

ಬೆಳ್ತಂಗಡಿ: ಪಟ್ಟಣ ಪಂಚಾಯಿತಿ 8ನೇ ವಾರ್ಡ್ ಸುಧೆಮುಗೇರು ಎಂಬಲ್ಲಿ 11 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, ಈ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಸುಧಾಕರ್ ತಿಳಿಸಿದ್ದಾರೆ.
ಇಲ್ಲಿನ ಸಂಪರ್ಕ ರಸ್ತೆಗಳನ್ನು ಮುಚ್ಚಲಾಗಿದೆ. ಜನ ಮನೆಗಳಿಂದ ಹೊರಬರದಂತೆ ಸೂಚನೆ ನೀಡಲಾಗಿದೆ. ಹೊರಗಿನ ಜನರಿಗೆ ಪ್ರವೇಶ ನಿರಾಕರಿಸಲಾಗಿದೆ. ಸೋಂಕು ದೃಢಪಟ್ಟವರನ್ನು ಲಾಯಿಲ ಕೊರೊನಾ ಕೇರ್ ಸೆಂಟರ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಸುಧೆಮುಗೇರು ಮತ್ತು ಹುಡ್ಕೋ ರಸ್ತೆಯ 50 ಮನೆಗಳಿಗೆ ಶನಿವಾರ ಬೆಳಗ್ಗೆ ಸ್ಯಾನಿಟೈಸ್ ಸಿಂಪಡಿಸಲಾಗಿದೆ. ವಾರ್ಡ್‌ನ ಎಲ್ಲರಿಗೂ ಗಂಟಲು ದ್ರವ ಪರೀಕ್ಷೆ ನಡೆಸುತ್ತಿದ್ದು, ಮನೆಮನೆಗೆ ತೆರಳಿ ಮೂಗಿನ ಹಾಗೂ ಗಂಟಲಿನ ದ್ರವ ಸಂಗ್ರಹಿಸಲಾಗಿದೆ ಎಂದು ಮುಖ್ಯಾಧಿಕಾರಿ ತಿಳಿಸಿದ್ದಾರೆ.
ವಾರ್ಡಿನ ಸದಸ್ಯ ಜಗದೀಶ್ ಡಿ, ಆರೋಗ್ಯ ಇಲಾಖೆಯ ಗಿರೀಶ್, ಪಟ್ಟಣ ಪಂಚಾಯಿತಿ ಇಂಜಿನಿಯರ್ ಮಹಾವೀರ ಅರಿಗ, ಲಕ್ಷೀನಾರಾಯಣ, ಕರುಣಾಕರ, ಅಶೋಕ್ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.