ಸುಪ್ರೀಂಕೋರ್ಟ್ ಆದೇಶದಂತೆ ಅರಣ್ಯ ತೆರವು ಒತ್ತುವರಿ ತೆರವು ಮಾಡಬೇಕು

ಸುಪ್ರೀಂಕೋರ್ಟ್ ಆದೇಶದಂತೆ ಅರಣ್ಯ ತೆರವು ಒತ್ತುವರಿ ತೆರವು ಮಾಡಬೇಕು
Published on

ಹಾಸನ: ಅರಣ್ಯ ತೆರವು ಒತ್ತುವರಿ ತೆರವು ವಿಚಾರದಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕರ್ನಾಟಕ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡಬೇಕು ಎಂದು ಜನ ಸಂಗ್ರಾಮ ಪರಿಷತ್‌ನ ಮೈಸೂರು ವಿಭಾಗೀಯ ಕಾರ್ಯದರ್ಶಿ ಅಹಮದ್ ಆಲಿಖಾನ್ ಒತ್ತಾಯಿಸಿದರು.
ಅಕ್ರಮ ಅರಣ್ಯ ಒತ್ತುವರಿ ತೆರವು ಸಂಬಂಧ ಸಚಿವ ಅರಣ್ಯ ಸಚಿವ ಈಶ್ವರ್ ಖಂಡ್ರೆ ಆದೇಶ ಹೊರಡಿಸಿದ್ದಾರೆ.ಆದರೆ ಈ ಸಂಬಂಧ ಕೋರ್ಟ್ ಹೊರಡಿಸಿರುವ ಆದೇಶ ಪ್ರಕಾರವೇ ಅಧಿಕಾರಿಗಳು ನಡೆದುಕೊಳ್ಳಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
1980ಕ್ಕೂ ಹಿಂದೆ ಒತ್ತುವರಿಯಾಗಿರುವುದನ್ನು ಹೊರತು ಪಡಿಸಿ ಉಳಿದ ಭೂಮಿ ತೆರವುಗೊಳಿಸಬೇಕು. 1980ಕ್ಕೂ ಮುಂಚೆ ಮೂರು ಎಕರೆ ಒಳಗೆ ಭೂಮಿ ಒತ್ತುವರಿ ಮಾಡಿರುವ ಬಡವರು, ಆದಿವಾಸಿಗಳು, ಬುಡಕಟ್ಟು ಜನರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು ಎಂಬುದು ನಮ್ಮ ಆಗ್ರಹ. ಆದರೆ ರಾಜ್ಯ ಸರ್ಕಾರದ ಅಧಿಕಾರಿಗಳು ರಾಜ್ಯದಲ್ಲಿ ಯಾವ ವರ್ಷದಲ್ಲಿ ಎಷ್ಟು ಭೂಮಿ ಒತ್ತುವರಿಯಾಗಿದೆ, ಯಾರನ್ನು ತೆರವುಗೊಳಿಸಬೇಕು ಎಂಬ ಬಗ್ಗೆ ಸರ್ಕಾರಕ್ಕೆ ಖಚಿತ ಮಾಹಿತಿ ನೀಡಿಲ್ಲ ಎಂದು ದೂರಿದರು.
ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಮಡಿಕೇರಿ ಮೊದಲಾದ ಜಿಲ್ಲೆಗಳನ್ನು ಒಳಗೊಂಡಿರುವ ಪಶ್ಚಿಮಘಟ್ಟ ಪ್ರದೇಶವನ್ನು ಅನೇಕ ಕಡೆಗಳಲ್ಲಿ ಸಾವಿರಾರು ಎಕರೆ ಭೂ ಒತ್ತುವರಿ ಮಾಡಲಾಗಿದೆ. ಮೊದಲು ಅದನ್ನು ತೆರವು ಗೊಳಿಸಬೇಕು ಎಂದು ಒತ್ತಾಯಿಸಿದರು.
ಕೆಲವರು ಆದೇಶ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಬಡವರಿಗೆ ತೊಂದರೆ ಕೊಡುತ್ತಿರುವ ದೊಡ್ಡವರನ್ನು ಯಾರೂ ಏನು ಮಾಡುತ್ತಿಲ್ಲ ಎಂದು ಬೇಸರ ಹೊರ ಹಾಕಿದರು. ಬಡವರು ಒತ್ತುವರಿ ಮಾಡಿರುವ ಜಾಗವನ್ನು ಮರು ಸ್ವಾಧೀನ ನೆಪದಲ್ಲಿ ಅಧಿಕಾರಿಗಳು ಪಾಲು ಪಡೆಯುವ ಹುನ್ನಾರ ಮಾಡಿದ್ದಾರೆ. ನಮ್ಮ ಆಗ್ರಹ ಏನೆಂದರೆ ಕಾನೂನು ಉಲ್ಲಂಘನೆ ಮಾಡಿರುವವರ ಮೇಲೆ ಕ್ರಮ ಆಗಲಿ, ಕಾನೂನು ಉಲ್ಲಂಘನೆ ಮಾಡಿ ತೆರವು ಮಾಡಲು ಅವಕಾಶ ಕೊಡಬೇಡಿ ಎಂದು ಮನವಿ ಮಾಡಿದರು.
ಮಲೆನಾಡು ಭಾಗಗಳಲ್ಲಿ ಅನೇಕ ಕಡೆ ಅನಧಿಕೃತವಾಗಿ ನೂರಾರು ರೆಸಾರ್ಟ್ ತಲೆ ಎತ್ತಿದ್ದು, ಮೊದಲು ಅವುಗಳನ್ನು ತೆರವುಗೊಳಿಸಬೇಕು. ಹಾಗೆಯೇ ಹಾಸನ ಜಿಲ್ಲೆಯಲ್ಲಿ ಹೆಚ್ಚಾಗಿರುವ ಕಾಡಾನೆ ಸಮಸ್ಯೆಗೆ ಕಡಿವಾಣ ಹಾಕಬೇಕು ಎಂದು ಅವರು ಆಗ್ರಹಿಸಿದರು. ಪತ್ರಿಕಾಗೋಷ್ಟಿಯಲ್ಲಿ ಅಕ್ಮಲ್ ಜಾವೇದ್, ಸಬೀರ್ ಅಹಮದ್, ಅನ್ವರ್ ಪಾಷ, ಅಫ್‌ನಾಲ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net