

ಚಿತ್ರದುರ್ಗ: ಪ್ರತಿ ವಿದ್ಯಾರ್ಥಿಯಲ್ಲೂ ಒಂದಿಲ್ಲೊಂದು ರೀತಿಯ ಸುಪ್ತ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಹೊರತೆಗೆಯುವಲ್ಲಿ ಶಿಕ್ಷಕರು, ಪಾಲಕರು ಪ್ರಮುಖ ಪಾತ್ರ ವಹಿಸಬೇಕು ಎಂದು ಶಿವಲಿಂಗಾನಂದ ಶ್ರೀ ಹೇಳಿದರು.
ಕಬೀರಾನಂದಾಶ್ರಮದಲ್ಲಿ ಜಿಲ್ಲಾಡಳಿತ, ಜಿಪಂ, ಶಿಕ್ಷಣ ಇಲಾಖೆಯಿಂದ ಪ್ರಾಥಮಿಕ-ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಗೆ ಕಳೆದ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ಕಡಿಮೆ ಫಲಿತಾಂಶ ಬಂದಿದೆ. ಹೀಗಾಗಿ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡಿ, ಹೆಚ್ಚಳಕ್ಕೆ ಶ್ರಮಿಸಿ ಎಂದ ಅವರು, ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಮೆ ಕೆತ್ತಿರುವುದು ನಮ್ಮ ಕನ್ನಡಿಗರು ಎಂಬುದೇ ಹೆಗ್ಗಳಿಕೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೂಡಾ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಮಾತನಾಡಿ, ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗೆ ಹೋಲಿಸಿ ಹಗುರವಾಗಿ ಮಾತನಾಡುವವರೆ ಜಾಸ್ತಿ. ಪ್ರತಿಭೆ ಯಾರ ಸ್ವತ್ತಲ್ಲ. ಆದರೆ, ಗುರುತಿಸುವ ಕೆಲಸ ಪ್ರಾಮಾಣಿಕವಾಗಿ ಆಗಬೇಕು ಎಂದು ಸಲಹೆ ನೀಡಿದರು.
ಡಿಡಿಪಿಐ ಎನ್.ಆರ್.ಮಂಜುನಾಥ್ ಮಾತನಾಡಿ, ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳಲ್ಲೂ ಮಕ್ಕಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಜಾನಪದ, ನಾಟಕ, ಏಕಪಾತ್ರಾಭಿನಯ, ನೃತ್ಯ ಸೇರಿ ಅನೇಕ ರೀತಿಯ ಕಲೆ ಪ್ರದರ್ಶಿಸಿ ತಮ್ಮಲ್ಲಿರುವ ಪ್ರತಿಭೆ ಅನಾವರಣಗೊಳಿಸಲು ಇಲಾಖೆ ಪ್ರತಿ ವರ್ಷವೂ ಈ ಕಾರ್ಯಕ್ರಮ ಆಯೋಜಿಸುತ್ತಿದೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದರು.
ಇದೇ ವೇಳೆ ವಿವಿಧ ವೇಷಭೂಷಣ ಧರಿಸಿದ್ದ ವಿದ್ಯಾರ್ಥಿಗಳು ಕಲೋತ್ಸವದಲ್ಲಿ ತಮ್ಮ ಪ್ರತಿಭೆ ಅನಾವರಣಗೊಳಿಸಲು ಮುಂದಾದರು.
ಶಿವಲಿಂಗಾನಂದ ಶ್ರೀ ನೇತೃತ್ವ ವಹಿಸಿದ್ದರು. ಬಿಇಒಗಳಾದ ಎಸ್.ನಾಗಭೂಷಣ್, ತಿಪ್ಪೇಸ್ವಾಮಿ, ವಿದ್ಯಾಧಿಕಾರಿಗಳಾದ ಸಿದ್ಧಪ್ಪ, ಎನ್.ಆರ್.ತಿಪ್ಪೇಸ್ವಾಮಿ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಂದ್ರಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹಂತೇಶ್, ತಾಲೂಕು ಅಧ್ಯಕ್ಷ ಟಿ.ಕೆಂಚಪ್ಪ, ವಿಷಯ ಪರಿವೀಕ್ಷಕರಾದ ಹನುಮಂತಪ್ಪ, ಶಿವಣ್ಣ, ಗೋವಿಂದಪ್ಪ, ಚಂದ್ರಣ್ಣ, ಪ್ರಶಾಂತ್, ಮಹಲಿಂಗಪ್ಪ, ಮುಖ್ಯ ಶಿಕ್ಷಕ ಡಾ.ಮಹೇಶ್ ಇತರರಿದ್ದರು.