರಿಗೆ ಬೆಂಬಲ ನೀಡುತ್ತೇವೆ, ಹಿಂದುಳಿದ ಕುರುಬ ಸಮುದಾಯ ಮುಂದುವರಿಯಬೇಕಾದರೆ ಎಸ್ಟಿ ಮೀಸಲಾತಿ ದೊರೆಯಬೇಕು, ಹೋರಾಟದ ಫಲವಾಗಿ ಕುರುಬರು ಇಂದು ಸಂಘಟಿತರಾಗಿದ್ದಾರೆ, ಎಚ್ಚರಗೊಂಡಿದ್ದಾರೆ, ಫೆ.7ರಂದು ನಡೆಯಲಿರುವ ಹಕ್ಕೊತ್ತಾಯ ಸಮಾವೇಶದಲ್ಲಿ ಅಖಂಡ ಕುರುಬ ಸಮುದಾಯ ಭಾಗವಹಿಸಬೇಕು ಎಂದು ಕರೆ ನೀಡಿದರು.
ಕುರುಬ ಸಮುದಾಯದ ವಿವಿಧ ಮುಖಂಡರು ಸಭೆಯಲ್ಲಿ ಮಾತನಾಡಿದರು, ಶ್ರೀರೇವಣಸಿದ್ದೇಶ್ವರ ಶಾಂತಮಯ ಸ್ವಾಮೀಜಿ, ಶ್ರೀ ಸೋಮಲಿಂಗೇಶ್ವರ ಸ್ವಾಮೀಜಿ, ಮೈಲಾರಲಿಂಗೇಶ್ವರ ಕಾಣಿಕಗೊರವಯ್ಯನವರ ಮೈಲಾರ, ಶ್ರೀ ಮತ್ತೇಶ್ವರ ಸ್ವಾಮೀಜಿ, ಶ್ರೀ ರೇವಣ್ಣ ಸಿದ್ದೇಶ್ವರಮಠ ಸ್ವಾಮೀಜಿ, ಶ್ರೀ ಅದೇನಾ ಮಾದಯ್ಯ ಸ್ವಾಮೀಜಿ, ಶ್ರೀ ಶರಭಯ್ಯ ಸ್ವಾಮೀಜಿಗಳು, ಶ್ರೀ ಸಂಗಯ್ಯ ಗುರುವಿನನವರ್, ಶ್ರೀ ರೇವಯ್ಯ ಒಡೆಯರ್, ಶ್ರೀ ಬಿಂದುಶೇಖರ ಸ್ವಾಮೀಜಿ, ಶ್ರೀಮಾಳಿಂಗರಾಯ ಸ್ವಾಮೀಜಿ, ಶ್ರೀ ಓಕಾಂರ ಒಡೆಯರ್ ಮತ್ತಿತರರು ಗುರುಗಳು ಇದ್ದರು.
ಕುರುಬ ಸಮುದಾಯ ಇಂದು ತೋರಿಸುತ್ತಿರುವ ಒಗ್ಗಟ್ಟನ್ನು ಬಹಳ ಹಿಂದೆಯೇ ತೋರಿಸಬೇಕಿತ್ತು. ಉದಾರಿಗಳಾದ ಕುರುಬರು ಕೇಳಿರುವ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕಿದೆ, ಅದಕ್ಕಾಗಿ ಹಾಲುಮತ ಸಮಾಜ ಒಂದಾಗಿ ಮುನ್ನೆಡೆಯಬೇಕು, ಕುರುಬರ ಶಕ್ತಿ ಪ್ರದರ್ಶನ ಮಾಡದೇ ಹೋದರೆ ಶತಮಾನಗಳು ಕಳೆದರೂ ಎಸ್ಟಿ ಮೀಸಲಾತಿ ದೊರೆಯುವುದಿಲ್ಲ. ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಕಾಗಿನೆಲೆ ಕನಕಗುರು ಪೀಠ