

ಜಮಖಂಡಿ : ಪತ್ರಕರ್ತರು ಅವಸರದಲ್ಲಿ ಸತ್ಯಾಸತ್ಯೆಯ ಪರಾಮರ್ಶೆ ಮಾಡದೆ ಸುದ್ದಿ ಕಳುಹಿಸಬಾರದು. ಮಾಹಿತಿ ಖಚಿತಪಡಿಸಿಕೊಂಡು ವರದಿ ಮಾಡಬೇಕು ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.
ನಗರದ ಬಾಗಲಕೋಟೆ ವಿಶ್ವವಿದ್ಯಾಲಯದಲ್ಲಿ ಪ್ರಸಾರಾಂಗ ವಿಭಾಗದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾಜ ಹಾಗೂ ಮಾಧ್ಯಮಗಳು ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸುದ್ದಿಯಲ್ಲಿ ಸತ್ಯಾಂಶ ಇಲ್ಲದಿದ್ದರೆ ವ್ಯಕ್ತಿಯ ಚಾರಿತ್ರೃ ಹರಣಕ್ಕೂ ಕಾರಣವಾಗುತ್ತದೆ. ದೃಶ್ಯ ಮಾಧ್ಯಮಗಳು ತೀರ್ಪು ನೀಡುವುದು ಸಲ್ಲ. ನೈಜ್ ಸುದ್ದಿಗಳನ್ನು ಮಾತ್ರ ಬಿತ್ತರಿಸಬೇಕು ಎಂದರು.
ಕೊಪ್ಪಳ ವಿವಿ ಕುಲಪತಿ ಡಾ. ಬಿ.ಕೆ. ರವಿ ಮಾತನಾಡಿ, ಪ್ರತಿಯೊಂದು ಮಾಧ್ಯಮಗಳಿಗೂ ಸಾಮಾಜಿಕ ಜವಾಬ್ದಾರಿ ಹೆಚ್ಚಿಸಿದೆ. ಅಲ್ಲದೆ, ಓದುಗರು ಹಾಗೂ ವೀಕ್ಷಕರ ವಿಶ್ವಾಸ ಎಂದಿಗೂ ಕಳೆದುಕೊಳ್ಳಬಾರದು ಎಂದರು.
ಬಾಗಲಕೋಟೆ ವಿವಿ ಕುಲಪತಿ ಆನಂದ ದೇಶಪಾಂಡೆ ಮಾತನಾಡಿ, ಸಮುದಾಯಕ್ಕೆ ಉಪಯುಕ್ತ ಮಾಹಿತಿ ನೀಡುವುದಾಗಬೇಕು. ಮಾಧ್ಯಮದ ನಾಗಾಲೋಟದಲ್ಲಿ ನಾವೆಲ್ಲರೂ ನಿತ್ಯವೂ ಕ್ರಿಯಾಶೀಲತೆ ಒಳಗೊಂಡಿರಬೇಕಾಗಿದೆ ಎಂದರು.
ವಿಶ್ರಾಂತ ಪ್ರಾಧ್ಯಾಪಕ ಎನ್.ನರಸಿಂಹಮೂರ್ತಿ ಮಾತನಾಡಿ, ಸರ್ಕಾರಿ ವಿವಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸಬೇಕು. ಆಳುವ ವರ್ಗ ಮಾಧ್ಯಮಗಳನ್ನು ವಿರೋಧ ಪಕ್ಷದವರಂತೆ ನೋಡಿಕೊಳ್ಳುತ್ತಿವೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿದವರೆಲ್ಲರೂ ಪತ್ರಿಕೆಗಳನ್ನು ನಿತ್ಯ ಓದುತ್ತಿದ್ದಾರೆ ಎಂದರು.
ಓಲೆಮಠದ ಆನಂದ ದೇವರು ಆಶೀರ್ವಚನ ನೀಡಿದರು. ತುಮಕೂರು ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಬಿ.ಟಿ. ಮುದ್ದೇಶ, ಮೈಸೂರಿನ ಡಾ. ಅಮ್ಮಸಂದ್ರ ಸುರೇಶ, ಕೃಷಿ ಹಾಗೂ ಅಭಿವೃದ್ಧಿ ಪತ್ರಿಕೋದ್ಯಮ ಕುರಿತು ಮಾತನಾಡಿದರು.
ಕುಲಸಚಿವ ದಯಾನಂದ ಸಾವಕಾರ, ಸಹ ಸಂಚಾಲಕ ಡಾ. ಆರ್. ನಾಗರಾಜ್, ಡಾ. ಮಲ್ಲಿಕಾರ್ಜುನ ಮರಡಿ, ಪ್ರೊ. ಮಲ್ಲಿಕಾರ್ಜುನ ಬಿದರಿ, ಶ್ವೇತಾ ಎಳಮಲಿ, ಡಾ. ಚಿದಾನಂದ ಢವಳೇಶ್ವರ ಇತರರು ಇದ್ದರು.