ಸುಪ್ರೀಂಕೋರ್ಟ್ ತೀರ್ಪು ಸ್ವಾಗತಾರ್ಹ:ಟಿ.ಆರ್. ವಿಜಯಕುಮಾರ್

ಸುಪ್ರೀಂಕೋರ್ಟ್ ತೀರ್ಪು ಸ್ವಾಗತಾರ್ಹ:ಟಿ.ಆರ್. ವಿಜಯಕುಮಾರ್
Published on

ಹಾಸನ: ಪರಿಶಿಷ್ಟ ಜಾತಿಗಳಲ್ಲಿನ ಒಳ ಮೀಸಲಾತಿಯನ್ನು ಕಲ್ಪಿಸುವ ಅಧಿಕಾರ ರಾಜ್ಯಗಳಿಗೆ ಇದೆ ಎಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇವೆ ಎಂದು ಮಾದಿಗ ದಂಡೋರ ಸಮಿತಿ ಜಿಲ್ಲಾಧ್ಯಕ್ಷ ಟಿ.ಆರ್. ವಿಜಯಕುಮಾರ್ ಹೇಳಿದರು.
ಪರಿಶಿಷ್ಟ ಜಾತಿಗಳಲ್ಲಿನ ಮೀಸಲಾತಿ ಹಂಚಿಕೆಯಲ್ಲಿ ಅಸಮಾನತೆಯ ದೃಷ್ಟಿಯಿಂದ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಒದಗಿಸಿಕೊಡಬೇಕು ಎಂಬ ದೃಷ್ಟಿಯಲ್ಲಿ ಕಳೆದ ಮೂರು ದಶಕಗಳಿಂದ ಮಾದಿಗ ದಂಡೋರ ಸಮಿತಿಯು ಸಾಮಾಜಿಕ ನ್ಯಾಯ ಎಂಆರ್‌ಪಿಎಸ್ ರಾಷ್ಟ್ರೀಯ ನಾಯಕ ಮಂದಕೃಷ್ಣ ಮಾದಿಗ ಅವರ ನೇತೃತ್ವದಲ್ಲಿ ದೇಶಾದ್ಯಂತ ಚಳವಳಿಗಳು ನಡೆದು, ಅಂತಿಮವಾಗಿ ಸುಪ್ರೀಂ ಕೋರ್ಟ್ ಸಪ್ತ ಸದಸ್ಯರ ಪೀಠವು 6:1 ಅನುಪಾತದಲ್ಲಿ ಒಳಮೀಸಲಾತಿ ನೀಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ವಾದ ಮಂಡನೆ ಮಾಡಿದ ನ್ಯಾಯವಾದಿ ಶ್ರದ್ಧಾ ದೇಶ್‌ಮುಖ್ ಅವರಿಗೆ ಅಭಿನಂದನೆಗಳು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀರ್ಪನ್ನು ಸ್ವಾಗತಿಸಿದ್ದು, ನಮ್ಮ ರಾಜ್ಯದಲ್ಲೂ ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿಕೆಯನ್ನು ನೀಡಿದ್ದು, ಕೂಡಲೇ ಒಳಮೀಸಲಾತಿ ಜಾರಿಗೆ ತಂದು ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಡಬೇಕೆಂದು ಈ ಮೂಲಕ ಮನವಿ ಮಾಡುತ್ತೇವೆ.
ತೀರ್ಪನ್ನು ಸ್ವಾಗತಿಸಿ ಹಾಸನ ನಗರದಲ್ಲಿ ವಿಜಯೋತ್ಸವ ರ‌್ಯಾಲಿ ನಡೆಸುವ ಸಂಬಂಧ ಆ.4 ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ಸ್ವಾಭಿಮಾನ ಭವನದಲ್ಲಿ ಸಭೆ ಕರೆಯಲಾಗಿದೆ. ಸಮುದಾಯದ ಮಹಿಳೆಯರು, ವಿದ್ಯಾರ್ಥಿಗಳು, ಯುವಜನರು, ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೊರುತ್ತಾ ಒಳಮೀಸಲಾತಿಗಾಗಿ ತನ್ನ ರಾಜಕೀಯ ಜೀವನವನ್ನೇ ಕಳೆದುಕೊಂಡು ಮಂದಕೃಷ್ಣ ಮಾದಿಗ ಅವರ ಬೆನ್ನಿಗೆ ನಿಂತು ಹೋರಾಟ ನಡೆಸಿದ ತ್ಯಾಗ ಜೀವಿಗಳಾದ ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ ಮತ್ತು ಎಚ್. ಆಂಜನೇಯ ಅವರಿಗೆ ಹಾಗೂ ಜಿಲ್ಲೆ ಮತ್ತು ರಾಜ್ಯದಲ್ಲಿ ನಮ್ಮ ಹೋರಾಟಕ್ಕೆ ಬೆಂಬಲವಾಗಿ ನಿಂತ ಎಲ್ಲ ದಲಿತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳಿಗೆ ಸಂಘಟನೆ ವತಿಯಿಂದ ಧನ್ಯವಾದಗಳು ಎಂದರು.
ಸುದ್ದಿಗೋಷ್ಠಿಯಲ್ಲಿ ಮಾದಿಗ ದಂಡೋರ ಸಮಿತಿ ಮುಖಂಡರಾದ ಭೈರೇಶ್ ಹಳೇಬೀಡು, ಸತೀಶ್ ಕಸವಿನಹೊಸಹಳ್ಳಿ, ಚಿಕ್ಕಯ್ಯ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net