

ಹಾಸನ: ರಾಜ್ಯ ಸರ್ಕಾರ ನೀಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಸಾಹಿತ್ಯ ಕ್ಷೇತ್ರದಿಂದ ಹಾಸನದ ಸುಬ್ಬು ಹೊಲೆಯಾರ್ ಅವರು ಭಾಜನರಾಗಿದ್ದಾರೆ. ಸುಬ್ಬು ಹೊಲೆಯಾರ್ ಎಂದೇ ಪ್ರಖ್ಯಾತರಾಗಿರುವ ಎಚ್.ಕೆ.ಸುಬ್ಬಯ್ಯ ಇವರು ಕೋಮಾರಯ್ಯ ಮತ್ತು ತಿಪ್ಪಮ್ಮ ದಂಪತಿ ಮಗನಾಗಿ 1962ರ ಸೆ.21ರಂದು ಸಕಲೇಶಪುರ ತಾಲೂಕು ಹೆತ್ತೂರಿನಲ್ಲಿ ಜನಿಸಿದರು.
ಡಿಪ್ಲೊಮ ಇನ್ ಡ್ರಾಮಾ ಪದವಿ, ನೀನಾಸಂ ಹೆಗ್ಗೋಡು ಇಲ್ಲಿ ರಂಗ ಶಿಕ್ಷಣ ಪಡೆದರು. ಸುಮಾರು ಒಂದೂವರೆ ದಶಕಗಳ ಕಾಲ ದಲಿತ ಸಂಘರ್ಷ ಸಮಿತಿಯಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದರು. ಮೂಲತಃ ದಲಿತರ ನೋವು ನಲಿವುಗಳಿಗೆ ಸ್ಪಂದಿಸುತ್ತಾ, ಈ ನೆಲದ ನೊಂದವರ ಧ್ವನಿ ಪಿ.ಲಂಕೇಶ್ ಅವರ ಗರಡಿಯಲ್ಲಿ ಪಳಗಿದ ಇವರು ಬಿ.ಕೃಷ್ಣಪ್ಪ, ದೇವನೂರ ಮಹಾದೇವ, ಸಿದ್ದಲಿಂಗಯ್ಯ, ನಿರಂಜನ, ಕುವೆಂಪು, ಬುದ್ದ, ಬಸವ,ಅಂಬೇಡ್ಕರ್ ಅವರ ಪ್ರಭಾವಗಳು ಇವರ ಬೌದ್ಧಿಕ ಆಲೋಚನೆಗಳನ್ನು ಮತ್ತಷ್ಟು ಶ್ರೀಮಂತಗೊಳಿಸಿವೆ.
‘ಸೂಜಿಗಾತ್ರದ ಕೊಳವೆಯಿಂದ ಮನುಷ್ಯನೊಬ್ಬನ ಹಾಡು’ ಎಂಬ ಕವನ ಸಂಕಲನವನ್ನು 2003ರಲ್ಲಿ ಪ್ರಕಟಿಸಿದರು. ಈ ಕೃತಿಗೆ ಡಾ. ಜಿಎಸ್‌ಎಸ್ ಕಾವ್ಯ ಪ್ರಶಸ್ತಿ, ದಿನಕರ ದೇಸಾಯಿ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಶ್ರೀ ಗಂಧದ ಹಾರ ಕಾವ್ಯ ಪ್ರಶಸ್ತಿ, ಅಮ್ಮ ಗೌರವ ಪ್ರಶಸ್ತಿ, ಮುಳ್ಳೂರ್ ನಾಗರಾಜ್ ಕಾವ್ಯ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳು ಸಂದಿವೆ. ಇವರ ಎರಡನೇ ಕಾವ್ಯ ಸಂಗ್ರಹ ‘ಎಲ್ಲರ ಬೆರಳಲ್ಲೂ ಅಂಟಿಕೊಂಡ ದು:ಖವೇ’ -2013ರಲ್ಲಿ ಪ್ರಕಟವಾಗಿದೆ. ಈ ಕಾವ್ಯಕ್ಕೆ 2013 ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಪುತಿನ ಕಾವ್ಯ ಪ್ರಶಸ್ತಿ ದೊರೆತಿದೆ. ಮುದ್ದಣ ಕಾವ್ಯ ಪ್ರಶಸ್ತಿ, ಬುದ್ಧ ಪ್ರಶಸ್ತಿ, ದಲಿತಸಿರಿ ಪ್ರಶಸ್ತಿ, ಸೇರಿದಂತೆ ಹಲವಾರು ಪುರಸ್ಕಾರಗಳು ಅರಸಿ ಬಂದಿವೆ. 2010ರಲ್ಲಿ ಸಕಲೇಶಪುರ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ನೀಡಿ ಗೌರವಿಸಿದೆ.
ನಿರ್ದೇಶಕಿ ಕವಿತಾ ಲಂಕೇಶ್ ಅವರು ಸುಬ್ಬು ಹೊಲೆಯಾರ್ ಅವರ ಜೀವನ ‘ಕಥೆ ದನ ಕಾಯದವನು’ ಆಧಾರಿತ ಕರಿಯ ಕಣ್‌ಬಿಟ್ಟ ಕಲಾತ್ಮಕ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ. 2007ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಕಾವ್ಯ ಸಂಗ್ರಹ ಇವರ ಸಂಪಾದಕತ್ವದಲ್ಲಿ ಹೊರಬಂದಿದೆ. ಇವರ ಪದ್ಯಗಳನ್ನು ಮಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯ, ಧಾರವಾಡ ವಿಶ್ವವಿದ್ಯಾಲಯ ಮತ್ತು ಕುವೆಂಪು ವಿಶ್ವವಿದ್ಯಾಲಯಗಳು ತಮ್ಮ ಶೈಕ್ಷಣಿಕ ಪಠ್ಯಕ್ರಮದಲ್ಲಿ ಅಳವಡಿಸಿಕೊಂಡಿವೆ. ಸಾಹಿತ್ಯ, ರಂಗಭೂಮಿ, ಸಂಘಟನೆ ಸೇರಿದಂತೆ ಮಾನವೀಯ ಮೌಲ್ಯಗಳ ನಿರಂತರ ಪ್ರತಿಪಾದನೆಯಲ್ಲಿ ತೊಡಗಿರುವ ಜೀವಪರ ದನಿಗಳ ಪರವಾಗಿ ಇಂದಿಗೂ ದುಡಿಯುತ್ತಿದ್ದಾರೆ. ದೂರದರ್ಶನ ಚಂದನ ವಾಹಿನಿಯಲ್ಲಿ 26 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಬೆಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ಮಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.