

ವಿಜಯವಾಣಿ ಸುದ್ದಿಜಾಲ ಧಾರವಾಡ
ಲೇಖಕ ಸುರೇಶ ಗುದಗನವರ ಅವರ ಸುಪ್ತ ಸಾಧಕರು ಕೃತಿಯು ಪುಸ್ತಕಗಳ ಸಾಗರಕ್ಕೆ ಸೇರ್ಪಡೆಗೊಳ್ಳುತ್ತಿದೆ. ಇಂತಹ ಉತ್ಕೃಷ್ಠ ಕೃತಿಗಳು ಪುಸ್ತಕದ ಸಾಗರದ ಆಳಕ್ಕೆ ಸಿಲುಕದೆ ಆಸಕ್ತರ ಕೈಗೆ ಸೇರಬೇಕು. ಅಂದಾಗ ಲೇಖನನ ಶ್ರಮ ಸಾರ್ಥಕವಾಗುತ್ತದೆ ಎಂದು ಹಿರಿಯ ಸಾಹಿತಿ ಪ್ರೊ. ಮಾಲತಿ ಪಟ್ಟಣಶೆಟ್ಟಿ ಹೇಳಿದರು.
ನಗರದ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯದಲ್ಲಿ ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಹಾಗೂ ಸುಮಾ ಪ್ರಕಾಶನದ ಆಶ್ರಯದಲ್ಲಿ ಲೇಖಕ ಸುರೇಶ ಗುದಗನವರ ಅವರ `ಸುಪ್ತ ಸಾಧಕರು' ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಅತಿಥಿಯಾಗಿ ಪಾಲ್ಗೊಂಡಿದ್ದ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪ್ರೊ. ಕೃಷ್ಣಮೂರ್ತಿ ಬಿ.ಆರ್. ಮಾತನಾಡಿ, ಇಂದು ಅಧ್ಯಾಪಕರ ಓದು ಕಡಿಮೆಯಾಗಿದೆ. ಪ್ರಜಾಪ್ರಭುತ್ವ ರೂಪುಗೊಂಡಿರುವುದು ಪುಸ್ತಕಗಳ ಓದು, ಚಿಂತನ, ಮಂಥನ, ಚರ್ಚೆ, ವಿಮರ್ಶೆಗಳ ಮೂಲಕ. ಪುಸ್ತಕಗಳ ಓದು ನಮಗೆ ಅಧ್ಯಾತ್ಮ ವಿದ್ದಂತೆ ಎಂದರು.
ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಅಧ್ಯಕ್ಷ ಮಲ್ಲಿಕಾರ್ಜುನ ಚಿಕ್ಕಮಠ ಅಧ್ಯಕ್ಷತೆ ವಹಿಸಿದ್ದರು. ಡಾ. ವೈ.ಎಂ. ಯಾಕೊಳ್ಳಿ ಕೃತಿಯ ಕುರಿತು ಮಾತನಾಡಿದರು. ಎಸ್. ತಾರಾನಾಥ ಉಪಸ್ಥಿತರಿದ್ದರು. ಲೇಖಕ ಸುರೇಶ ಗುದಗನವರ ದಂಪತಿಯನ್ನು ಸನ್ಮಾನಿಸಲಾಯಿತು.
ಡಾ. ಆರ್.ಬಿ. ಚಿಲುಮಿ, ಅಶೋಕ ಗೌರೋಜಿ, ರಾಮಚಂದ್ರ ಕುಲಕರ್ಣಿ, ಡಾ. ನಾಗರಾಜ ಗುದಗನವರ, ಡಾ. ರಾಜಶ್ರೀ ಗುದಗನವರ, ಟಿ. ನಳಿನಿ ಭೀಮಪ್ಪ, ವೈ.ಬಿ. ಕಡಕೋಳ, ರವಿ ಮರಿಗೌಡರ, ಡಾ. ಎ.ಎಲ್. ದೇಸಾಯಿ, ಗಣೇಶ ಮೂಲಿಮನಿ, ಶಿಲ್ಪಾ ಬಾಳಿಕಾಯಿ, ಇತರರಿದ್ದರು.