ಸುನೀಲ ಹೆಗಡೆ ಭೇಟಿಯಾದ ಘೋಟ್ನೇಕರ್‌-ಬಿಜೆಪಿ ಸೇರ್ಪಡೆಗೆ ಅರ್ಜಿ

13HLY1
Published on

ವಿಜಯವಾಣಿ ಸುದ್ದಿಜಾಲ ಹಳಿಯಾಳ
ಈಗಾಗಲೇ ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ತೊರೆದಿರುವ ವಿಪ ಮಾಜಿ ಸದಸ್ಯ ಎಸ್.ಎಲ್.ಘೋಟ್ನೇಕರ್ ಬಿಜೆಪಿ ಸೇರಲು ಮುಂದಾಗಿದ್ದಾರೆ. ಸೋಮವಾರ ಅವರು ಸ್ಥಳೀಯ ಬಿಜೆಪಿ ನಾಯಕ, ಮಾಜಿ ಶಾಸಕ ಸುನೀಲ ಹೆಗಡೆ ಹಾಗೂ ಬಿಜೆಪಿ ಹಳಿಯಾಳ ಮಂಡಲ ಅಧ್ಯಕ್ಷ ಗಣಪತಿ ಕರಂಜೆಕರ್ ಅವರನ್ನು ಭೇಟಿಯಾಗಿ ತಾವು ಬಿಜೆಪಿ ಸೇರಲು ಉತ್ಸುಕರಾಗಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಅಽಕೃತವಾಗಿ ಮನವಿ ಅರ್ಜಿಯನ್ನೂ ಸಲ್ಲಿಸಿದ್ದಾರೆ.
ಪಟ್ಟಣದ ಅಳ್ನಾವರ ರಸ್ತೆಯಲ್ಲಿರುವ ಗಜಾನನ ಪೆಟ್ರೊಲ್ ಪಂಪ್ ಎದುರಿನ ಹೋಟೆಲ್‌ನಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಗಣಪತಿ ಕರಂಜೆಕರ್, ಪ್ರಧಾನ ಕಾರ್ಯದರ್ಶಿ ವಿ.ಎಂ. ಪಾಟೀಲ, ಜಿಲ್ಲಾ ಮುಖಂಡ ಶಿವಾಜಿ ನರಸಾನಿ ಅವರನ್ನು ಘೋಟ್ನೇಕರ್ ಭೇಟಿಯಾಗಿ ಅರ್ಜಿ ಸಲ್ಲಿಸಿದರು. ಬಳಿಕ ಅವರು ಗಣಪತಿ ದೇವಸ್ಥಾನದಲ್ಲಿ ಮಾಜಿ ಶಾಸಕ ಸುನೀಲ್ ಹೆಗಡೆ ಅವರನ್ನು ಭೇಟಿಯಾಗಿ ತಾವು ಬಿಜೆಪಿಗೆ ಸೇರ್ಪಡೆಯಾಗುವ ತಮ್ಮ ಇಂಗಿತ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶ್ರೀನಿವಾಸ ಘೊಟ್ನೇಕರ್, ಅಪ್ಪಾರಾವ್ ಪೂಜಾರಿ, ಯಲ್ಲಪ್ಪ ಮಾಲವಣಕರ್, ಸಂಜಯ ಪಾಟೀಲ ಇತರರು ಇದ್ದರು.
ಜಿದ್ದಾಜಿದ್ದಿ:
ರಾಜಕೀಯ ಬದ್ಧ ವೈರಿಗಳಾಗಿರುವ ಘೋಟ್ನೇಕರ್ ಹಾಗೂ ಸುನೀಲ ಹೆಗಡೆ ಭೇಟಿ ಹಳಿಯಾಳ ಕ್ಷೇತ್ರದಲ್ಲಿ ಸಂಚಲನ ಉಂಟು ಮಾಡಿದೆ. ಘೋಟ್ನೇಕರ್ ಹಳಿಯಾಳ ವಿಧಾನಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಎಂದು ವರ್ಷಗಳಿಂದ ಹೇಳುತ್ತ ಬಂದಿದ್ದಾರೆ. ಶಾಸಕ ಆರ್.ವಿ.ದೇಶಪಾಂಡೆ ವಿರುದ್ಧ ಸ್ಪರ್ಧಿಸುವ ಇಂಗಿತವನ್ನೂ ಹೊರ ಹಾಕಿದ್ದಾರೆ. ಆದರೆ, ಇದುವರೆಗೂ ಪಕ್ಷ ನಿರ್ಧಾರವಾಗಿಲ್ಲ. ಈಗ ಬಿಜೆಪಿ ಸೇರ ಬಯಸಿರುವುದಾಗಿ ಅಧಿಕೃತವಾಗಿ ಪ್ರಕಟಿಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿ ಸೇರ್ಪಡೆ ಅಽಕೃತವಾದರೆ ಸುನೀಲ ಹೆಗಡೆ ಹಾಗೂ ಘೋಟ್ನೇಕರ್ ನಡುವೆ ಬಿಜೆಪಿ ಟಿಕೆಟ್ ಫೈಟ್ ಏರ್ಪಡಲಿದೆ.

ಘೋಟ್ನೇಕರ್ ಅವರು ಭೇಟಿಯಾಗಿ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಪಕ್ಷಕ್ಕೆ ಯಾರನ್ನೇ ಸೇರಿಸಿಕೊಳ್ಳುವುದಿದ್ದರೂ ಹಲವು ನಿಯಮಗಳಿವೆ. ಅಲ್ಲದೆ, ಪಕ್ಷಕ್ಕೆ ಸೇರಿಸಿಕೊಳ್ಳುವುದು, ಬಿಡುವುದು ಹೈಕಮಾಂಡ್ ಬಿಟ್ಟ ವಿಚಾರ ಎಂದು ಅವರಿಗೆ ತಿಳಿಸಿದ್ದೇನೆ. ಹೈಕಮಾಂಡ ಆದೇಶದಂತೆ ಕಾರ್ಯನಿರ್ವಹಿಸಲಿದ್ದೇನೆ.
ಸುನೀಲ ಹೆಗಡೆ
ಮಾಜಿ ಶಾಸಕ, ಬಿಜೆಪಿ ನಾಯಕ

……..

ಬಿಜೆಪಿ ಸೇರ ಬಯಸಿ ಆ ಪಕ್ಷದ ಎಲ್ಲ ಹಿರಿಯ ನಾಯಕರನ್ನು ಭೇಟಿಯಾಗಿದ್ದೇನೆ. ಪಕ್ಷದ ನಿಯಮಾವಳಿಯಂತೆ ಸ್ಥಳೀಯ ಅಧ್ಯಕ್ಷರಿಗೆ ಅರ್ಜಿ ಸಲ್ಲಿಸಬೇಕು. ನಂತರ ತಮ್ಮ ವಿಚಾರ ಸ್ಪಷ್ಟಪಡಿಸುತ್ತೇವೆ ಎಂದು ಅವರು ತಿಳಿಸಿದ್ದರು. ಹಾಗಾಗಿ ಬಿಜೆಪಿ ಹಳಿಯಾಳ ಅಧ್ಯಕ್ಷರು ಹಾಗೂ ಸುನೀಲ ಹೆಗಡೆ ಅವರನ್ನು ಭೇಟಿಯಾಗಿ ಅರ್ಜಿ ಮಾಡಿದ್ದೇನೆ. ಸೇರಿಸಿಕೊಳ್ಳುವ ವಿಚಾರ ಮುಂದೆ ಬಿಜೆಪಿ ಹೈಕಮಾಂಡ್‌ಗೆ ಬಿಟ್ಟಿದ್ದು. ಈಗಾಗಲೇ ಜೆಡಿಎಸ್‌ಗೆ ಸೇರ್ಪಡೆಯಾಗುವಂತೆ ಸಾಕಷ್ಟು ಬಾರಿ ಆಹ್ವಾನ ಬರುತ್ತಿದೆ. ನನ್ನನ್ನು ನಂಬಿರುವ ಕ್ಷೇತ್ರದ ಕಾರ್ಯರ್ತರಿಗೆ, ಮುಖಂಡರಿಗೆ ನಿರ್ಧಾರ ಪ್ರಕಟಿಸಬೇಕಿದೆ.
ಎಸ್.ಎಲ್.ಘೋಟ್ನೇಕರ್
ಮಾಜಿ ಎಂಎಲ್‌ಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net