ಸುನೀಲ್ ಕುಮಾರ್ ಇಬ್ಬಂದಿ ನೀತಿ

9 ckm 13 raveesh
ಕೆಪಿಸಿಸಿ ವಕ್ತಾರ ರವೀಶ್ ಬಸಪ್ಪ
Published on

ಚಿಕ್ಕಮಗಳೂರು: ನಕ್ಸಲರನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದು ಸರ್ಕಾರದ ಜವಾಬ್ದಾರಿ ಕೆಲಸ. ಅಂತಹ ಕಾರ್ಯಕ್ಕೆ ಅವಕಾಶ ಮಾಡಿಕೊಟ್ಟಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಭಿನಂದಿಸುತ್ತೇವೆ ಎಂದು ಕೆಪಿಸಿಸಿ ವಕ್ತಾರ ರವೀಶ್ ಬಸಪ್ಪ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಕ್ಸಲ್ ಶರಣಾಗತಿ ವಿಚಾರದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಕಾರ್ಕಳದ ಸುನೀಲ್ ಕುಮಾರ್ ಹೇಳಿರುವ ಹೇಳಿಕೆ ಅವರ ಇಬ್ಬಂದಿ ನೀತಿಯನ್ನು ತೋರುತ್ತದೆ. ಸರ್ಕಾರವೇ ಶರಣಾಗಿದೆ ಎನ್ನುವ ಮಾತನ್ನು ಪ್ರದೇಶ ಕಾಂಗ್ರೆಸ್ ಖಂಡಿಸುತ್ತಿದೆ ಎಂದರು.

ಸುನೀಲ್ ಕುಮಾರ್ ಅವರಿಗೆ ವಿವೇಕದ ಕೊರತೆ ಇದೆ. ಕಳೆದ ತಿಂಗಳು ಛತ್ತೀಸ್‌ಗಡದಲ್ಲಿ ಕೇಂದ್ರ ಗೃಹ ಮಂತ್ರಿ ಅಮಿತ್ ಷಾ ಅವರು ನಕ್ಸಲರನ್ನು ಮುಖ್ಯವಾಹಿನಿಗೆ ಕರೆತಂದಿರುವುದು ಅವರಿಗೆ ನೆನಪಿಲ್ಲ. ನಕ್ಸಲ್ ಬೇಡಿಕೆಗಳನ್ನು ಪರಿಗಣಿಸಿ ಅವರ ಬೇಡಿಕೆ ಪರಿಗಣಿಸುವುದಾಗಿ ಹೇಳಿರುವುದು ಸುನಿಲ್‌ಕುಮಾರ್ ಅವರಿಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದರು.

ನಕ್ಸಲರ ವಿಚಾರಗಳನ್ನು ಮುಂದುಮಾಡಿ ರಾಜಕಾರಣ ಮಾಡುವ ಇಂತಹ ರಾಜಕೀಯ ನೈತಿಕತೆಯಿಲ್ಲದ ಸುನೀಲ್ ಕುಮಾರ್ ಅವರ ಹೇಳಿಕೆಯನ್ನು ಖಂಡಿಸುತ್ತೇವೆ. ದತ್ತಪೀಠದ ವಿಚಾರದಲ್ಲಿ ಕೆಟ್ಟ ರಾಜಕಾರಣ ಮಾಡಿದ್ದನ್ನು ಈ ಜಿಲ್ಲೆ ಯಾವತ್ತಿಗೂ ಮರೆಯುವುದಿಲ್ಲ. ಇವರಿಗೆ ನಕ್ಸಲರು ಇಂದು ರಾಜಕೀಯ ದಾಳದಂತೆ ಕಾಣುತ್ತಾರೆ ಎಂದು ದೂರಿದರು.

೧೯೭೨ರಲ್ಲಿ ಸಮಾಜವಾದಿ ಜಯಪ್ರಕಾಶ್ ನಾರಾಯಣ್ ಅವರು ಮಧ್ಯಪ್ರದೇಶದಲ್ಲಿ ಡಕಾಯಿತರ ಹಾವಳಿ ಹೆಚ್ಚಾದಾಗ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದರ ಜೊತೆಗೆ ಕೌಶಲ್ಯ ತರಬೇತಿಯನ್ನು ನೀಡಿ ಸಮಾಜಮುಖಿಯಾಗಿಸಬೇಕು ಎಂದು ಕರೆಕೊಟ್ಟಾಗ ಅಂದಿನ ಮುಖ್ಯಮಂತ್ರಿ ಅರ್ಜುನ್‌ಸಿಂಗ್ ಡಕಾಯಿತರನ್ನು ಶರಣಾಗತಿ ಮಾಡಿ ಸಮಾಜದ ಮುಖ್ಯ ವಾಹಿನಿಗೆ ತಂದಿರುವುದು ಚರಿತ್ರೆ ಇದೆ ಎಂದರು.

ಹಾಗಾಗಿ ನಕ್ಸಲರನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದರ ಜೊತೆಗೆ ಅವರಿಗೆ ಕೌಶಲ್ಯ ತರಬೇತಿ ಹಾಗೂ ಈ ಸಮಾಜದಲ್ಲಿ ಬದುಕಬಹುದಾದ ಎಲ್ಲಾ ಅರ್ಹತೆಗಳನ್ನು ಎಲ್ಲಾ ಸರ್ಕಾರಗಳು ಒದಗಿಸುವುದು ಅವರ ಕರ್ತವ್ಯವಾಗಿರುತ್ತದೆ ಎಂದರು.

ಸುನೀಲ್ ಕುಮಾರ್ ಹೇಳಿಕೆಯನ್ನು ಯಾವ ಬಿಜೆಪಿಯ ನಾಯಕರು ಖಂಡಿಸದೇ ಇರುವುದನ್ನು ನೋಡಿದರೆ ಇವರು ಸಂವಿಧಾನ ವಿರೋಧಿಗಳಂತೆ ಕಾಣುತ್ತಾರೆ. ಹಾಗಾಗಿ ಪ್ರದೇಶ ಕಾಂಗ್ರೆಸ್ ಇಂತಹ ಬಿಜೆಪಿಯ ಇಬ್ಬಂದಿಯ ನಡೆಯನ್ನು ಕಂಡಿಸುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ವಿಜಯ್ ಕುಮಾರ್, ಪ್ರದೀಪ್, ಸಂತೋಷ್ ಲಕ್ಯಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net