ಸುಧಾ‘ಕರ’ ಹಿಡಿತಕ್ಕೆ ಮತ್ತೆ ಡಿಸಿಸಿ ಬ್ಯಾಂಕ್

CTD DCC BANK....
Published on


ಚಿತ್ರದುರ್ಗ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷರಾಗಿದ್ದ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮತ್ತೆ ಬ್ಯಾಂಕ್ ಆಡಳಿತದ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಹಾಗೂ ಅಧ್ಯಕ್ಷರಾಗಿ ಅವರೇ ಮತ್ತೆ ಆಯ್ಕೆಯಾಗುವ ಸಾಧ್ಯತೆ ಅಧಿಕವಾಗಿದೆ.
ಬ್ಯಾಂಕಿನ 12 ನಿರ್ದೇಶಕರ ಸ್ಥಾನಗಳಿಗೆ ಸೆ.12ರಂದು ಚುನಾವಣೆ ನಿಗದಿಯಾಗಿತ್ತು. ಸುಧಾಕರ್ ಸೇರಿ 7 ಜನರು ಅವಿರೋಧವಾಗಿ ಆಯ್ಕೆಯಾಗಿದ್ದರು. ಗುರುವಾರ ಉಳಿದ 5 ಸ್ಥಾನಗಳಿಗೆ ಮತದಾನ ನಡೆದು, ಸಂಜೆ ಫಲಿತಾಂಶ ಪ್ರಕಟವಾಯಿತು.
ಡಿ.ವರ್ಗ-ಹಿರಿಯೂರು, ಮೊಳಕಾಲ್ಮೂರು, ಚಳ್ಳಕೆರೆ ತಾಲೂಕುಗಳನ್ನು ಒಳಗೊಂಡಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಪಿ.ವಿನೋದಾಸ್ವಾಮಿ 3 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಪ್ರತಿಸ್ಪರ್ಧಿ ಎಂ.ಭಾರತಿ 2 ಮತಗಳನ್ನು ಪಡೆದು ಸೋಲುಂಡರು. ಎಫ್ ವರ್ಗ-ಇತರೆ ಸಹಕಾರ ಸಂಘಗಳ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಂ.ನಿಶಾನಿ ಜಯಣ್ಣ 8 ಮತ ಪಡೆದು ಗೆಲುವು ದಾಖಲಿಸಿದರೆ, ಪ್ರತಿಸ್ಪರ್ಧಿ ಬಿ.ಸಿ.ಸಂಜೀವ್‌ಮೂರ್ತಿ 2 ಮತ ಪಡೆದರು.
ಎ-ವರ್ಗ ಮೊಳಕಾಲ್ಮೂರು ತಾಲೂಕಿನಿಂದ ಎಚ್.ಟಿ.ನಾಗಿರೆಡ್ಡಿ 6 ಮತ ಪಡೆದು ಗೆದ್ದಿದ್ದರೆ, ಪ್ರತಿಸ್ಪರ್ಧಿ ಜಿ.ಬಸವರಾಜ್‌ಗೆ 5 ಮತ ಬಂದಿವೆ. ಚಿತ್ರದುರ್ಗದಿಂದ ಎಚ್.ಎಂ.ದ್ಯಾಮಣ್ಣ 10 ಮತ ಪಡೆದು ಗೆದ್ದಿದ್ದು, ಪ್ರತಿಸ್ಪರ್ಧಿಗಳಾದ ಟಿ.ಪಿ.ಅನೂಪ್ 4, ಬಿ.ಮಂಜುನಾಥ್ ಶೂನ್ಯದ ಮೂಲಕ ಠೇವಣಿ ಕಳೆದುಕೊಂಡಿದ್ದಾರೆ. ಹೊಸದುರ್ಗದಿಂದ 10 ಮತ ಪಡೆದ ಕೆ.ಅನಂತ್ ಗೆಲುವಿನ ನಗೆ ಬೀರಿದ್ದು, ಪ್ರತಿಸ್ಪರ್ಧಿ ಎಚ್.ಬಸವರಾಜ್ 6 ವೋಟ್ ಪಡೆದಿದ್ದಾರೆ.
ಎ.ವರ್ಗ ಚಳ್ಳಕೆರೆಯಿಂದ ಸಚಿವ ಡಿ.ಸುಧಾಕರ್, ಹೊಳಲ್ಕೆರೆಯಿಂದ ಎಸ್.ಆರ್.ಗಿರೀಶ್ (ಮಾಧುರಿ ಗಿರಿ), ಹಿರಿಯೂರಿಂದ ಒ.ಮಂಜುನಾಥ್, ಬಿ-ವರ್ಗ ತಾಲೂಕು ಕೃಷಿ ಉತ್ಪನ್ನ ಸಹಕಾರ ಸಂಘಗಳ ಕ್ಷೇತ್ರದಿಂದ ಎಚ್.ಬಿ.ಮಂಜುನಾಥ್, ಸಿ-ವರ್ಗ ವ್ಯವಸಾಯತೇರ ಮತ್ತು ಪಟ್ಟಣ ಸಹಕಾರ ಸಂಘಗಳಿಂದ ರಘುರಾಮರೆಡ್ಡಿ, ಇ-ವರ್ಗ ನೇಕಾರಿಕೆ ಸಹಕಾರ ಸಂಘಗಳಿಂದ ಕೆ.ಜಗಣ್ಣ, ಡಿ-ವರ್ಗ ಚಿತ್ರದುರ್ಗ, ಹೊಸದುರ್ಗ ಹಾಗೂ ಹೊಳಲ್ಕೆರೆ ತಾಲೂಕುಗಳನ್ನು ಒಳಗೊಂಡಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಪಿ.ತಿಪ್ಪೇಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದರು.
ಕೋರ್ಟ್ ವಿಚಾರಣೆ ಕಾರಣಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದ ತಿಪ್ಪೇಸ್ವಾಮಿ ಅವರ ಫಲಿತಾಂಶವನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿತ್ತು.
ಹದಿನೈದು ದಿನದೊಳಗೆ ಬ್ಯಾಂಕ್‌ಗೆ ಹೊಸ ಅಧ್ಯಕ್ಷರ ಆಯ್ಕೆಗೆ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ಚುನಾವಣಾಧಿಕಾರಿ, ಎಸಿ ಎಂ.ಕಾರ್ತಿಕ್ ತಿಳಿಸಿದ್ದಾರೆ. 2004ರಿಂದ ನಿರಂತರ ನಿರ್ದೇಶಕರಾಗುತ್ತಿರುವ ಡಿ.ಸುಧಾಕರ್ ಅವರು ಸುದೀರ್ಘ 2 ದಶಕಗಳಲ್ಲಿ ಎರಡು ಅವಧಿಗೆ ಅಧ್ಯಕ್ಷರಾಗಿ ಹಾಗೂ ತಲಾ ಎರಡೂವರೆ ವರ್ಷಗಳಂತೆ ಎರಡು ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಈಗ ಮತ್ತೊಂದು ಅವಧಿಗೆ ಅಧ್ಯಕ್ಷರಾಗುವ ಸಾಧ್ಯತೆ ಹೆಚ್ಚು ಇದೆ.
ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಬ್ಯಾಂಕ್ ಆವರಣದಲ್ಲಿ ಸಹಕಾರಿಗಳು ವಿಜಯೋತ್ಸವ ಆಚರಿಸಿದರು. ಚುನಾವಣೆ ಹಿನ್ನೆಲೆಯಲ್ಲಿ ಒ ನಕೆ ಓಬವ್ವ ಸರ್ಕಲ್ ಸೇರಿದಂತೆ ಬ್ಯಾಂಕ್ ಬಳಿ ಸಾಕಷ್ಟು ಬಂದೋಬಸ್ತ್ ಏರ್ಪಡಿಸಲಾಗಿತ್ತು. ನೂತನ ನಿರ್ದೇಶಕರನ್ನು ಬ್ಯಾಂಕ್ ಎಂಡಿ ಇಲ್ಯಾಸ್‌ಉಲ್ಲಾಷರೀಫ್ ಮತ್ತವರ ಅಧಿಕಾರಿ,ಸಿಬ್ಬಂದಿ ಹಾಗೂ ಸಹಕಾರಿಗಳು ಗೌರವಿಸಿದರು.

*ರಾಜಕೀಯ ಪ್ರೇರಿತವಲ್ಲ
ಸ್ವಪಕ್ಷೀಯ ಶಾಸಕ ಟಿ.ರಘುಮೂರ್ತಿ ಅವರು ಪ್ರತಿನಿಧಿಸಿದ್ದ ಚಿತ್ರದುರ್ಗ ತಾಲೂಕು ಕಡಬನಕಟ್ಟೆ ಸೊಸೈಟಿ ಅನರ್ಹ ಪಟ್ಟಿಯಲ್ಲಿತ್ತು. ಸಹಕಾರಿ ಕ್ಷೇತ್ರದಲ್ಲಿ ರಾಜಕೀಯವಿರಬಾರದು ಎಂದು ಸಚಿವ ಡಿ.ಸುಧಾಕರ್ ಹೇಳಿದರು. ಅರ್ಹ, ಅನರ್ಹ ಪಟ್ಟಿಯನ್ನು ಯಾವುದೇ ರಾಜಕೀಯ ಪ್ರೇರಿತವಾಗಿ ಸಿದ್ಧಪಡಿಸಿದ್ದಲ್ಲ. ವಹಿವಾಟು ವಿವರದ ಅಂಕಿ ಸಂಖ್ಯೆಗಳೇ ಪರಿಸ್ಥಿತಿಯನ್ನು ತಿಳಿಸುತ್ತವೆ.
ಚುನಾವಣೆ ನಡೆಯುವ ಆರೂವರೆ ತಿಂಗಳ ಮೊದಲೇ ಜಿಲ್ಲಾಧಿಕಾರಿ, ನಿಯಮಾನುಸಾರ ಪ್ರಕಟಿಸಿರುವ ಅರ್ಹ, ಅನರ್ಹ ಸೊಸೈಟಿಗಳ ಪಟ್ಟಿಗಳನ್ನು ಪ್ರಕಟಿಸುತ್ತಾರೆ. ಅದಕ್ಕೆ ಆಕ್ಷೇಪ ಸಲ್ಲಿಸಲು ಸಾಕಷ್ಟು ಸಮಯಾವಕಾಶವಿರುತ್ತದೆ ಎಂದ ಅವರು, ಗೆದ್ದಿರುವ ಎಲ್ಲರೂ ನಮ್ಮ ಬೆಂಬಲಿಗರೇ ಎಂದು ಹರ್ಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net